ಬೆಳ್ತಂಗಡಿ:ವಿದೇಶದ ಮಸ್ಕತ್, ಒಮಾನ್ ನ ಮಬೇಲ ಎಂಬಲ್ಲಿ ಎರಡು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಮೃತಪಟ್ಟ ನೂರ್ ಮುಹಮ್ಮದ್ ಕುಟುಂಬಕ್ಕೆ ಪರಿಹಾರ ಮೊತ್ತ ದೊರಕಿಸಿ ಕೊಡುವಲ್ಲಿ ಸೋಶಿಯಲ್ ಫೋರಮ್ ಒಮಾನ್ ಯಶಸ್ವಿಯಾಗಿದೆ.
2019ರ ಮೇ 11ರಂದು ವಾಹನ ಅಪಘಾತ ನಡೆದಿದ್ದು, ಬೆಳ್ತಂಗಡಿ ತಾಲೂಕಿನ ಕುವೆಟ್ಟು ಪಂಚಾಯತ್ ವ್ಯಾಪ್ತಿಯ ನಿವಾಸಿ ನೂರ್ ಮುಹಮ್ಮದ್ ಸುನ್ನತ್‌ಕೆರೆ (25ವ) ಮತ್ತು ಚಾಲಕ, ಒಮಾನ್ ಪ್ರಜೆ ಸ್ಥಳದಲ್ಲೇ ಮೃತಪಟ್ಟಿದ್ದರು.
ನೂರ್ ಮುಹಮ್ಮದ್ ರ ಮೃತದೇಹವನ್ನು ಕೇವಲ ಎರಡು ದಿನಗಳಲ್ಲಿ ಸೋಶಿಯಲ್ ಫೋರಮ್ ಒಮಾನ್ ಈ ಸಂಘಟನೆಯ ನೆರವಿನಿಂದ ಊರಿಗೆ ಕಳುಹಿಸಿಕೊಡಲಾಗಿತ್ತು.
ತೀರಾ ಬಡಕುಟುಂಬದ ಯುವಕ ನೂರ್ ಮುಹಮ್ಮದ್ ಅಪಾರ ಕನಸಿನೊಂದಿಗೆ ಮೊತ್ತಮೊದಲ ಬಾರಿಗೆ ಒಮಾನ್ ಗೆ ಬಂದಿದ್ದು ಮುಸನ್ನ ಎಂಬಲ್ಲಿನ 'ಮಸ್ಕತ್ ವಾಟರ್' ಎಂಬ ಹೆಸರಿನ ಬಾಟಲಿ ನೀರು ಉತ್ಪಾದನಾ ಕಂಪೆನಿಯಲ್ಲಿ ಸೇಲ್ಸ್ ಮನ್ ಆಗಿ ಉದ್ಯೋಗಕ್ಕೆ ಸೇರಿಕೊಂಡಿದ್ದರು.
2019ರ ಮೇ 11ರಂದು ಕಂಪೆನಿಯ ವಾಹನವು ಭೀಕರ ಅಪಘಾತಕ್ಕೀಡಾಗಿ ಸ್ಥಳದಲ್ಲೇ ಚಾಲಕ ಮತ್ತು ನೂರ್ ಮುಹಮ್ಮದ್ ಮೃತಪಟ್ಟಿದ್ದರು.
ಸೋಶಿಯಲ್ ಫೋರಮ್ ನಿಂದ ಕಾನೂನು ಹೋರಾಟ;
ಅಪಘಾತದಲ್ಲಿ ಮೃತರಾದ ನೂರ್ ಮುಹಮ್ಮದ್ ಅವರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸೋಶಿಯಲ್ ಫೋರಮ್ ಒಮಾನ್ ತಂಡವು ಕಾನೂನು ಹೋರಾಟಕ್ಕೆ ಇಳಿದಿತ್ತು. ಮೃತರಿಗೆ ಅಪಘಾತದ ಪರಿಹಾರ ಮೊತ್ತಕ್ಕಾಗಿ ಸ್ಥಳೀಯ ನ್ಯಾಯಾಲಯದಲ್ಲಿ ದಾವೆಯನ್ನೂ ಹೂಡಿ, ನಿರಂತರ 2 ವರ್ಷಗಳ ಹೋರಾಟ ನಡೆಸಿದ ಫಲವಾಗಿ ಮೃತರ ಕುಟುಂಬಕ್ಕೆ ಇದೀಗ 25 ಲಕ್ಷ ರೂಪಾಯಿ ಪರಿಹಾರ ಮೊತ್ತ ಬಿಡುಗಡೆಯಾಗಿರುತ್ತದೆ.
ನೂರ್ ಮಹಮ್ಮದ್ ತಾಯಿ ಕೂಡಾ ನಿಧನ:
ಮೃತ ನೂರ್ ಮುಹಮ್ಮದ್ ರ ತಾಯಿ ಎರಡು ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ಇದೀಗ ನೂರ್ ಮುಹಮ್ಮದ್ ರ ಕುಟುಂಬದಲ್ಲಿ ಅವರ ತಂದೆ, ಅಣ್ಣ, ಅಕ್ಕ ಇದ್ದಾರೆ. ಬಿಡುಗಡೆಗೊಂಡ ಪರಿಹಾರ ಮೊತ್ತವನ್ನು ಸೋಶಿಯಲ್ ಫೋರಮ್ ಒಮಾನ್ ಮೂಲಕ ಸಂತ್ರಸ್ತ ಕುಟುಂಬಕ್ಕೆ ಈಗಾಗಲೇ ಹಸ್ತಾಂತರಿಸಲಾಗಿದೆ.
ಕಾನೂನು ಹೋರಾಟದಲ್ಲಿ ಯಾರ್ಯಾರು?
ಕಾನೂನು ಹೋರಾಟದಲ್ಲಿ ಮುಹಿಯುದ್ದೀನ್ ಗುರುವಾಯನಕೆರೆ, ಅಬ್ದುಲ್ ಹಮೀದ್ ಪಾಣೆಮಂಗಳೂರು, ಇರ್ಫಾನ್ ಉಜಿರೆ, ಆಸಿಫ್ ಬೈಲೂರು, ಊರಿನ ಸ್ಥಳೀಯ ಗ್ರಾ.ಪಂ.ಸದಸ್ಯ ಮುಸ್ತಫಾ ಜಿ. ಕೆ., ರಿಹಾನ್ ಸಾಹೇಬ್ ಮುಂತಾದವರು ಸಹಕರಿಸಿದ್ದರು.