ಬೆಳ್ತಂಗಡಿ; ಫೇಸ್‌ಬುಕ್ ಮೂಲಕ ಪರಿಚಯವಾದ ಪ್ರಿಯಕರನ ಜೊತೆ ಮುಂಡಾಜೆ ಗ್ರಾಮದ ಅಗರಿ ಎಂಬಲ್ಲಿನ ಗೃಹಿಣಿ ಯೊಬ್ಬರು ತನ್ನ ಮೂರು ವರ್ಷ ಪ್ರಾಯದ ಹೆಣ್ಣು ಮಗುವಿನ ಜೊತೆ ಮನೆ ಬಿಟ್ಟು ಇದೀಗ ತಮಿಳುನಾಡು ಸೇರಿದ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಘಟನೆ ಸಂಬಂಧಿಸಿದಂತೆ ಆಕೆಯ ಪತಿ ಇದೀಗ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು, ಪತ್ನಿ- ಮಗು ನಾಪತ್ತೆಯಾಗಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ನಾಪತ್ತೆಯಾದಾಕೆಯನ್ನು ಮುಂಡಾಜೆ ಗ್ರಾಮದ ಅಗರಿ ನಿವಾಸಿ ತೋಮಸ್ ಪಿ.ಡಿ ಅವರ ಪತ್ನಿ ನೀನು ಒ.ಎಸ್ (24ವ.) ಮತ್ತು ಅವರು ಮೂರು ವರ್ಷದ ಹೆಣ್ಣು ಮಗು ಇವನಾ ಮರಿಯಾ ತೋಮಸ್ ಎಂಬವರೆಂದು ಗುರುತಿಸಲಾಗಿದೆ.
ಜು.4ರಂದು ರಾತ್ರಿ 10 ಗಂಟೆಯ ಸಮಯ ಪತಿ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ ಯಾರಿಗೂ ವಿಚಾರ ತಿಳಿಸದೆ ಆಕೆ ನಾಪತ್ತೆಯಾಗಿದ್ದಾಳೆ ಎಂದು ದೂರಿನಲ್ಲಿ ನಮೂದಿಸಲಾಗಿದೆ.
ಈ ವಿಚಾರವಾಗಿ ಆಕೆಯ ಪತಿ ಸಂಬಂಧಿಕರಲ್ಲಿ, ಊರಿನವರಲ್ಲಿ ವಿಚಾರ ತಿಳಿಸಿ ಹುಡುಕಾಟ ನಡೆಸಿದ್ದು ಇದುವರೆಗೂ ಆಕೆ ಮನೆಗೆ ಮರಳಿ ಬಾರದೆ ನಾಪತ್ತೆಯಾಗಿರುತ್ತಾರೆ ಎಂದು ಪತಿ ಹೇಳುತ್ತಾರೆ.
ಆದರೆ ಆಕೆ ತನ್ನ ಪ್ರಿಯಕರನ ಜೊತೆ ತೆರಳಿರುವುದು ಇದೀಗ ಬಹುತೇಕ ಖಚಿವಾಗಿದೆ.
ನೀನೂ ಒ.ಎಸ್ ಳಿಗೆ ಫೇಸ್‌ಬುಕ್ ಮೂಲಕ ಕೇರಲ ರಾಜ್ಯದ ಇಡುಕ್ಕಿ ಜಿಲ್ಲೆ ಕೊನ್ನತ್ತಾಡಿ ಚಿನ್ನಾರ್ ಮನಕುವ ಗ್ರಾಮದ ಅರುಣ್ ತಂಗಚ್ಚನ್ ಎಂಬಾತನ ಜೊತೆ ಸ್ನೇಹಸಂಬಂಧವಿತ್ತು. ಆಕೆ ಇದೀಗ ಪತಿಯನ್ನು ತ್ಯಜಿಸಿ ಆತನ ಜೊತೆ ಸೇರಿಕೊಂಡಿದ್ದಾಳೆ.
ಮೂಲತಃ ಕೇರಳ ರಾಜ್ಯದವಳೇ ಆಗಿರುವ ಯುವತಿ ನೀನು ಮುಂಡಾಜೆ ಗ್ರಾಮದ ಅಗರಿ ತೋಮಸ್ ಪಿ.ಡಿ ಅವರಿಗೆ ವಿವಾಹ ವಾಗಿ ಬಂದಿದ್ದರು. ಆರಂಭದಲ್ಲಿ ಸುಖ ದಾಂಪತ್ಯ ನಡೆಸಿದ್ದ ದಂಪತಿಗೆ ಹೆಣ್ಣು ಮಗುವೊಂದು ಜನಿಸಿತ್ತು. ಈ ಮಧ್ಯೆ ಫೇಸ್‌ಬುಕ್ ಮೂಲಕ ಇಡುಕ್ಕಿಯ ಅರುಣ್ ಎಂಬಾತನ ಜೊತೆ ಸ್ನೇಹಾಚಾರ ಬೆಳೆದಿತ್ತು. ಈ ವಿಚಾರ ಇದೀಗ ಬಹಿರಂಗವಾಗುತ್ತಿರುವಂತೆ ಆಕೆ ಆತನ ಜೊತೆಯೇ, ಪತಿ ಮನೆಬಿಟ್ಟು ತೆರಳಿದ್ದಾಳೆ ಎಂದು ತಿಳಿದುಬಂದಿದೆ.
ಆಕೆಗೆ ಫೋನ್ ಕರೆ ಮಾಡಿದರೆ ಅರುಣ್ ಸ್ವೀಕರಿಸುತ್ತಿದ್ದಾನೆ ಎಂದೂ ಹೇಳಲಾಗಿದೆ.
ಅಲ್ಲದೆ ಮೊಬೈಲ್ ಕೇರಳ ಬಾರ್ಡರ್ ದಾಟಿ ತಮಿಳುನಾಡು ಕೊಯಂಬತ್ತೂರು ಪ್ರದೇಶದಲ್ಲಿ ಇರುವಿಕೆ ತೋರಿಸಿದೆ. ತಮಿಳು ಭಾಷೆಯಲ್ಲಿ ಕಾಲರ್ ಟ್ಯೂನ್ ಸಂದೇಶವೂ ಕೇಳಿಸುತ್ತಿದೆ.