ಬೆಳ್ತಂಗಡಿ: ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಚಾರ್ಮಾಡಿ ಕಣಿವೆ ರಸ್ತೆ ಪ್ರದೇಶ ಪ್ರಕೃತಿ ರಮಣೀಯತೆ ಹೆಚ್ಚಿಸಿಕೊಂಡಿದ್ದು ಸ್ವರ್ಗಲೋಕವೇ ಧರೆಗೆ ಇಳಿದಂತೆ ಭಾಸವಾಗುತ್ತಿದೆ. ಪುಟ್ಟ ಪುಟ್ಟ ನೂರಾರು ಜಲಪಾತಗಳು ಪ್ರಕೃತಿ ಪ್ರಿಯರ ಕಣ್ಣಿಗೆ ಹಬ್ಬದೂಟವನ್ನೇ ಉಣ ಬಡಿಸುತ್ತಿದೆ. ಹೀಗಾಗಿ ಇಲ್ಲಿಯ ರಸ್ತೆ ಮೂಲಕ ಹಾದು ಹೋಗುವವರು ಒಂದು ಬಾರಿ ವಾಹನ ನಿಲ್ಲಿಸಿ ವೀಕ್ಷಣೆಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ಕೆಲವು ಪ್ರವಾಸಿಗರು ಬಂದು ಪ್ರಕೃತಿಯ ಸೌಂದರ್ಯವನ್ನು ಸವಿದು ವಾಪಾಸ್ಸಾದ್ರೆ ಇನ್ನೂ ಕೆಲವರು ಮೋಜು ಮಸ್ತಿ ಮಾಡಿ ತೊಂದರೆ ನೀಡುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಇದೀಗ ಇಂತಹವರ ಮೇಲೆ ಕಣ್ಣಿಡಲು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹೈವೇ ಪಟ್ರೋಲ್ ಪೊಲೀಸ್ ವಾಹನ ಚಾರ್ಮಾಡಿ ಘಾಟ್ ನಲ್ಲಿ ಬೀಡು ಬಿಟ್ಟಿದೆ.
ಆ ಮೂಲಕ ಮೋಜು ಮಸ್ತಿ ಮಾಡುವವರ ಮೇಲೆ ನಿಗಾ ವಹಿಸಿದೆ.
ಪ್ರಕೃತಿ ಪ್ರಿಯರಿಂದ ಆಕ್ಷೇಪ;
ಪ್ರವಾಸೋದ್ಯಮ ಅವಕಾಶವನ್ನು ಮಾರುಕಟ್ಟೆ ಮಾಡಬೇಕಾದವರು ಈ ರೀತಿಯಾಗಿ ನಿರ್ಬಂಧಗಳನ್ನು ಹೇರಿರುವುದರ ಬಗ್ಗೆ ಸಹಜವಾಗಿಯೇ ಪ್ರಕೃತಿ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜನರಿಗೆ ತೊಂದರೆಯಾಗದಂತೆ ಪ್ರಕೃತಿ ವೀಕ್ಷಣೆ ಮಾಡುವುದನ್ನು ತಡೆಯಲು ಯಾರಿಗೂ ಅವಕಾಶವಿಲ್ಲ. ಆದರೆ ರಸ್ತೆಯಲ್ಲೇ ವಾಹನ ನಿಲ್ಲಿಸಿ ಇತರ ಪ್ರಯಾಣಿಕರಿಗೆ ತೊಂದರೆಯುಂಟು ಮಾಡಬಾರದು ನಿಜ. ಆದರೆ ಯಾತ್ರಾರ್ಥಿಗಳು ಇಲ್ಲಿ ವಾಹನವನ್ನೇ ನಿಲ್ಲಿಸಬಾರದು ಅಥವಾ ಪ್ರಾಕೃತಿಕ ಸೌಂದರ್ಯದ ಸವಿಯನ್ನು ಆಸ್ವಾಧಿಸಬಾರದು, ಫೋಟೋಗಳನ್ನು ತೆಗೆಯಬಾರದೆಂದರೆ ಅದು ಅವಕಾಶದ ಉಲ್ಲಂಘನೆಯಾಗುತ್ತದೆ ಎಂದು ಕೆಲವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.