ಬೆಳ್ತಂಗಡಿ: ರಾಜ್ಯ ಸರಕಾರ ಜಾರಿಗೊಳಿಸಿರುವ ಅನ್ ಲಾಕ್ 3.0 ಜು .19 ರಂದು ಕೊನೆಗೊಳ್ಳಲಿದೆ . ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ನೇತೃತ್ವದಲ್ಲಿ ರವಿವಾರ ಬೆಳಗ್ಗೆ ಸಚಿವರು ಮತ್ತು ಅಧಿಕಾರಿಗಳ ಉನ್ನತಮಟ್ಟದ ಸಭೆ ನಡೆದು ಮುಂದಿನ ಜು .26 ರಿಂದ ಪದವಿ ಕಾಲೇಜುಗಳಲ್ಲಿ ಭೌತಿಕ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಪಡೆದವರು ತರಗತಿಗಳಿಗೆ ಹಾಜರಾಗಲು ಅವಕಾಶ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ರಾತ್ರಿ ಕರ್ಪ್ಯೂ ಅವಧಿಯನ್ನು ಪರಿಷ್ಕರಿಸಲಾಗಿದ್ದು , ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ಮಾತ್ರ ಕರ್ಪ್ಯೂ ಇರಲಿದೆ . ಚಿತ್ರಮಂದಿರಗಳು ಮತ್ತು ರಂಗಮಂದಿರಗಳಲ್ಲಿ ಶೇಕಡ 50 ರಷ್ಟು ಆಸನಗಳ ಭರ್ತಿಯೊಂದಿಗೆ ಪ್ರದರ್ಶನ ಆರಂಭಿಸಲು ಅನುಮತಿ ನೀಡಲಾಗಿದೆ . ದೇವಸ್ಥಾನಗಳಲ್ಲಿ
ಜು .20 ರಿಂದ ಪೂಜೆ , ಪುನಸ್ಕಾರಕ್ಕೂ ಅವಕಾಶ ಮಾಡಿಕೊಡಲಾಗಿದೆ ಎಂದು ಸಭೆಯ ಬಳಿಕ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ : ಸಿ.ಎನ್.ಅಶ್ವತ್ ನಾರಾಯಣ್, ಅರವಿಂದ ಲಿಂಬಾವಳಿ , ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು .