ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಕಾಪು ಚಡವು ಉಳ್ಳಾಲ್ತಿ ಕಟ್ಟೆ ಬಳಿ ನಿಯಂತ್ರಣ ತಪ್ಪಿದ ಮಿನಿ ಬಸ್ಸೊಂದು ಅಪಘಾತಕ್ಕೊಳಗಾಗಿ ಹಲವರಿಗೆ ಗಾಯಗಳಾಗಿವೆ.
ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆರಂಭಿಕ ಮಾಹಿತಿ ಬಂದಿದೆ. ಗಾಯಾಳುಗಳನ್ನು ಶಶಿ, ಜಲಾಧರ, ರಘು, ಬಸವರಾಜ್ ಮತ್ತು ಲೋಕ ಎಂದು ಗುರುತಿಸಲಾಗಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನಿಂದ ಇವರು ಶಬರಿಮಲೆಗೆ ಯಾತ್ರೆ ಹೊರಟವರಾಗಿದ್ದು ವಾಹನದಲ್ಲಿ ಒಟ್ಟು 21 ಜನ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ.
ಬಾಹನದ ಬ್ರೇಕ್ ಕೈ ಕೊಟ್ಟಿರುವುದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ಅಪಘಾತ ನಡೆದ ಜಾಗ ಇಳಿಜಾರಾಗಿದ್ದು, ವಾಹನದ ಬ್ರೇಕ್ ಕೈ ಕೊಟ್ಟಿದೆ ಎಂದು ತಿಳಿದೊಡನೆಯೇ ಅದರ ಚಾಲಕ ಪ್ರಸಂಗಾವಧಾನತೆ ಮೆರೆದಿದ್ದು ವಾಹನವನ್ನು ರಸ್ತೆ ಪಕ್ಕದ ಪೊದೆಯ ಕಡೆಗೆ ಚಲಿಸುವಂತೆ ಮಾಡಿ ನಿಯಂತ್ರಣಕ್ಕೆ ತಂದಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಒಂದು ಕಡೆ ಆಳ ಕಂದಕ, ಇನ್ನೊಂದೆಡೆ ವಿದ್ಯುತ್ ಕಂಬ ಇದ್ದು ಸ್ವಲ್ಪ ಎಚ್ಚರ ತಪ್ಪಿದ್ದರೂ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.
ಅಪಘಾತ ನಡೆದ ವಿವರ ಅರಿತ ಮುಂಡಾಜೆ ಗ್ರಾಪಂ ಸದಸ್ಯರಾದ ಗಣೇಶ ಬಂಗೇರ, ಜಗದೀಶ್ ನಾಯ್ಕ ಹಾಗೂ ಸಮಾಜಸೇವಕ ಸಚಿನ್ ಭಿಡೆ ಅವರುಗಳು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಇತರರೊಂದಿಗೆ ನೆರವಾದರು.
ಮೂರ್ನಾಲ್ಕು ಆಂಬುಲೆನ್ಸ್‌ಗಳು ಅಗಮಿಸಿ, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಹಾಗೂ ಸ್ಥಳೀಯರು ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈ ಗೊಂಡರು.