ಬೆಳ್ತಂಗಡಿ: ಚಿಕ್ಕಪ್ಪನ ಮನೆಯಲ್ಲಿ ರಾತ್ರಿ ಊಟ ಮುಗಿಸಿ ಮನೆಗೆ ವಾಪಾಸಾಗುತ್ತಿದ್ದ ಸಹೋದರರಿಬ್ಬರ ಮೇಲೆ ದಾರಿಮಧ್ಯೆ 3 ಬೈಕ್ ಗಳಲ್ಲಿಬಂದ ಆರು ಮಂದಿ ಅಪರಿಚಿತ ಯುವಕರ ತಂಡವೊಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಲ್ಲದೆ ಕೊಲೆಬೆದರಿಕೆಯೊಡ್ಡಿ ಪರಾರಿಯಾದ ಘಟನೆ ಮುಂಡಾಜೆ ಗ್ರಾಮದಲ್ಲಿ ಜೂ.27 ರಂದು ರಾತ್ರಿ ನಡೆದಿದೆ.
ಚೆನ್ನಿಗುಡ್ಡೆ ನಿವಾಸಿ ಮುಹಮ್ಮದ್ ಶರೀಫ್ ಅವರು ತನ್ನ ಪತ್ನಿ ಜೊತೆ ಚಿಕ್ಕಪ್ಪನಮನೆಗೆ ಹೋಗಿ ಅಲ್ಲಿ ಊಟ ಮುಗಿಸಿ ಚಿಕ್ಕಪ್ಪನ ಮಗ, ಸಹೋದರ ಶಕೀರ್ ಅವರೊಂದಿಗೆ ನಡೆದುಕೊಂಡು ಬರುತ್ತಿದ್ದಾಗ ಚೆನ್ನಿಗುಡ್ಡೆ ಮಂಜುಶ್ರೀ ಭಜನಾ ಮಂದಿರದ ಬಳಿ ತಲುಪಿದಾಗ ಮೂರು ಸ್ಕೂಟರ್‌ಗಳಲ್ಲಿ ಬಂದ ಆರು ಮಂದಿ ಯುವಕರು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಧರ್ಮಸ್ಥಳ ಠಾಣೆಯಲ್ಲಿ ದೂರು ನೀಡಲಾಗಿದೆ.
ಹಲ್ಲೆ ವೇಳೆ ಶಕೀರ್ ಅವರು ಅಪರಿಚಿತರ ಪೈಕಿ ಒಬ್ಬನ ಪರಿಚಯ ಸಿಕ್ಕಿ ಧನು ಯಾನೆ ದಿನೇಶ ಎಂದು ಕರೆದು, ಏಕೆ ನಮಗೆ ಹಲ್ಲೆ ನಡೆಸುತ್ತೀರಿ ಎಂಬುದಾಗಿ ಕೇಳಿದಾಗ ಆರೋಪಿಗಳು ಅವ್ಯಾಚ ಶಬ್ದಗಳಿಂದ ಬೈದು ಈಗ ಬದುಕಿದ್ದಿಯಾ ದೂರು ನೀಡಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಒಡ್ಡಿ ಓಡಿ ಹೋಗಿದ್ದಾರೆ ಎಂದು ವಿವರಿಸಿದ್ದಾರೆ.
ಘಟನೆ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಕಲಂ;143,147,148,341,354,323,324,504,506 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.