ಸಾಂದರ್ಭಿಕ ಚಿತ್ರ
ಬೆಳ್ತಂಗಡಿ; ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ದಿಡುಪೆ- ಸಂಸೆ ರಸ್ತೆಯ ಸರ್ವೆ ಕಾರ್ಯಕ್ಕೆ ಅನುಮತಿ ನೀಡಲು ಸರ್ಕಾರದ ಮೇಲೆ ಒತ್ತಡ ಹಾಕಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಬೆಳ್ತಂಗಡಿ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಇತರ ಪ್ರದೇಶಗಳನ್ನು ಮರೆತಿರುವುದು ದುರಂತ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ದಿಡುಪೆ- ಸಂಸೆ ರಸ್ತೆ ಅಭಿವೃದ್ಧಿಯನ್ನು ಸ್ವಾಗತಿಸುತ್ತೇವೆ. ಆದರೆ ಶಾಸಕರು ಒಂದು ಕಣ್ಣಿಗೆ ಬೆಣ್ಣೆ , ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ಅನುಸರಿಸಿರುವುದು ಅತ್ಯಂತ ಖಂಡನೀಯ ಎಂದು ಸಂಘಟನೆಯ ಅಧ್ಯಕ್ಷ ವಸಂತ ನಡ , ಕಾರ್ಯದರ್ಶಿ ಜಯಾನಂದ ಪಿಲಿಕಲ , ಸಂಚಾಲಕ ಶೇಖರ್ ಲಾಯಿಲ ಹೇಳಿದ್ದಾರೆ. ಬೆಳ್ತಂಗಡಿ ತಾಲೂಕಿನ 9 ಗ್ರಾಮಗಳ ಹಲವಾರು ಪ್ರದೇಶಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಒಳಪಡುತ್ತಿದ್ದು , ಈ ಪ್ರದೇಶಗಳು ವಿದ್ಯುತ್, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದೆ ಎಂಬ ಸತ್ಯ ಬೆಳ್ತಂಗಡಿ ಶಾಸಕರಿಗೆ ಗೊತ್ತಿದ್ದರೂ ಇದರ ಬಗ್ಗೆ ಗಮನಹರಿಸಿಲ್ಲ. ಶಾಸಕರ ಈ ನಡೆ ಹಾಗೂ ಕುತ್ಲೂರಿನ ಆದಿವಾಸಿಗಳ ಮೇಲಿನ ವನ್ಯಜೀವಿ ಅರಣ್ಯ ಇಲಾಖೆಯ ದೌರ್ಜನ್ಯವನ್ನು ಪ್ರತಿಭಟಿಸಿ , ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಸಪ್ಟೆಂಬರ್ 21 ರಂದು ಮಂಗಳವಾರ ಮಧ್ಯಾಹ್ನ 2 ಘಂಟೆಗೆ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.