ಬೆಳ್ತಂಗಡಿ; ಧರ್ಮಸ್ಥಳ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್(59ವ.) ಅವರು ಸೇವಾಸಹಕಾರಿ ಸಂಘದ ಕಟ್ಟಡದ ಸಭಾಂಗಣದಲ್ಲೇ ಸೋಮವಾರ ನಿಗೂಢವಾಗಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಹಕಾರಿ ಸಂಘದ ವೃತ್ತಿ ಬದುಕಿನಲ್ಲಿ ಸುದೀರ್ಘ42 ವರ್ಷಗಳ ಸೇವೆ ಸಲ್ಲಿಸಿದ್ದ ಅವರು ಇದೇ ಮೇ ತಿಂಗಳ ಅಂತ್ಯದಲ್ಲಿ ನಿವೃತ್ತರಾಗಬೇಕಾದವರು ತಿಂಗಳ ಮೊದಲೇ ಸ್ವಯಂ ನಿವೃತ್ತಿಯ ಪತ್ರ ಬರೆದಿಟ್ಟು ದಿಢೀರ್ ಆತ್ಮಹತ್ಯೆ ನಿರ್ಧಾರಕ್ಕೆ ಏಕೆ ಬಂದರು ಎಂಬುದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸೋಮವಾರ ಏನಾಯ್ತು;
ರವಿವಾರದ ವಾರದ ರಜೆ ಮುಗಿಸಿದ್ದ ರವೀಂದ್ರನ್ ಅವರು ಸೋಮವಾರ ಬೆಳಿಗ್ಗೆ ಸೊಸೈಟಿಗೆ ಬೇಗ 7.30 ಗಂಟೆಗೆ ಬಂದವರು ಹಾಜರಿ ಪುಸ್ತಕದಲ್ಲಿ ಸಹಿ ಹಾಕಿದ್ದಾರೆ. ಆ ಬಳಿಕ ವಿಆರ್‌ಎಸ್ ಪತ್ರ ಬರೆದಿಟ್ಟು ಅದರಲ್ಲಿ ಸಂಘದ ಅಧ್ಯಕ್ಷರು 9.30 ಕ್ಕೆ ಸ್ವೀಕರಿಸಿರುವುದಾಗಿ ಮೊಹರು ಹಾಕಿದ್ದು ಕಾಣಸಿಗುತ್ತದೆ. ಇದೆಲ್ಲ ಬೆಳವಣಿಗೆಯ ನಂತರ ಅವರು ತನ್ನ ಕಚೇರಿ ಟೇಬಲ್ ಮೇಲೆ ಇರುವ ಕಂಪ್ಯೂಟರ್ ನಲ್ಲಿ ಶುಭವಾಗಲಿ ಎಂದೇನೋ ಬರೆದು ನೇರವಾಗಿ ಸಂಘದ ಮೇಲ್ಭಾಗದಲ್ಲೇ ಇರುವ ಸಭಾಂಗಣದ ಸ್ಕ್ರೀನ್ ಹಿಂದುಗಡೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಧ್ಯಾಹ್ನ ಕೃತ್ಯ ಬೆಳಕಿಗೆ;
ಸಿಇಒ ಅವರು ಕೆಲ ಹೊತ್ತಿನಿಂದ ಅವರ ಚೇಂಬರ್‌ನಲ್ಲಿ ಕಾಣುತ್ತಿರಲಿಲ್ಲ. ಅವರ ಹುಡುಕಾಟಕ್ಕಾಗಿ ಸಿಬ್ಬಂದಿ ಮೊಬೈಲ್‌ಗೆ ಕರೆ ಮಾಡಿದಾಗ, ಸೊಸೈಟಿಯ ಅಟಲ್ ಜಿ ಸಭಾಭವನದಲ್ಲಿ ಅವರ ಮೊಬೈಲ್ ರಿಂಗಿಣಿಸುವುದು ಕೇಳಿತ್ತು. ಅಲ್ಲಿ ಹೋಗಿ ಗಮನಿಸಿದಾಗ ಅವರು ನೇಣಿನಲ್ಲಿ ನೇತಾಡುತ್ತಿದ್ದರು. ಈ ಸ್ಥಳದಲ್ಲಿ ವಿಷದ ಬಾಟಲಿಯೂ ಪತ್ತೆಯಾಗಿದ್ದು, ಅವರು ವಿಷ ಸೇವಿಸಿ ಬಳಿಕ ನೇಣಿಗೆ ಕೊರಳೊಡ್ಡಿದರೇ ಅಥವಾ ವಿಷ ಸೇವಿಸುವ ತೀರ್ಮಾನ ಕೊನೇ ಗಳಿಗೆಯಲ್ಲಿ ಬದಲಿಸಿ ನೇಣುಹಾಕಿಕೊಂಡರೇ ಎಂಬುದು ತಿಳಿದುಬರಬೇಕಿದೆ.
ಬಳಿಕ ಸ್ಥಳಕ್ಕೆ ಧರ್ಮಸ್ಥಳ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವದ ಮಹಜರು ನಡೆಸಿ ದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಂದು ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸುವ ಪ್ರಕ್ರಿಯೆ ಮಾಡಲಾಗಿದೆ.
ಮೂಲತಃ ಧರ್ಮಸ್ಥಳ ಗ್ರಾಮದ ಬೋಳಿಯಾರು ನಿವಾಸಿಯಾಗಿರುವ ರವೀಂದ್ರನ್ ಅವರು ಪ್ರಸ್ತುತ ಕನ್ಯಾಡಿ ಗ್ರಾಮದ ನೇರ್ತನೆ ಎಂಬಲ್ಲಿ ನೆಲೆಸೆದ್ದರು.
ಸಾಕಷ್ಟು ಅನುಕೂಲಸ್ತರು, ವೃತ್ತಿ ಪ್ರಾಮಾಣಿಕರು;
ಮೃತ ರವೀಂದ್ರನ್ ಡಿ ಅವರು ಸಾಕಷ್ಟು ಅನುಕೂಲಸ್ಥರು. ತಂದೆ ತಾಯಿ ಮಾಡಿದ ಆಸ್ತಿ ಇದೆ. ಅವರಿಗೂ ಸ್ವಂತ ಭೂಮಿಯೂ ಇದೆ. ಓರ್ವೆ ಮಗಳನ್ನು ಮದುವೆ ಮಾಡಿಕೊಟ್ಟಿದ್ದು, ಇನ್ನೊಬ್ಬಾಕೆಗೆ ಪದವಿವರೆಗೆ ವಿದ್ಯಾಭ್ಯಾಸ ನೀಡಿದ್ದಾರೆ. ತನ್ನ 18 ವರ್ಷ ಪ್ರಾಯದಲ್ಲೇ ಹತ್ತನೇ ತರಗತಿ ಮುಗಿಸಿ ಖಾಸಗಿ ಕೆಲಸಕ್ಕೆ ಸೇರಿದ್ದ ಅವರ ಉದ್ಯೋಗ ನೈಪುಣ್ಯತೆಯನ್ನು ಗುರುತಿಸಿದ ಹಿರಿಯರೊಬ್ಬರು ಅವರನ್ನು ಸಹಕಾರಿ ಸಂಘದಲ್ಲಿ ಬರೆಯುವ ಕೆಲಸಕ್ಕೆ ನಿಯೋಜಿಸಿದ್ದರು. ಬಳಿಕ ಸುದೀರ್ಘ 42 ವರ್ಷಗಳ ಸೇವೆ ಪೂರ್ತಿಗೊಳಿಸಿದ ಅವರು ಪದೋನ್ನತಿಯನ್ನೂ ಹೊಂದಿಕೊಂಡುಪ್ರಸ್ತುತ ಸಿಇಒ ಆಗಿ ಮೇ.31 ರಂದು ನಿವೃತ್ತರಾಗುವವರಿದ್ದರು. ಮೃತರು ಸಂಘದಲ್ಲಿ ನಿತ್ಯನಿಧಿ ಸಂಗ್ರಾಹಕರಾಗಿರುವ ಪತ್ನಿ ಉಷಾ, ಇಬ್ಬರು ಹೆಣ್ಣು ಮಕ್ಕಳಾದ ಕಾವ್ಯ( ಮಡಿಕೇರಿಗೆ ವಿವಾಹ ಮಾಡಿಕೊಡಲಾಗಿದೆ) ಮತ್ತು ಕವನಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಅತ್ಯುತ್ತಮ ಸಂಘಟಕರು;
ವೃತ್ತಿ ಬದುಕಿನಲ್ಲಿ ಹಾಗೂ ಸಮಾಜದಲ್ಲಿ ಸ್ನೇಹಮಯ ವ್ಯಕ್ತಿತ್ವ ಹೊಂದಿದ್ದ ಅವರು ಎಂತಹದ್ದೇ ಸಂದರ್ಭ ಎದುರಾದರೂ ಅದರಿಂದ ಜಯಿಸಿಹೊರಬರುವಂತವರು.
ಕೃಷಿ ಯ ಜೊತೆಗೆ ಒಳ್ಳೆಯ ಸಂಘಟಕರು. ಧರ್ಮಸ್ಥಳ ಗ್ರಾಮದಲ್ಲಿ ಎಸ್‌ಎನ್‌ಡಿಪಿ ಸಂಘಟನೆ ಕಟ್ಟಿಕೊಂಡು ಅದರ ಮುಂದಾಳತ್ವ ವಹಿಸಿ ನಾರಾಯಣ ಗುರುಗಳ ಮಂದಿರನಿರ್ಮಾಣ ಇತ್ಯಾಧಿ ಕಾರ್ಯಕ್ಕೆ ಸಕ್ರೀಯ ನೇತೃತ್ವ ನೀಡುತ್ತಿದ್ದರು. ಫೇಸ್‌ಬುಕ್ ಸಹಿತ ನವಮಾಧ್ಯಮಗಳಲ್ಲೂ ಸಕ್ರೀಯರಾಗಿದ್ದವರು. ಯಾವುದೇ ಹಮ್ಮುಬಿಮ್ಮಿಲ್ಲದೆ ಎಲ್ಲರಜೊತೆ ಬೆರೆಯುತ್ತಾ, ಎಲ್ಲರಿಗೂ ಸಹಾಯಿಯಾಗಿರುತ್ತಿದ್ದ ಅವರು ಇತರರಿಗೆ ಬುದ್ದಿಮಾತು ಹೇಳುವಂತವರು. ಆದರೆ ತನ್ನ ವೃತ್ತಿಬದುಕಿನ ಕೊನೆಯದಿನಗಳಲ್ಲಿ ಆತ್ಮಹತ್ಯೆಯಂತಹಾ ನಿರ್ಧಾರಕ್ಕೆ ಏಕೆ ಬಂದರು ಎಂಬುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
50 ಲಕ್ಷ ರೂ. ವರೆಗೆ ನಿವೃತ್ತಿಮೊತ್ತ ಪಡೆಯಬೇಕಿದ್ದವರು ಆತ್ಮಹತ್ಯೆ ನಿರ್ಧಾರಕ್ಕೇಕೆ ಬಂದರು!?
ಮೇ ಮಾಸಾಂತ್ಯಕ್ಕೆ ನಿವೃತ್ತಿ ಹೊಂದುವವರಾಗಿದ್ದ ಅವರಿಗೆ ದೀರ್ಘ ವರ್ಷದ ಪಿಎಫ್, ಗ್ರಾಚ್ಯುವಿಟಿ, 10 ತಿಂಗಳ ರಜೆ ಬಾಕಿ ಇದ್ದುದರಿಂದ ಈ ಅವಧಿಯ ವೇತನ, ಬೋನಸ್ ಇತ್ಯಾಧಿ ಎಲ್ಲವೂ ಸೇರಿ ಎಷ್ಟಿಲ್ಲವೆಂದರೂ 50 ರಿಂದ 52 ಲಕ್ಷ ರೂ.ವರೆಗೆ ಬಹು ಮೊತ್ತ ಕೈಸೇರುವುದಿತ್ತು. ಈ ಕಾಲಘಟ್ಟದಲ್ಲಿ ಅದೊಂದು ಮಹತ್ವದ ಮೊತ್ತ. ಅಷ್ಟಿರುವಾಗ ಹಾಗೂ ಇತರ ಮೂಲಗಳಿಂದಲೂ ಅವರಿಗೆ ಆರ್ಥಿಕ ಸಂಕಷ್ಟ ಇಲ್ಲದಿರುವಾಗ ಅವರೇಕೆ ದಿಢೀರ್ ಆತ್ಮಹತ್ಯೆಗೆ ಮುಂದಡಿಇಟ್ಟರು?
ಅವರನ್ನು ಇದಕ್ಕೆ ಪ್ರೇರೇಪಿಸಿದ ವಿಚಾರ- ವ್ಯಕ್ತಿಗಳು ಯಾರು, ಅಂತಹಾ ವಿಚಾರ ಏನು ಎಂಬುದನ್ನು ತನಿಖೆ ನಡೆಸಬೇಕಾದ ಅಗತ್ಯತೆ ಖಂಡಿತಕ್ಕೂ ಇದೆ.
9.6 ಕ್ಕೆ ಹಾಕಿದ ಸ್ಟೇಟಸ್ ಮರ್ಮವೇನು?
ಅವರು ಸೋಮವಾರ ಬೆಳಿಗ್ಗೆ 9ಗಂಟೆ 6 ನಿಮಿಷಕ್ಕೆ ತನ್ನ ಮೊಬೈಲ್ ಸ್ಟೇಟಸ್‌ನಲ್ಲಿ "ಅಧ್ಯಕ್ಷರ ಗೆಲುವೇ ನಮ್ಮ ಗೆಲುವು" ಎಂದು ಹಾಕಿಕೊಂಡಿದ್ದರು. ಇದರ ಮರ್ಮ ಏನು ಎಂಬುದು ತಿಳಿಯುತ್ತಿಲ್ಲ. ಒಟ್ಟಿನಲ್ಲಿ ಏನೂ ಸಮಸ್ಯೆ ಇಲ್ಲದ ಅವರು ಪೂರ್ವತಯಾರಿ ನಡೆಸಿದವರಂತೆ ಏಕಾಏಕಿ ಕುರ್ಚಿಯಿಂದ ಎದ್ದುಹೋಗಿ ಕೊರಳಿಗೆ ನೇಣು ಬಿಗಿದುಕೊಳ್ಳುತ್ತಾರೆಂದರೆ ಇದರಅರ್ಥ ಏನು ಎಂಬುದೇ ಅರ್ಥವಾಗುತ್ತಿಲ್ಲ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.
ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು;
ಧರ್ಮಸ್ಥಳ ಸಹಕಾರಿ ಸಂಘ ದೊಡ್ಡ ಆರ್ಥಿಕ ವ್ಯವಹಾರ ಇರುವ ಪ್ರತಿಷ್ಠಿತ ಸಂಸ್ಥೆ. ಇಲ್ಲಿ 2 ಕೋಟಿ ಯಷ್ಟು ಲಾಭಾಂಶವೇ ಇದೆ.
ವಾಣಿಜ್ಯ ಮಳಿಗೆ, ಸಭಾಂಗಣ ಎಲ್ಲವೂ ಇರುವ ಸುಸಜ್ಜಿತ ವ್ಯವಸ್ಥೆ. ಉತ್ತಮ ವ್ಯವಹಾರದೊಂದಿಗೆ 7 ಶಾಖೆಗಳನ್ನೂ ಹೊಂದಿದ ಕೇಂದ್ರಕಚೇರಿಯಲ್ಲಿ ಇವರು ಸಿಇಒ. ಸಂಘದಲ್ಲಿ ಬೇರೆ ಬೇರೆ ಹುದ್ದೆ ಅನುಭವಿಸಿಅವರು ಹಿರಿತನದಲ್ಲಿ ಈ ಸ್ಥಾನಕ್ಕೆ ಏರಿದವರು.
ಕೆಲವೊಮ್ಮೆ ಇವರು ಆಡಳಿತಾತ್ಮಕ ವಿಚಾರದಲ್ಲಿ ದಿಟ್ಟ ನಿಲುವು ತಾಳುತ್ತಿದ್ದರು. ಮಾಹಿತಿಯೊಂದರ ಪ್ರಕಾರ ಅವರು ಸಿಬ್ಬಂದಿಗಳ ಗ್ರಾಚ್ಯುವಿಟಿ 20 ತಿಂಗಳು ಇದ್ದುದನ್ನಿ 30 ತಿಂಗಳಿಗೆ ಏರಿಸಿದ್ದರು. ಇದು ಆಡಳಿತ ಮಂಡಳಿಯ ಒಪ್ಪಿಗೆ ಇದ್ದೇ ಮಾಡಬೇಕಾದ ಬದಲಾದ ನಿಯಮವಾಗಿದ್ದರೂ ಅದನ್ನು ಅವರು ಮೀರಿದ್ದರು ಎಂದು ಅಭಿಪ್ರಾಯ ಕೇಳಿಬಂದಿದೆ. ಇಂತಹಾ ಕೆಲವೊಂದು ವಿಚಾರಗಳಲ್ಲಿ ಅವರು ತಳೆಯುತ್ತಿದ್ದ ನಿರ್ದಾರಗಳು ಆಡಳಿತ ಮಂಡಳಿಗೆ ಅಸಮಾಧಾನ ತರುತ್ತಿತ್ತು ಎಂದೂ ಹೇಳಲಾಗುತ್ತಿದೆ. ಸದ್ರಿಸಹಕಾರಿ ಸಂಘದಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಆಡಳಿತ ಮಂಡಳಿ ಅಧಿಮಾರದಲ್ಲಿದೆ. ಸಿಇಒ ರವೀಂದ್ರನ್ ಅವರ ಫೇಸ್‌ಬುಕ್ ಪರಿಶೀಲಿಸಿದಾಗ ಅವರೂ ಬಿಜೆಪಿ ಕಡೆಗೇ ಒಲವು ಇರುವವರು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಸೋಮವಾರ ನಡೆದ ಘಟನೆ ಮಾತ್ರ ಎಲ್ಲರನ್ನೂ ಹುಬ್ಬೇರಿಸಿದೆ.
ಮೇ.31 ರಂದು ನಿವೃತ್ತರಾಗುವವರಿದ್ದರು;
ರವೀಂದ್ರನ್ ಡಿ ಅವರು ಇದೇ ತಿಂಗಳ ಮೇ ತಿಂಗಳ ಕೊನೆಗೆ ಸೇವೆಯಿಂದ ನಿವೃತ್ತರಾಗುವವರಿದ್ದರು. ಈ ನಡುವೆ ಅವರ ಮೇಲೆ ನಿವೃತ್ತಿಗಿಂತ ಮೊದಲೇ ಕೆಲಸಕ್ಕೆ ರಾಜೀನಾಮೆ ನೀಡುವ ಒತ್ತಡವಿತ್ತು ಎಂದು ಹೇಳಲಾಗುತ್ತಿದೆ. ಇದನ್ನು ಸ್ವತಃ ಅವರ ಪತ್ನಿಯೇ ಪೊಲೀಸರಿಗೆ ತಿಳಿಸಿದ್ದಾರೆ. ಆಡಳಿತ ಮಂಡಳಿಯ ಒಂದಿಬ್ಬರ ಹೆಸರನ್ನೂ ಅವರು ಸೂಚಿಸಿದ್ದಾರೆ. ನಿವೃತ್ತಿಗೂ ಮುನ್ನ ಅವರು ಸ್ವಯಂ ರಾಜೀನಾಮೆ ಸಲ್ಲಿಸಿದ್ದು ಯಾಕೆ ಎಂಬುದೇ ಈಗ ಪ್ರಶ್ನೆ?
ನಿವೃತ್ತಿ ಪತ್ರದಲ್ಲೇನಿದೆ;
ಅವರು ಸೋಮವಾರ ಬೆಳಿಗ್ಗೆ ಬರೆದಿಟ್ಟಿದ್ದಾರೆನ್ನಲಾದ ನಿವೃತ್ತಿಪತ್ರದಲ್ಲಿ, ನಾನು 1979 ರಿಂದ ಕರ್ತವ್ಯ ಸಲ್ಲಿಸುತ್ತಿದ್ದೇನೆ. ಮೇ 31 ರಂದು ನಿವೃತ್ತಿಯಾಗಲಿದ್ದೇನೆ. ಆದರೂ ಸ್ವಲ್ಪ ಬೇಗವೇ ವಿರಮಿಸಬೇಕೆಂದಿದ್ದೇನೆ. ಇದರಿಂದ ಉತ್ತರಾಧಿಕಾರಿಯನ್ನು ನೇಮಿಸಲು ಆಡಳಿತ ಮಂಡಳಿಗೆ ಅನುಕೂಲವಾಗಲಿದೆ ಎಂದು ಭಾವಿಸಲಾಗಿದೆ. ಆದುದರಿಂದ ನಿಯಮಾನುಸಾರ ನನಗೆ ಸಿಗಬೇಕಾದ ನಿವೃತ್ತಿ ವೇತನ ಸೌಲಭ್ಯಗಳನ್ನು ನನ್ನ ಎಸ್.ಬಿ ಖಾತೆಗೆ ವರ್ಗಾಯಿಸುವ ಮೂಲಕ ನನ್ನನ್ನು ಸೇವೆಯಿಂದ ಬಿಡುಗಡೆಗೊಳಿಸಬೇಕು ಎಂದು ಅಪೇಕ್ಷೆ ಎಂದು ಬರೆದಿದ್ದಾರೆ.
ಪತ್ರದ ಕೆಳಗೆ ಸಂಘದ ಅಧ್ಯಕ್ಷ ಹರಿದಾಸ್ ಗಾಂಭೀರ್ ಅವರ ಸಹಿಯೊಂದಿಗೆ, ಸದ್ರಿ ಪತ್ರ 9.30 ಕ್ಕೆ ಸ್ವೀಕರಿಸಲಾಗಿದೆ ಎಂದು ಬರೆಯಲಾದುದು ಕಂಡು ಬರುತ್ತದೆ.
ಸಮಗ್ರ ತನಿಖೆಗೆ ಬಂಗೇರ ಆಗ್ರಹ; ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ಅವರು, ರವೀಂದ್ರನ್ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ನಡೆಸಬೇಕು. ಯಾವ ಕಾರಣಕ್ಕೆ ಅವರು ಆತ್ಮಹತ್ಯೆಗೆ ಮುಂದಾಗಿದ್ದಾರೆ ಅದಕ್ಕೆ ಪ್ರೇರಣೆಯಾಗಿರುವುದು ಯಾವ ವಿಚಾರ ಎಂಬ ಬಗ್ಗೆ ತನಿಖೆಯಾಗಬೇಕು. ಆತ್ಮಹತ್ಯೆಗೆ ಕಾರಣಗಳು ಬಹಿರಂಗಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.
ಉನ್ನತ ಮಟ್ಟದ ತನಿಖೆ ನಡೆಯಬೇಕಿದೆ;
ಇಷ್ಟೆಲ್ಲ ಅನುಕೂಲತೆಗಳು ಇದ್ದು ತಿಂಗಳಾಂತ್ಯಲ್ಲೆ ನಿವೃತ್ತಿ ಹೊಂದಬೇಕಾದ ವ್ಯಕ್ತಿ ಏಕಾಏಕಿ ಆತ್ಮಹತ್ಯೆ ಯ ನಿರ್ಧಾರಕ್ಕೆ ಬರಬೇಕಾದಷ್ಟು ಪ್ರಚೋದಿತವಾದ ಅಂಶ ಯಾವುದು ಎಂಬ ಬಗ್ಗೆ ತನಿಖೆ ನಡೆಯಬೇಕಾದ ಅಗತ್ಯವಿದೆ.ಅವರ ಪತ್ನಿ ಮೂಡ ಈ ಬಗ್ಗೆ ಪ್ರಸ್ತಾಪವೆತ್ತಿದ್ದಾರೆ. ಬ್ಯಾಂಕಿನ ಸಿಸಿ ಟಿವಿ ಪುಟೇಜ್, ವಿಆರ್‌ಎಸ್, ಅದನ್ನು ಅಧ್ಯಕ್ಷರಲ್ಲಿ ಸ್ವತಃ ಅವರೇ ನೀಡಿದ್ದೇ ಅಥವಾ ಬರೆದು ಟೇಬಲ್ ಮೇಲೆಇಟ್ಟದ್ದೇ? ಸೋಮವಾರ ಹಾಗೂ ಅದರ ಹಿಂದಿನ ಆಡಳಿತ ದಿನದಲ್ಲಿ ಸಿಬ್ಬಂದಿ ಗಳ ಚಲನವಲನ, ಅವರೂ ಸೇರಿದಂತೆ ಅವರ ಆಪ್ತವಲಯದಲ್ಲಿ ಆಗಿರುವ ಫೋನ್ ಸಂಭಾಷಣೆಗಳು, ವ್ಯವಹಾರಗಳು ಇವುಗಳೆಲ್ಲವನ್ನೂ ಆಧಾರವಾಗಿರಿಸಿಕೊಂಡು ಉನ್ನತ ತನಿಖೆ ನಡೆದರೆ ನಿಜಾಂಶ ಖಂಡಿತಾ ಹೊರಬರಲಿದೆ. ಮತ್ತುಹೊರ ಬರಬೇಕು ಕೂಡ. ಈ ಬಗ್ಗೆ ಪೊಲೀಸ್ ಇಲಾಖೆ ಯಾರ ಒತ್ತಡಕ್ಕೂ ಮಣಿಯದೆ ಹೆಜ್ಜೆ ಇಡಬಹುದು ಎಂದು ನಂಬಲಾಗಿದೆ.