Posts

ದಿಡುಪೆಯ ಸುರೇಶ್ ನಾಯ್ಕ ಕೊಲೆ ಪ್ರಕರಣ: ಆರೋಪ ಸಾಬೀತು ಜು. 28 ರಂದು ಶಿಕ್ಷೆ ಪ್ರಕಟ

  
ಆರೋಪಿಗಳೊಂದಿಗೆ ಪೊಲೀಸ್ ತಂಡ
ಬೆಳ್ತಂಗಡಿ: ವಿವಾಹಿತ ವ್ಯಕ್ತಿಯೋರ್ವನು ಅಕ್ರಮವಾಗಿ ಏಕಮುಖ ರೀತಿಯಲ್ಲಿ ಪ್ರೀತಿಸುತ್ತಿದ್ದ ಯುವತಿ ಜೊತೆ ವಿವಾಹ ಸಂಬಂಧ ಕುದುರಿಸಿದ್ದಾನೆಂಬ ಕಾರಣಕ್ಕೆ ಸಂಪ್ರದಾಯಬದ್ಧವಾಗಿ ಆಕೆಯ ಕೈ ಹಿಡಿಯಬೇಕಾಗಿದ್ದ  ಮಧುಮಗನನ್ನು ಕಾರಿನಲ್ಲಿ ಕರೆದೊಯ್ದು ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದು ಅರೆಬರೆ ಸುಟ್ಟುಹಾಕಿ ರಸ್ತೆ ಬದಿ ಎಸೆದುಹೋದ ಪ್ರಕರಣದಲ್ಲಿ ಆರೋಪಿಗಳ ಕೃತ್ಯ ಸಾಬೀತಾಗಿದೆ.

ಮೃತ ವ್ಯಕ್ತಿ ಸುರೇಶ್ ನಾಯ್ಕ
ಇವರಿಗೆ ಶಿಕ್ಷೆಯನ್ನು ಜು.28 ರಂದು ಪ್ರಕಟಿಸುವುದಾಗಿ ಮಂಗಳೂರಿನ 1ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.

ಆ ಸಂಬಂಧ ಜು.23 ರಂದು ಸೆಷನ್ಸ್ ಕೋರ್ಟ್‌ಗೆ ಹಾಜರಾಗಿದ್ದ ಎಲ್ಲಾ ಆರು ಮಂದಿ ಆರೋಪಿಗಳನ್ನೂ ಪೊಲೀಸ್ ಕಷ್ಟಡಿಗೆ ಪಡೆದುಕೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಇದೀಗ ಮುಂದಿನ ತೀರ್ಪು ಹೊರ ಬರುವವರೆಗೆ ಮತ್ತೊಮ್ಮೆ ಅವರು ಜೈಲುಗಂಬಿ ಎಣಿಸುವಂತಾಗಿದೆ.

ಪಟ್ರಮೆ ರಸ್ತೆಯ ಬದಿ ಅಂದು ಅರೆ ಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೃತದೇಹ

ಕೊಲೆಯಾದ ಮಧುಮಗ ಯಾರು?

ಆರೋಪಿಗಳು ಯಾರ್ಯಾರು?

ಅಂದಿನ ಘಟನೆಯಲ್ಲಿ ಅಮಾನುಷವಾಗಿ ಕೊಲೆಯಾದ ಯುವಕ ಮಲವಂತಿಗೆ ಪಂಚಾಯತ್ ವ್ಯಾಪ್ತಿಯ ದಿಡುಪೆ ನಿವಾಸಿ ಸುರೇಶ್ ನಾಯ್ಕ (30ವ) ಎಂಬವರು.

ಅವರನ್ನು ಅಳದಂಗಡಿ ಸನಿಹದ ನಾವರ ನಿವಾಸಿ ಆನಂದ ನಾಯ್ಕ (39ವ.), ಬೆಳ್ತಂಗಡಿ ಪಟ್ಟಣದ ಕಸಬಾ ನಿವಾಸಿ ಪ್ರವೀಣ್ ನಾಯ್ಕ (39ವ.), ಚಾರ್ಮಾಡಿ  ಮಾರಿಗುಡಿ ಬಳಿ ನಿವಾಸಿ ವಿನಯ ಕುಮಾರ್ (34ವ.), ಮೂಡುಕೋಡಿ ನಿವಾಸಿ ಪ್ರಕಾಶ್ (35ವ.), ಬಂಟ್ವಾಳ ಪುದು ನಿವಾಸಿ ಲೋಕೇಶ್ (38ವ.) ಮತ್ತು ಮೇಲಂತಬೆಟ್ಟು ನಿವಾಸಿ ನಾಗರಾಜ (43ವ) ಎಂಬವರೇ ಆರು ಮಂದಿ ಒಟ್ಟು ಸೇರಿ ವ್ಯವಸ್ಥಿತವಾಗಿ ಕೊಲೆಗೈದವರು.

ಮುಂಡಾಜೆ ಗ್ರಾಮದ ರಸ್ತೆಯಲ್ಲಿ ಕಾರಿನೊಳಗೆಯೇ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ;

ವಿವಾಹಿತನಾಗಿದ್ದು ಪತ್ನಿ ಮಕ್ಕಳಿದ್ದ ನಾವರದ ಆನಂದ ನಾಯ್ಕ ಎಂಬಾತ  ಪರಿಚಯದ ಯುವತಿಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ. ಆ ಯುವತಿಯನ್ನು ಮದುವೆಯಾಗುವುದಾಗಿಯೂ ತೀರ್ಮಾನಿಸಿ ಆಕೆಯ ತಂದೆಯ ಬಳಿ ವಿಷಯವನ್ನೂ ತಿಳಿಸಿದ್ದ. ಆದರೆ ಇದು ನಡೆಯದ ಕಾರ್ಯವಾದುದರಿಂದ ಸಹಜವಾಗಿಯೇ  ಆಕೆಯ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಆಕೆಯ ಬಗೆಗಿನ ಹುಚ್ಚು ಪ್ರೀತಿ ಆತನನ್ನು ದುಷ್ಕೃತ್ಯಕ್ಕೆ ಪ್ರೇರೇಪಿಸಿತ್ತು. ಹೆತ್ತವರ ನಿರಾಕರಣೆಯಿಂದಾಗಿ ಆತ ಮನಸ್ಸಿನೊಳಗೆಯೇ ರೋಷವಿಟ್ಟುಕೊಂಡಿದ್ದ. 

ಈ ಮಧ್ಯೆ ಆಕೆಗೆ ದಿಡುಪೆ ನಿವಾಸಿ, ಅರ್ಹ ಕುಟುಂಬದ ಸರಳ ವ್ಯಕ್ತಿತ್ವದ ಸುರೇಶ್ ನಾಯ್ಕ ಅವರ ಜೊತೆ ಮದುವೆ ಮಾತುಕತೆ  ಏರ್ಪಟ್ಟಿತ್ತು. 2017ರ ಎಪ್ರಿಲ್ 30ರಂದು ನಿಶ್ಚಿತಾರ್ಥಕ್ಕೂ ದಿನ ನಿಗದಿಯಾಗಿತ್ತು. ಈ ವಿಷಯ ಭಗ್ನ ಪ್ರೇಮಿ ಆನಂದ ನಾಯ್ಕನ ಗಮನಕ್ಕೆ ಬಂದು ಆಯ ಯುವತಿಯ ಮನೆಯವರಲ್ಲಿ ಅದ್ಹೇಗೋ ಮಧುಮಗನ ಮೊಬೈಲ್ ನಂಬರ್ ಸಂಗ್ರಹಿಸಿ ಆತನಿಗೆ ಕರೆಮಾಡಿ ತಲೆತಿರುಗಿಸಲು ಪ್ರಯತ್ನಪಟ್ಟಿದ್ದ.

ಸುರೇಶ್ ನಾಯ್ಕನ ಜೊತೆ, ನೀನು ಮದುವೆಯಾಗುವ ಯುವತಿಯನ್ನು ನಾನು ಪ್ರೀತಿಸುತ್ತಿದ್ದು ಈ ಸಂಬಂಧವನ್ನು ಬಿಟ್ಟುಬಿಡು. ಇಲ್ಲದಿದ್ದರೆ ನಿನಗೆ ಅಪಾಯವಿದೆ ಎಂದೂ ಬೆದರಿಸುವ ತಂತ್ರವನ್ನೂ ಪ್ರಯೋಗಿಸಿದ್ದ. ಇದ್ಯಾವುದೂ ನಡೆಯದೇ ಇದ್ದಾಗ ಆತ ತಾನು ಬೆದರಿಸಿದಂತೆಯೇ ಖತರ್ನಾಕ್ ಐಡಿಯಾಕ್ಕೆ ಚಾಲನೆ ಕೊಟ್ಟಿದ್ದ. ಇದಕ್ಕಾಗಿ ಆತ ಸುರೇಶ್ ನಾಯ್ಕ ಅವರ ನಿಶ್ಚಿತಾರ್ಥದ ಹಿಂದಿನ ದಿನವನ್ನೇ ಮುಹೂರ್ತವಾಗಿ ಫಿಕ್ಸ್ ಮಾಡಿದ್ದ.

ಅಂತೆಯೇ  2017 ಜುಲೈ 29 ರಂದು ಪ್ರಕರಣದ ಎರಡನೇ ಆರೋಪಿ ಪ್ರವೀಣ್ ನಾಯ್ಕ ಎಂಬಾತನು ಸುರೇಶ್ ಗೆ ಕರೆ ಮಾಡಿ ಆತ್ಮೀಯವಾಗಿ ಮಾತನಾಡಿಸಿ, ಸರಕಾರದ ಗಂಗಾ ಕಲ್ಯಾಣ ಯೋಜನೆಯಡಿ ಹಣ ಸಿಗಲಿದೆ ಎಂದು ಆತನನ್ನು ನಂಬಿಸಿ ಉಜಿರೆಗೆ ಬರುವಂತೆ ಮಾಡಿದ್ದ. ಆತ ತಮ್ಮ ಕೈಗೆ ಸಿಗುತ್ತಿದ್ದಂತೆ ಅವರು ಸ್ಕೆಚ್ ಹೆಣೆದಂತೆ ಸುರೇಶ್ ನಾಯ್ಕ ಅವರನ್ನು ಓಮ್ನಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಬೆಳಾಲು ರಸ್ತೆ, ಕೊಯ್ಯೂರು ರಸ್ತೆ ಅಲ್ಲೆಲ್ಲಾ ಅತ್ತ ಇತ್ತ ಅಲೆದಾಡಿದ್ದರು.  ಕೊನೇಗೆ  ಮನೆ ಕಡೆ ದಾರಿಯಲ್ಲಿ ಮುಂಡಾಜೆ ದಿಡುಪೆ ರಸ್ತೆಯಲ್ಲಿ ಸೋಮಂತಡ್ಕ ಕ್ಕಿಂತ ಸ್ವಲ್ಪ ಮುಂದಕ್ಕೆ ಕಾರು ಹೋಗುತ್ತಿದ್ದಂತೆ ಹಗ್ಗದ ಸಹಾಯದಿಂದ ಹಿಂಬದಿಯಿಂದ ಕುತ್ತಿಗೆಗೆ ನೇಣು ಬಿಗಿದು ಉಸಿರುಗಟ್ಟಿಸಿ ಕಾರಿನ ಒಳಗೆಯೇ ಅವರನ್ನು ಕೊಲೆಗೈದಿದ್ದರು. ಆರೋಪಿಗಳಾದ ಪ್ರವೀಣ್ ನಾಯ್ಕ, ವಿನಯ್, ಪ್ರಕಾಶ್, ಲೋಕೇಶ್ ಮತ್ತು ನಾಗರಾಜ್ ಎಲ್ಲರೂ ಒಟ್ಟು ಸೇರಿ ಕೃತ್ಯವೆಸಗಿ ಬಳಿಕ ಮೃತದೇಹವನ್ನು ಏನು ಮಾಡುವುದೆಂದು ತೋಚದೆ ಮತ್ತೆ ಒಂದಿಷ್ಟು ದೂರ ಅಲೆದು ಕೊನೇಗೆ  ಪಟ್ರಮೆ-ಧರ್ಮಸ್ಥಳ ರಸ್ತೆಯಲ್ಲಿ ಹೋಗಿ ಅವೆಕ್ಕಿ ಎಂಬಲ್ಲಿನ ತಗ್ಗು ಪ್ರದೇಶದಲ್ಲಿ ರಸ್ತೆ ಬದಿ ಎಸೆದು ಮೃತದೇಹದ ಗುರುತು ಸಿಗದಂತಾಗಲು ಹಾಗೂ ಸಂಪೂರ್ಣ ಉರಿದು ಹೋಗಲೆಂದು ಗೋಣಿ ಚೀಲ ಸುತ್ತಿ ಅದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದರು. ಮೃತಪಟ್ಟ ವ್ಯಕ್ತಿಯ ಸೊತ್ತುಗಳನ್ನು ಕೊಯ್ಯೂರು ರಸ್ತೆಯ ಕಟ್ಟ ಎಂಬಲ್ಲಿ ಮೋರಿಯ ಕೆಳಗೆ ಎಸೆದು ಸುಟ್ಟು ಹಾಕಿದ್ದರು. 

ಸುರೇಶ್ ನಾಯ್ಕರ ದೇಹ ಅರೆ ಬರೆ ಸುಟ್ಟ ಸ್ಥಿತಿಯಲ್ಲಿ ಮರುದಿನ ಪಟ್ರಮೆ ರಸ್ತೆಯಲ್ಲಿ ಪತ್ತೆಯಾಗಿತ್ತು. ಪ್ರಕರಣವನ್ನು ಬೇಧಿಸಿದ್ದ ಪೊಲೀಸರು ಆರೂ ಮಂದಿ ಆರೋಪಿಗಳನ್ನು ಮೇ 4 ರಂದು ಬಂಧಿಸಿದ್ದರು. ಮಂಗಳೂರು ಫೊರೆನ್ಸಿಕ್ ಲ್ಯಾಬ್‌ನಲ್ಲಿ ಪೋಸ್ಟ್ ಮಾರ್ಟಂ ಮಾಡಲಾದ ಅಪರಿಚಿತ ಶವದ ಗುರುತು ಬಳಿಕ ಪತ್ತೆಯಾಗಿತ್ತು.

ನಾಪತ್ತೆಯಾಗಿದ್ದ ಸುರೇಶ್ ನಾಯ್ಕ ಅವರ ಪತ್ತೆಯ ಕಾರ್ಯದಲ್ಲಿ ಅಂದು ಅವರು ನಿಶ್ಚಿತಾರ್ಥಕ್ಕಾಗಿ ಖರೀದಿಸಿ ಪಕ್ಕದ ಮನೆಯ ಬಾಲಕನಿಗೆ ತೋರಿಸಿದ್ದ ಹೊಸ ಬೆಲ್ಟ್‌ನ ಸಹಾಯದಿಂದ ಆ ದೇಹ ಸುರೇಶ್ ಅವರದ್ದೆಂದು ಖಚಿತಗೊಂಡಿತ್ತು. ಇದಾದ ಬಳಿಕ ನಾಪತ್ತೆ ಪ್ರಕರಣ ಕೊಲೆ ಪ್ರಕರಣವಾಗಿ ಮಾರ್ಪಟ್ಟಿತ್ತು. ಎಲ್ಲ ಕಾನೂನು ಕಟ್ಟಳೆ ಬಳಿಕ ದಿಡುಪೆ ಮನೆಯಲ್ಲಿ ಸುರೇಶ್ ನಾಯ್ಕ ಅವರ ಅಂತ್ಯಸಂಸ್ಕಾರ ನೆರವೇರಿತ್ತು.

ಪ್ರಕರಣದ ಬಗ್ಗೆ ಆಗಿನ ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿದ್ದ ನಾಗೇಶ್ ಕದ್ರಿ ಅವರು ಸಮಗ್ರ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಅವರ ತಂಡದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರಾದ, ಆಗಿನ ಹೆಡ್ ಕಾನ್ಸ್‌ಟೇಬಲ್, ಈಗಿನ ಬಂಟ್ವಾಳ ಎಎಸ್‌ಐ  ವೆಂಕಟೇಶ್ ನಾಯ್ಕ, ಪ್ರವೀಣ್, ಸ್ಯಾಮುವೆಲ್, ಪ್ರಮೋದ್,  ಬೆನ್ನಿಚ್ಚನ್, ವಿಜು, ಚಾಲಕ  ಬುಡ್ಕಿ  ಸಹಿತ ಇತರ ಪೊಲೀಸ್ ಸಿಬ್ಬಂದಿಗಳು ತಮ್ಮ ಕ್ರಿಯಾತ್ಮಕ ಪೊಲೀಸ್ ಸೇವೆ ನೀಡಿದ್ದರು. ತಂಡಕ್ಕೆ ಆಗಿನ ಎಸ್.ಪಿ ಬೊರಸೆ, ಬಂಟ್ವಾಳ ಉಪ ವಿಭಾಗದಲ್ಲಿ ಡಿವೈಎಸ್‌ಪಿ ಆಗಿದ್ದ ರವೀಶ್ ಸಿ.ಆರ್ ಅವರು ಮಾರ್ಗದರ್ಶನ ನೀಡಿದ್ದರು.

ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ಅವರು ಪ್ರಕರಣದಲ್ಲಿ 33 ಮಂದಿ ಸಾಕ್ಷಿದಾರರ ವಿಚಾರಣೆ ನಡೆಸಿ ವಾದ ವಿವಾದದ ಬಳಿಕ ಆರೋಪಿಗಳ ಮೇಲಿನ ಆಪಾದನೆಯನ್ನು ಸಾಬೀತುಪಡಿಸಿ ಇದೀಗ ತೀರ್ಪು ನೀಡಿದ್ದಾರೆ. 

ಅದರಂತೆ ಅವರಿಗೆ ಶಿಕ್ಷೆಯ ಪ್ರಮಾಣವನ್ನು ಜು.28 ರಂದು ಪ್ರಕಟಿಸುವುದಾಗಿ ದಿನಾಂಕ ನಿಗದಿಗೊಳಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರಾಗಿದ್ದ ಎಲ್ಲರೂ ಇದೀಗ ಪೊಲೀಸ್ ಕಷ್ಟಡಿಗೆ ಒಳಗಾಗಿದ್ದಾರೆ. 

ಈ ಪ್ರಕರಣದಲ್ಲಿಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶೇಖರ್ ಶೆಟ್ಟಿ ವಾದಿಸಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official