ಬೆಳ್ತಂಗಡಿ: ಕನ್ನಡದ ಖ್ಯಾತ ಸಾಹಿತಿ, ವೈಚಾರಿಕ ಚಿಂತಕ ಎ. ಎನ್ ಮೂರ್ತಿರಾಯರ ಕುರಿತ ಮಹತ್ವದ ಕೃತಿ ಜುಲೈ11 ರಂದು ಭಾನುವಾರ ಸಂಜೆ 4. ಗಂಟೆಗೆ ಬಿಡುಗಡೆಯಾಗಲಿದೆ.
ಖ್ಯಾತ ವಿಮರ್ಶಕ ಡಾ. ಚೇತನ ಸೋಮೇಶ್ವರ ಅವರ 'ಲೋಕ ರೂಢಿಯ ಮೀರಿ' ಕೃತಿಯನ್ನು ಬೆಂಗಳೂರಿನ 'ಬಹುರೂಪಿ' ಪ್ರಕಟಿಸಿದ್ದು ಖ್ಯಾತ ವಿದ್ವಾಂಸ ಪ್ರೊ.ಡಾ. ಬಿ. ಎ ವಿವೇಕ ರೈ ಅವರು ಬಿಡುಗಡೆ ಮಾಡಲಿದ್ದಾರೆ.
ಭಾನುವಾರ ಸಂಜೆ 4.00 ಗಂಟೆಗೆ ಝೂಮ್ ನಲ್ಲಿ ಹಮ್ಮಿಕೊಳ್ಳಲಾಗಿರುವ ಪುಸ್ತಕ ಬಿಡುಗಡೆಯಲ್ಲಿ ಹಿರಿಯ ಪತ್ರಕರ್ತ ಹಾಗೂ ವಿಮರ್ಶಕ ಜೋಗಿ ಅವರು ಕೃತಿಯ ಕುರಿತು ಮಾತನಾಡಲಿದ್ದಾರೆ.
ಹಿರಿಯ ವಿದ್ವಾಂಸ ಡಾ. ಕೆ ಚಿನ್ನಪ್ಪ ಗೌಡ, ಎಸ್ ಡಿ ಎಂ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ ಟಿ. ಎನ್ ಕೇಶವ ಹಾಗೂ ಅಭ್ಯುದಯ ಬರಹಗಾರ, ಅಂಕಣಕಾರ ನರೇಂದ್ರ ರೈ ದೇರ್ಲ, ಬಹುರೂಪಿಯ ಜಿ. ಎನ್ ಮೋಹನ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿರುತ್ತಾರೆ.
ವಿದ್ವಾಂಸ ಎ. ಎನ್ ಮೂರ್ತಿರಾಯರ ಸಾಂಸ್ಕೃತಿಕ ಚಿಂತನೆಯ ಬಗ್ಗೆ ಡಾ. ಕೆ ಚಿನ್ನಪ್ಪ ಗೌಡ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ಪ್ರೌಢ ಪ್ರಬಂಧ ಇದಾಗಿದ್ದು ಹಿರಿಯ ವಿದ್ವಾಂಸ ತಾಳ್ತಜೆ ವಸಂತ ಕುಮಾರ್ ಹಾಗೂ ಕೆ ಕೇಶವ ಶರ್ಮ ಅವರು ಈ ಕೃತಿಯ ಬಗ್ಗೆ ಮಹತ್ವದ ಟಿಪ್ಪಣಿಯನ್ನು ನೀಡಿದ್ದಾರೆ.
ಈ ಬಿಡುಗಡೆ ಸಮಾರಂಭದಲ್ಲಿ ನಾಡಿನಾದ್ಯಂತ ಪುಸ್ತಕ ಪ್ರಿಯರು, ಬರಹಗಾರರು, ವಿಮರ್ಶಕರು, ಅಧ್ಯಾಪಕ ವೃಂದ ಭಾಗವಹಿಸಲಿದೆ ಎಂದು ಬಹುರೂಪಿಯ ಪ್ರಕಟಣೆ ತಿಳಿಸಿದೆ.