ಬೆಳ್ತಂಗಡಿ : 2020 ರ ಜೂನ್ 26 ರಂದು ಉಜಿರೆಯ ಓಡಲ ನಿವಾಸಿ ಅಡಿಕೆ ವ್ಯಾಪಾರಿ ಅಚ್ಚುತ ಭಟ್ ಎಂಬವರ ಮನೆಗೆ ದರೋಡೆ ಮಾಡಿದ ಪ್ರಕರಣದಲ್ಲಿ ಲ ಬಂಧಿಸಲಾಗಿದ್ದ ಮುಂಡಾಜೆಯ ಕೂಳೂರು ನಿವಾಸಿ ರಿಯಾಝ್ ಎಂಬವರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲು ಯತ್ನ ನಡೆದಿದೆ ಎಂದು ಅವರ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು ಆ ಹಿನ್ನೆಲೆಯಲ್ಲಿ ರಿಯಾಝ್ ಅವರಿಗೆ ಜಾಮೀನಿನ ಮೂಲಕ ಬಿಡುಗಡೆಯಾಗಿದೆ.
ಈ ಪ್ರಕರಣದಲ್ಲಿ ದಾಖಲಾಗಿರುವ ದರೋಡೆಗೆ ಸಂಬಂಧಿಸಿದ ಐಪಿಸಿ ಕಲಂ 448, 327, 506, 394 ಅಡಿಗಳಲ್ಲಿ ಆರೋಪಿ ರಿಯಾಝ್ (40) ಎಂಬವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸುವಂತೆ ಆರೋಪಿ ಪರ ವಕೀಲರು ಮಾನ್ಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಈ ಪ್ರಕರಣವು ದೀರ್ಘಾವಧಿಯಲ್ಲಿ ಪತ್ತೆಯಾಗದ ಪ್ರಕರಣವಾಗಿದ್ದು ನ್ಯಾಯಾಲಯಕ್ಕೆ 'ಸಿ' ರಿಪೋರ್ಟ್ ಸಲ್ಲಿಕೆಯಾಗಿತ್ತು. ನಿರಪರಾಧಿಯಾಗಿದ್ದ ರಿಯಾಝ್ ಎಂಬವರನ್ನು ಈ ಪ್ರಕರಣದಲ್ಲಿ ಅನಗತ್ಯ ಸಿಲುಕಿಸಲಾಗಿದೆ ಎಂದು ಆರೋಪಿ ಪರ ವಕೀಲರು ನ್ಯಾಯಾಲಯದಲ್ಲಿ ಪ್ರಬಲ ವಾದ ಮಂಡಿಸಿದ್ದರು. ವಾದ ಪ್ರತಿವಾದವನ್ನು ಆಲಿಸಿದ ಮಾನ್ಯ ನ್ಯಾಯಾಲಯವು ಆರೋಪಿಯನ್ನು ಜೂ.1 ರಂದು ಶರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಳಿಸಿ ಆದೇಶಿಸಿದೆ.
ಆರೋಪಿಯ ಪರವಾಗಿ ಬೆಳ್ತಂಗಡಿ ಲೆಕ್ಸ್ ವಿಷನ್ ಲಾ ಚೇಂಬರ್ ನ ನ್ಯಾಯವಾದಿಗಳಾದ ನವಾಝ್ ಶರೀಫ್ ಎ, ಮಮ್ತಾಝ್ ಬೇಗಮ್, ಇರ್ಷಾದ್, ಸಪ್ನಾಝ್ ವಾದ ಮಂಡಿಸಿದ್ದರು.