ಬೆಳ್ತಂಗಡಿ; ಪಾರ್ಟ್ ಟೈಮ್ ಕೆಲಸ ಮತ್ತು ಪ್ರತಿದಿನ 3 ಸಾವಿರದಿಂದ 8 ಸಾವಿರ ರೂ ಗಳಿಸಬಹುದು ಎಂದು ವಾಟ್ಸ್ ಆಪ್ ಮೂಲಕ ನಂಬಿಸಿ ಬೆಳ್ತಂಗಡಿಯ ಗೃಹಿಣಿಯೊಬ್ಬರಿಂದ 3 ತಿಂಗಳ ಅಂತರದಲ್ಲಿ ಒಟ್ಟು 5.61 ಲಕ್ಷ ರೂ.ವಂಚಿಸಿದ ಪ್ರಕರಣ ನಡೆದಿದೆ.
ಬೆಳ್ತಂಗಡಿ ಚರ್ಚ್ ರಸ್ತೆ ಯ ಕಲ್ಕಣಿ ಮೊದಲ ತಿರುವು ರವಿಶಂಕರ್ ಡಿ.ಕೆ ಅವರ ಪತ್ನಿ ಪೂರ್ಣಿಮಾ ಎಂಬವರೇ ಈ ರೀತಿ ವಂಚನೆಗೊಳಗಾದವರು.
ಕಳೆದ ಜೂನ್ 28 ರಂದು 919324118159 ನೇ ನಂಬರಿನಿಂದ ಅಪರಿಚಿತ ವ್ಯಕ್ತಿಯೋರ್ವ ಮೆಸೆಜ್ ಕಳುಹಿಸಿದ್ದು, ಕಾರ್ತಿಕ್ ಅಮೇಜಾನ್ ಪಾರ್ಟ್ ಟೈಮ್‌ಗೆ ತುರ್ತಾಗಿ ರಿಕ್ರೂಟ್‌ಮೆಂಟ್ ಮಾಡುತ್ತಿದ್ದು , ನೀವು ಪ್ರತಿ ದಿನ ರೂ 3000-8000 ಗಳಿಸಿಬಹುದು ಇದಕ್ಕಾಗಿ ನೀವು ಈ ನಂಬರನ್ನು ಸಂಪರ್ಕಿಸಿ ಎಂದು ತಿಳಿಸಿದ ಪ್ರಕಾರ ಗೃಹಿಣಿ ಸಂಪರ್ಕಿಸಿದಾಗ ಲಿಂಕ್ ಒಂದನ್ನು ಕಳಿಸಿ ಬಳಿಕ ಹಂತಹಂತವಾಗಿ ವಂಚಿಸುತ್ತಾ ಬಂದಿದ್ದಾರೆ ಎಂದು ಆಕೆ ಇದೀಗ ಬೆಳ್ತಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಲಿಂಕ್ ಮೂಲಕ ನೊಂದಾವಣೆಗೊಂಡ ತಕ್ಷಣ ಅವರ ಖಾತೆಗೆ 100 ರೂ.ಜಮೆ ಆಗಿದ್ದು ನಂತರ ಅಪರಿಚಿತ ವ್ಯಕ್ತಿ ಕಳುಹಿಸಿದ ವೆಬ್ ಸೈಟ್‌ನಲ್ಲಿ ಒಂದೊಂದೇ ಟಾಸ್ಕ್ ನೀಡುತ್ತಾ ಹೋಗುತ್ತಿದ್ದರು.
200 ರೂ ಪಾವತಿಸುವಂತೆ ಕೇಳಿಕೊಂಡಿದ್ದು, ಗೃಹಿಣಿ ತನ್ನ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದ್ದರು.
ಅದಕ್ಕೆ ರೂ 23.12 ಕಮಿಶನ್ ಸೇರಿಸಿ ಇವರಿಗೆ ಮೇಸೆಜ್ ಕಳುಹಿಸಲಾಗಿತ್ತು.
ಬಳಿಕ ಹೀಗೇ ಎಂಟು ಟಾಸ್ಕ್ ಗಳ ಮುಖಾಂತರ ರೂ 1,21,324 / - ತನ್ನ ಸ್ನೇಹಿತರು ಹಾಗೂ ಸಂಬಂಧಿಕರಿಂದ ಪಡೆದು ಪಾವತಿಸಿದ್ದರು.
ಜು. 12ರಂದು 12ಸಾವಿರ ರೂ, ಸ್ನೇಹಿತರ ಕ್ರೆಡಿಟ್ ಕಾರ್ಡ್ ಮೂಲಕ 10ಸಾವಿರ ರೂ. ಪಾವತಿಸಿದ್ದರು. ಬಳಿಕ ಅವರ ಮೇಲೆ ವಿಶ್ವಾಸವಿರಿಸಿ 85, 707 ರೂ., 2,54,506 ರೂ., 78,000 ರೂ., ಹೀಗೆ ಒಟ್ಟು 5,61,537 ರೂ. ಗಳನ್ನು ಖಾತೆಗೆ ವರ್ಗಾಯಿಸಿಕೊಂಡು ಯಾವುದೇ ಕಮಿಷನ್ ಕೊಡದೆ ವಂಚಿಸಲಾಗಿರುತ್ತದೆ ಎಂದು ವಿವರಿಸಿದ್ದಾರೆ.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಂ 419 , 420, ಕಲಂ . 66 ( ಡಿ ) , 66 ( ಸಿ ) ಮಾಹಿತಿ ತಂತ್ರಜ್ಞಾನ ಕಾಯ್ದೆ ಯಂತೆ ಅಪರಿಚಿತ ವಂಚಕನ ವಿರುದ್ಧ ಕೇಸು ದಾಖಲಾಗಿದೆ.ತನಿಖೆ ನಡೆಸಲಾಗುತ್ತಿದೆ.