ಬೆಳ್ತಂಗಡಿ; ವಿದ್ಯೆ ಅಂದರೆ ಕೇವಲ ಅರಿವು ಮಾತ್ರವಲ್ಲ. ಅದು ಮಾನವನ ಸಮಗ್ರ ಅಭಿವೃದ್ಧಿಯ ಸಂಕೇತ ಕೂಡ. ವಿದ್ಯೆಯಿಂದ ವಿನಯ ಕೂಡ ಬರುತ್ತದೆ ಎಂದು ಉಜಿರೆ ರಬ್ಬರ್ ಸೊಸೈಟಿ ಉಪಾಧ್ಯಕ್ಷರೂ ಆಗಿರುವ ಹಿರಿಯ ಕೃಷಿಕ ಅನಂತ ಭಟ್ ಮಚ್ಚಿಮಲೆ ಹೇಳಿದರು.
ಅಂತಾರಾಷ್ಟ್ರೀಯ ಪಠ್ಯ ಕ್ರಮ (ಐಸಿಎಸ್) ಅಳವಡಿಸಿಕೊಂಡಿರುವ ತಾಲೂಕಿನ ಏಕೈಕ ಶಿಕ್ಷಣ ಸಂಸ್ಥೆ ಕ್ರೈಸ್ಟ್ ಅಕಾಡೆಮಿ ಮುಂಡಾಜೆ ಇಲ್ಲಿ ಡಿ.22 ರಂದು ನಡೆದ ಕ್ರೀಡಾ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಸ್ವಾಗತ ಮತ್ತು ಪ್ರಸ್ತಾವನೆ ನೆರವೇರಿಸಿದ ಪ್ರಾಂಶುಪಾಲರಾಗಿರುವ ಧರ್ಮಗುರು ಫಾ. ಡಿನ್ಸ್ ಆಂಟೊನಿ ಮಾತನಾಡಿ, ನಮ್ಮಸಂಸ್ಥೆಯಲ್ಲಿ ಕಲಿಕೆಯ ಜೊತೆಗೆ ಕ್ರೀಡೆ, ಕೌಶಲ್ಯ ವೃದ್ಧಿ, ಯೋಗ ಮೊದಲಾದ ಬಹುವಿಧ ಪ್ರಾಕಾರಗಳ ಬಗ್ಗೆ ಮಕ್ಕಳಿಗೆ ಅವಕಾಶ ನೀಡಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಫಾ. ಜೋನ್ಸ್ ಸಿಎಮ್‌ಐ, ಬ್ರದರ್ ಅಮಲ್ ಜೋಯ್ ಉಪಸ್ಥಿತರಿದ್ದರು.
ಕ್ರೀಡಾ ಕೂಟದ ಅಂಗವಾಗಿ ಶಾಲಾ ಧ್ವಜಾರೋಹಣ ಮತ್ತು ಪ್ರಾರ್ಥನೆ, ಪಥಸಂಚಲನ ಮತ್ತು ಅತಿಥಿಗಳಿಗೆ ಗೌರವ ರಕ್ಷೆ, ಕ್ರೀಡಾ ಜ್ಯೋತಿ ಮರವಣಿಗೆ, ಕ್ರೀಡಾಪಟುಗಳ ವೈವಿದ್ಯಮಯ ಪ್ರದರ್ಶನ, ಶಾಲಾ ಮಕ್ಕಳಿಂದ ಯೋಗ ಹಾಗೂ ಕರಾಟೆ ಪ್ರದರ್ಶನ, ನೃತ್ಯಗಳು ಆಕರ್ಷಕವಾಗಿ ಮೂಡಿ ಬಂದವು.
ಬಲೂನ್ ಗಳ ಗುಚ್ಚವನ್ನು ಗಾಳಿಯಲ್ಲಿ ತೇಲಿ ಬಿಡುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ದೊರೆಯಿತು.
ವಿನ್ಸೆಂಟ್ ಫರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿ, ಭವ್ಯಾ ರೈ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕ್ರೀಡಾ ಕೂಟ ನಡೆಯಿತು.
-------
ವರದಿ; ಅಚ್ಚು ಮುಂಡಾಜೆ