ಬೆಳ್ತಂಗಡಿ; ಹೂವಿನ ವ್ಯಾಪಾರಿಯೊಬ್ಬರು ಮೇಲಂತಬೆಟ್ಟು ಗ್ರಾಮದ ಪಕ್ಕಿದಕಲ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ತಂದಿಟ್ಟಿದ್ದಾರೆನ್ನಲಾದ 4 ಲಕ್ಷ ರೂ.ಮೊತ್ತ ಕಳವಾದ ಘಟನೆ ಆ. 6 ರಂದು ಬೆಳಕಿಗೆ ಬಂದಿದೆ.
ಕಾಶಿಪಟ್ಣ ಗ್ರಾಮದ ಹೇಡ್ಮೆ ಮನೆ ನಿವಾಸಿ ಹೈದರಾಲಿ ಅವರ ಬಾಡಿಗೆ ಬಿಡಾರದಲ್ಲಿ ಈ ಕಳವು ಕೃತ್ಯ ನಡೆದಿದೆ.
ಪಕ್ಕಿದಕಲ ಎಂಬಲ್ಲಿ ಸುರೇಶ್ ನಾಯ್ಕ ಎಂಬವರ ಬಾಡಿಗೆ ಮನೆಯಲ್ಲಿ ಹೈದರಾಲಿ ಅವರು ನೆಲೆಸಿದ್ದರು. ಇವರು ಬೆಳ್ತಂಗಡಿ ಸಂತೆಕಟ್ಟೆಯಲ್ಲಿರುವ ಎಂ. ಹೆಚ್ ಪ್ಲವರ್ಸ್ ಅಂಗಡಿಯಲ್ಲಿ ಹೂವಿನ ವ್ಯಾಪಾರ ನಡೆಸುತ್ತಿದ್ದಾರೆ. ಇವರು ಆ. 3 ರಂದು ಬೆಳಿಗ್ಗೆ 08.30 ಗಂಟೆಗೆ ತನ್ನ ವ್ಯಾಪಾರದ ಹಣ 4 ಲಕ್ಷ ರೂ.ಗಳನ್ನು ಹೂ ಖರೀದಿ ಮಾಡುವ ಬಗ್ಗೆ ಬಾಡಿಗೆ ಮನೆಯ ತನ್ನ ಮಲಗುವ ಕೋಣೆಯ ಕಪಾಟಿನ ಡ್ರವರ್‌ನಲ್ಲಿರಿಸಿ ಮನೆಗೆ ಬೀಗ ಹಾಕಿ ವ್ಯಾಪಾರಕ್ಕೆ ತೆರಳಿದ್ದರು.
ಅಂದಿನಿಂದ ಅವರು ತಮ್ಮ ಸ್ವಂತ ಮನೆಗೆ ಹೋಗಿದ್ದವರು ಆ. 6 ರಂದು ಬೆಳಗ್ಗಿನಜಾವಾ 4.15 ಕ್ಕೆ ಬಾಡಿಗೆ ಮನೆಗೆ ಬಂದ ವೇಳೆ ಕಳ್ಳತನಕೃತ್ಯ ಬೆಳಕಿಗೆ ಬಂದಿದೆ ಎಂದು ಬೆಳ್ತಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅವರು ಮನೆಯ ಬೀಗ ತೆಗೆದು ಒಳಗೆ ಹೋದಾಗ ಕೋಣೆಯ ಒಳಗಿದ್ದ ಕಪಾಟಿನ ಡ್ರವರ್‌ನ್ನು ಯಾರೋ ಕಳ್ಳರು ಯಾವುದೋ ಆಯುಧ ಉಪಯೋಗಿಸಿ ಬೀಗ ಸಮೇತ ಜಾರಿಸಿ ಅದರಲ್ಲಿದ್ದ ನಗದನ್ನು ಎಗರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಎಸ್.ಐ ನಂದ ಕುಮಾರ್ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಲಾಗಿದ್ದು ತನಿಖೆ ಆರಂಭವಾಗಿದೆ.
ಈ ಸಂಬಂಧ
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 454,457,380 ರಡಿ ಪ್ರಕರಣ ದಾಖಲಾಗಿದೆ.