ಬೆಳ್ತಂಗಡಿ; ಅಕ್ಷರ ದಾಸೋಹ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಇಡೀ ರಾಜ್ಯದಾದ್ಯಂತ ಸಿಐಟಿಯು ನೇತೃತ್ವದ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯ ಸಮಿತಿಯ ಕರೆಯಂತೆ ಬೆಳ್ತಂಗಡಿ ತಾಲೂಕಿನಾದ್ಯಂತ ಪ್ರತಿಭಟನೆ ನಡೆಸಲಾಯಿತು.
ಪ್ರತೀ ಬಿಸಿಯೂಟ ನೌಕರರಿಗೆ ಲಸಿಕೆ ನೀಡುವ ಮೂಲಕ ಜೀವ ಉಳಿಸಬೇಕು , ಪರಿಹಾರ ನೀಡುವ ಮೂಲಕ ಜೀವ ರಕ್ಷಿಸಬೇಕು , ಎಪ್ರಿಲ್, ಮೇ ತಿಂಗಳ ವೇತನ ನೀಡಬೇಕು , ಜೂನ್ ತಿಂಗಳಿಂದ ವೇತನ ಕಡ್ಡಾಯವಾಗಿ ಜಾರಿ ಮಾಡಬೇಕು , ನಿವೃತ್ತಿ ವೇತನ ಜಾರಿಗೆ ತರಬೇಕು ,ಕೋವಿಡ್ 19 ಸೋಂಕಿನಿಂದ ಮರಣ ಹೊಂದಿದ ಬಿಸಿಯೂಟ ನೌಕರರಿಗೆ ಪರಿಹಾರ ನೀಡಬೇಕು ಮುಂತಾಗಿ ಒತ್ತಾಯಿಸಿ ಈ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಶಾಲೆ , ಮನೆಗಳ ಮುಂದೆ ಪೋಸ್ಟರ್ ಹಿಡಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಲಲಿತಾ ಮದ್ದಡ್ಕ, ತಮ್ಮ ಊರಿನ ಮಕ್ಕಳ ಹೊಟ್ಟೆ ತುಂಬಿಸುವ ಮಹಾನ್ ಕಾರ್ಯ ಮಾಡುವ ಅಕ್ಷರ ದಾಸೋಹ ನೌಕರರು ತಮ್ಮ ಮಕ್ಕಳನ್ನು ಉಪವಾಸ ಮಾಡುವ ಹಂತಕ್ಕೆ ತಲುಪಿದ್ದಾರೆ. ಆದರೂ ನಮ್ಮನಾಳುವ ಸರ್ಕಾರಗಳು ಮಾತ್ರ ಅಕ್ಷರ ದಾಸೋಹ ನೌಕರರ ಬಗ್ಗೆ ಮೌನವಾಗಿರುವುದು ಸರಿಯಲ್ಲ. ಕನಿಷ್ಠ ಸಮಾಜಿಕ , ಆರ್ಥಿಕ ಭದ್ರತೆಯನ್ನು ಒದಗಿಸಲು ಸಾಧ್ಯವಾಗದ ಸರ್ಕಾರಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದರು. ತಾಲೂಕಿನ ಕುವೆಟ್ಟು , ಹತ್ಯಡ್ಕ , ಅರಸಿನಮಕ್ಕಿ , ಶಿಶಿಲ , ಪುಂಜಾಲಕಟ್ಟೆ , ಉಜಿರೆ, ಲಾಯಿಲ , ನೆರಿಯ , ಬಾರ್ಯ , ಪುತ್ತಿಲ , ತೆಕ್ಕಾರು , ಕಣಿಯೂರು , ಮಚ್ಚಿನ , ಬೆಳ್ತಂಗಡಿ, ನಿಡ್ಲೆ , ನಾರಾವಿ , ವೇಣೂರು, ಪೆರಾಡಿ , ಪೆರಿಂಜೆ , ಕಳಿಯ , ಸವಣಾಲು , ನಡ , ನಾವೂರು , ಮಾಲಾಡಿ , ಮಿತ್ತಬಾಗಿಲು , ಮುಂಡಾಜೆ , ಪುದುವೆಟ್ಟು , ಕಳೆಂಜ , ನೆರಿಯ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಸಿಐಟಿಯು ತಾಲೂಕು ಅಧ್ಯಕ್ಷ , ನ್ಯಾಯವಾದಿ ಶಿವಕುಮಾರ್ ಎಸ್. ಎಂ , ಉಪಾಧ್ಯಕ್ಷ ಶೇಖರ್ ಲಾಯಿಲ, ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಕುಸುಮಾದರ್ , ಅಕ್ಷರ ದಾಸೋಹ ಉಪ ನಿರ್ದೇಶಕಿ ತಾರಕೇಸರಿ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯ ನೇತೃತ್ವವನ್ನು ಅಧ್ಯಕ್ಷೆ ಲಲಿತಾ ಮದ್ದಡ್ಕ , ಕಾರ್ಯದರ್ಶಿ ಸುಮಿತ್ರಾ ಹತ್ಯಡ್ಕ , ರಮಣಿ , ಉಷಾಲತಾ ಪುಂಜಾಲಕಟ್ಟೆ , ಶೋಭಾ , ಗೌರಿ , ಸುಮತಿ, ಶಾಂತಾ ಗುರುವಾಯನಕೆರೆ , ಕುಸುಮಾ ಉಜಿರೆ, ರೇವತಿ ಸರಳಿಕಟ್ಟೆ , ವಿಜಯ ಮುಗುಳಿ , ಪ್ರೇಮಾ ಕಿಲ್ಲೂರು , ಐರಿನ್ ಕುಂಟಿನಿ , ನೇತ್ರಾವತಿ ನಿಡ್ಲೆ ಮೊದಲಾದವರು ವಹಿಸಿದ್ದರು.