ಬೆಳ್ತಂಗಡಿ; ಆನ್ಲೈನ್ ಕ್ಲಾಸ್‌ಗೆಂದು ಮೊಬೈಲ್ ಹಿಡಿದುಕೊಂಡು ಮನೆಯ ಕೊಠಡಿಯೊಳಗೆ ಹೋಗಿದ್ದ ಪದವಿ ತರಗತಿ ವಿದ್ಯಾರ್ಥಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ವೇಣೂರು ಠಾಣಾ ವ್ಯಾಪ್ತಿಯ ಕೊಕ್ರಾಡಿ ಜಂತಿಗೊಳಿ ಎಂಬಲ್ಲಿಂದ ವರದಿಯಾಗಿದೆ.
ಉಜಿರೆ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿ ರಕ್ಷಿತ್ ಎಂಬಾತನೇ ಕೃತ್ಯವೆಸಗಿಕೊಂಡವನು.
ರತ್ನಾಕರ ಮತ್ತು ರತ್ನಾ ದಂಪತಿಯ ಪುತ್ರನಾದ ರಕ್ಷಿತ್ ಬೆಳಿಗ್ಗೆ ಆನ್ ಲೈನ್ ಕ್ಲಾಸ್ ಎಂದು ಮನೆಯ ಕೊಠಡಿಯೊಳಗೆ ಬಾಗಿಲು ಹಾಕಿ ಕುಳಿತುಕೊಂಡಿದ್ದ.
ಮಧ್ಯಾಹ್ನ ಊಟಕ್ಕೆಂದು ತಾಯಿ ಕೂಗಿ ಕರೆದಾಗ ಪ್ರತಿಕ್ರಿಯೆ ಬಾರದೇ ಇದ್ದು ಆತ ಇದ್ದ ಕೋಣೆಯನ್ನು ಬಡಿದಿದ್ದು, ಬಾಗಿಲು ತೆರೆದಿರಲಿಲ್ಲ. ಬಳಿಕ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಬಳಿಕ ಕಿಟಕಿ ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ತಕ್ಷಣ ಗಾಬರಿಗೊಂಡು ಬೊಬ್ಬೆ ಹೊಡೆದಾಗ ಅಕ್ಕಪಕ್ಕದವರು ಓಡಿ ಬಂದು ಬಾಗಿಲು ಒಡೆದು ಒಳಹೋಗಿ ನೇಣಿನಿಂದ ಆತನನ್ನು ಕೆಳಗಿಳಿಸಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಈ ವೇಳೆ ರಕ್ಷಿತ್ ಮೃತಪಟ್ಟಿದ್ದ ಎಂದು ಹೆತ್ತವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ಇದೀಗ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡಸುತ್ತಿದ್ದಾರೆ.