ಬೆಳ್ತಂಗಡಿ: ಪುತ್ತೂರು ತಾಲುಕಿನ ಕಬಕ ಗ್ರಾಮದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದ ಶೋಭಾಯಾತ್ರೆಗೆ ಎಸ್‌ಡಿಪಿಐ ಅವರು ಅಡ್ಡಿಪಡಿಸಿದ ಕ್ರಮ ಖಂಡನೀಯ. ಘಟನೆಗೆ ಸಂಬಂಧಿಸಿ ಈಗಾಗಲೇ ಬಂಧಿಸಲ್ಪಟ್ಟಿರುವ ಮೂರು ಮಂದಿಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಈ ಎಸ್‌ಡಿಪಿಐ ಅವರು ತಾಕತ್ತಿದ್ದರೆ ಅಪಘಾನಿಸ್ತಾನದಲ್ಲಿ ನಡೆಯುತ್ತಿರುವ ಮುಸ್ಲಿಂಮರ ಮೇಲಿನ ಅಮಾನುಷ ಕೃತ್ಯಗಳನ್ನು ಖಂಡಿಸಲಿ. ಅವರ ವಿರುದ್ಧ ಮಾತನಾಡಲಿ, ಹೋರಾಟ ಮಾಡಲಿ ಎಂದು ಶಾಸಕ ಹರೀಶ್ ಪೂಂಜ ಸವಾಲು ಹಾಕಿದರು.
ಬೆಳ್ತಂಗಡಿ ಪ್ರವಾಸಿ ಬಂಗಲೆಯಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ತಮ್ಮ ಕುಟುಂಬವನ್ನೂ ಲೆಕ್ಕಿಸದೆ ದೇಶಾಭಿಮಾನಕ್ಕಾಗಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದ್ದ ವೀರ ಸಾವರ್ಕರ್ ಅವರು ಅದೇ ಕಾರಣಕ್ಕೆ ಬಂಧಿಸಲ್ಪಟ್ಟು ಘೋರ ಕಾಲಪಾನಿಶಿಕ್ಷೆ ಅನುಭವಿಸಿದ್ದು ಸ್ವಾರ್ಥಕ್ಕಲ್ಲ. ಅವರ ಹೆಸರಿನಲ್ಲೇ ಸ್ವಾತಂತ್ರ್ಯ ವೀರ ಸಾವರ್ಕರ್ ಅಂತಲೇ ಇದೆ. ಅವರು ಸ್ವಾತಂತ್ರ್ಯ ಹೋರಾಟಕ್ಕೆ ಅನೇಕರಿಗೆ ಪ್ರೇರಣೆ ನೀಡಿ ಬಲಿದಾನವಾದವರು. ಅಂತವರ ವಿರುದ್ಧ ಈ ದೇಶದ ಗಾಳಿ, ನೀರು, ಆಹಾರ ಸೇವಿಸಿ ದೇಶಕ್ಕೇ ಅಗೌರವ ತೋರಿರುವ ಎಸ್‌ಡಿಪಿಐ ಅವರು ಎಸಗಿದ ಕೃತ್ಯ ಗಂಭೀರವಾದುದು. ಅಲ್ಲದೆ
ಕೊಡಗಿನಲ್ಲಿ, ಕರ್ನಾಟಕದಲ್ಲಿ ಅನೇಕ ಮಾರಣ ಹೋಮಗಳನ್ನು ನಡೆಸಿದ, ಕ್ರೈಸ್ತ ಸಮುದಾಯದ ವಿರುದ್ಧ ಅಮಾನುಷವಾಗಿ ನಡೆದುಕೊಂಡ ಟಿಪ್ಪು ಭಾವಚಿತ್ರ ಬಳಸಬೇಕು ಎಂದಿರುವ ಅಲ್ಲಿನ ಎಸ್‌ಡಿಪಿಐ ಬೆಂಬಲಿತ ಗ್ರಾ.ಪಂ ಸದಸ್ಯರ ನಿಜ ಬಣ್ಣ ಆಮೂಲಕ ಬಯಲಾಗಿದೆ.
ಅವರು ಅಶಾಂತಿ ನಿರ್ಮಿಸಲು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಎಂಬುದು ಮತ್ತೊಮ್ಮೆ ಈ ಮೂಲಕ ಸ್ಪಷ್ಟವಾಗಿದೆ. ಅವರ ಈ ಕೃತ್ಯವನ್ನು ಭಾರತೀಯ ಜನತಾ ಪಾರ್ಟಿ, ಹಿಂದೂ ಸಮಾಜ ಯಾವತ್ತೂ ಕ್ಷಮಿಸುವುದಿಲ್ಲ ಎಂದರು. ಕಳೆದ ಗ್ರಾ.ಪಂ ಚುನಾವಣಾ ಸಂದರ್ಭದಲ್ಲಿ ಬೆಳ್ತಂಗಡಿಯಲ್ಲೂ ಅವರು ವಿರೋಧಿ ರಾಷ್ಟ್ರದ ಪರ ಜೈಕಾರ ಕೂಗಿ, ದೇಶದ್ರೋಹ ಕೃತ್ಯವೆಸಗಿ ಜೈಲು ಸೇರಿದ್ದರು. ಸೆಟಲೈಟ್ ಕರೆಗಳು ಸ್ವೀಕಾರ ಆಗುತ್ತಿದ್ದುದರ ಬಗ್ಗೆಯೂ ಇತ್ತೀಚೆಗೆ ಮಾಜಿ ಶಾಸಕ ಇದ್ದಿನಬ್ಬ ಅವರ ಮೊಮ್ಮಗನ ಮನೆಯ ಮೇಲೆ ದಾಳಿಯಾಗಿ ಬಂಧನವಾಗಿದೆ. ಮತಾಂತರ ಆಗಿರುವವರು ನಡೆಸಿದ ಕೃತ್ಯ, ಇವುಗಳೂ ಸೇರಿ ದೇಶ ವಿರೋಧಿ ಕೆಸಗಳನ್ನು ಹತ್ತಿಕ್ಕುವ ಕೆಲಸ ಆಗಲಿದೆ. ಇವುಗಳೆಲ್ಲದರ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಶೀಘ್ರದಲ್ಲೇ ಎನ್.ಐ.ಎ ಘಟಕ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ
ಬಿಜೆಪಿ ಮಂಡಲದ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ಉಪಸ್ಥಿತರಿದ್ದರು.