ಬೆಳ್ತಂಗಡಿ : ಶ್ರೇಷ್ಠ ವ್ಯಕ್ತಿಗಳ ಸಾಧನೆಗೆ ಮಹಿಳೆಯರೇ ಸ್ಪೂರ್ತಿದಾಯಕರು. ಸನಾತನ ಸಂಸ್ಕೃತಿ ಮತ್ತು ಬಿಜೆಪಿ ತತ್ವ ಸಿದ್ಧಾಂತಗಳಿಂದ ಮಹಿಳೆಯರು ಬಿಜೆಪಿಯತ್ತ ಒಲವು ತೋರ್ಪಡಿಸಿದ್ದು ಪಕ್ಷಕ್ಕೆ ಶಕ್ತಿ ತುಂಬಿದೆ. ಕೊರೊನಾ ಸಂದರ್ಭದಲ್ಲಿ ಸಮಾಜ ಸೇವೆ ಮಾಡಿದ ಮಹಿಳಾ ಮೋರ್ಚಾದ ಕಾರ್ಯ ಅಭಿನಂದನೀಯ ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.
ಅವರು ಲಾಯಿಲ ಸುಬ್ರಹ್ಮಣ್ಯ ಸ್ಥಾನಿಕ ಸಭಾಭವನದಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ವಿದೇಶಾಂಗ ಸಚಿವೆಯಂತಹ ದೊಡ್ಡ ಹುದ್ದೆಯನ್ನು ನೀಡಿದ ಏಕೈಕ ಪಕ್ಷ ಬಿಜೆಪಿ. ಇಂದು ಜಿಲ್ಲೆಯಲ್ಲಿ ಅನೇಕ ಮಹಿಳೆಯರು ಬಿಜೆಪಿಯಲ್ಲಿ ಉನ್ನತ ಸ್ಥಾನವನ್ನು ಪಡೆದಿದ್ದು ಇದಕ್ಕೆ ನಮ್ಮ ಜಿಲ್ಲೆಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರೇ ಸಾಕ್ಷಿಯಾಗಿದ್ದಾರೆ. ಮಹಿಳಾ ಘಟಕವು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯ ಜೊತೆಗೆ ಸಮಾಜ ಸೇವೆಗೆ ಮುಂದಾಗಲಿ ಎಂದರು.
ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪ್ರಮಿಳಾ ಭಟ್, ಕುತ್ಲೂರು ರಾಮಚಂದ್ರ ಭಟ್ ದಂಪತಿಯನ್ನು, ಕುತ್ಲೂರು ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ೭೦೦ ಗಿಡ ನೆಟ್ಟು ಪೋಷಿಸಿದ ನಿಟ್ಟಿನಲ್ಲಿ ಸನ್ಮಾನಿಸಲಾಯಿತು.
ಹಾಗೂ ಲಾಕ್ ಡೌನ್ ಅವಧಿಯಲ್ಲಿ ೩೦೦ ಮಂದಿ ನಿರಾಶ್ರಿತರಿಗೆ ತಾಲೂಕು ಮಹಿಳಾ ಮೋರ್ಚ ಕಾರ್ಯದರ್ಶಿ ಮಮತಾ ಕೇಶವ್ ಅವರು ಊಟ, ಉಪಚಾರ ನೀಡಿರುವ ಸಲುವಾಗಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಸೇವಾಂತ ಶ್ರೀಯಾನ್, ಮಹಿಳಾ ಮೋರ್ಚ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಪ್ರಭಾರಿ ಪೂಜಾ ಪೈ, ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗಣೇಶ್ ನಾವುರ, ೯ಮಂಡಲದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಮಹಾನಗರ ಪಾಲಿಕೆ ಸದಸ್ಯೆ ಪೂರ್ಣಿಮ ಎಂ. ಸ್ವಾಗತಿಸಿದರು. ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೇವಂತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.