ಬೆಳ್ತಂಗಡಿ: ಲಾರಿಯೊಂದು ಸ್ಕೂಟರಿನಲ್ಲಿ ತೆರಳುತ್ತಿದ್ದ ನಿವೃತ್ತ ಯೋಧನಿಗೆ ಅಪಘಾತ ನಡೆಸಿ ಪರಾರಿಯಾದ ಘಟನೆ ಮಂಜೇಶ್ವರದಲ್ಲಿ ಬುಧವಾರ ಬೆಳಿಗ್ಗೆ ನಡೆದಿದ್ದು, ಅಪಘಾತದ ತೀವ್ರತೆಗೆ ನಿವೃತ ಯೋಧ, ಕಡಿರುದ್ಯಾವರದ ವ್ಯಕ್ತಿ ಸ್ಥಳದಲ್ಲೇ ಸಾವೀಗಿಡಾದ ಬಗ್ಗೆ ವರದಿಯಾಗಿದೆ.
ಮೂಲತಃ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ನಿವಾಸಿ, ನಿವೃತ್ತ ಅರಣ್ಯ ರಕ್ಷಕ ದಾಮೋಧರ ಮತ್ತು ಲೀಲಾವತಿ ದಂಪತಿ ಪುತ್ರ ದಿನೇಶ್ ಉಪ್ಪಾರ್ (41ವ.) ಅವರೇ ಈ ರೀತಿದುರ್ಘಟನೆಯಲ್ಲಿ ಕೊನೆಯುಸಿರೆಳೆದವರು.
ಕಡಿರುದ್ಯಾವರ ಮತ್ತು ಮುಂಡಾಜೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ್ದ ದಿನೇಶ್ ಉಪ್ಪಾರ್ ಪ್ರಸ್ತುತ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಉದ್ಯಾವರ ಗುತ್ತು ಎಂಬಲ್ಲಿ ಜಾಗ ಖರೀದಿಸಿ ಮನೆಮಾಡಿ ಅಲ್ಲೇ ನೆಲೆಸಿದ್ದರು.
ಕುಂಬ್ಲೆಯ ಆರಿಕ್ಕಾಡಿಯ ಸುಜಾತಾ ಅವರನ್ನು ವರಿಸಿದ್ದ ದಿನೇಶ್ ದಂಪತಿಗೆ ವೈಷ್ಣವಿ ಮತ್ತು ವೈಶುಭಿ ಎಂಬಿಬ್ಬರು ಹೆಣ್ಣು ಮಕ್ಕಳಿದ್ದಾರೆ.
ಸೇನೆಯಲ್ಲಿ ಹೈದರಾಬಾದ್, ಅಸ್ಸಾಂ, ಜಮ್ಮು, ನಾಸಿಕ್, ಕೋಯಂಬತ್ತೂರು ಮೊದಲಾದೆಡೆ 18 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ದಿನೇಶ್
ನಿವೃತ್ತಿಯ ಬಳಿಕ ಮಂಗಳೂರಿನ ಗ್ಯಾಸ್ ಸರಬರಾಜು ಕಂಪೆನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬುಧವಾರ ಬೆಳಗ್ಗೆ ಎಂದಿನಂತೆ ಸ್ಕೂಟರಿನಲ್ಲಿ ಕರ್ತವ್ಯಕ್ಕೆ ತೆರಳಲು ಮನೆಬಿಟ್ಟು 10 ನಿಮಿಷ ಅಂತರದಲ್ಲಿ ಸಾಗುತ್ತಿರುವಂತೆ ಅವರ ಸ್ಕೂಟರ್‌ಗೆ ಹಿಂದಿನಿಂದ ಬಂದಿದ್ದ ಲಾರಿಯೊಂದು ಡಿಕ್ಕಿಹೊಡೆದಿತ್ತು.
ಅಪಘಾತವೆಸಗಿದ್ದ ಲಾರಿ ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿತ್ತಾದರೂ ಸಕಾಲದಲ್ಲಿ ಕಾರ್ಯಪ್ರವೃತರಾದ ಪೊಲೀಸರು ಟೋಲ್‌ಗೇಟ್‌ನಲ್ಲಿ ಲಾರಿಯನ್ನು ವಶಕ್ಕೆ ಪಡೆದುಕೊಂಡು ಕೇಸು ಜಡಿದಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ತಂದೆ, ತಾಯಿ, ಪತ್ನಿ ಮಕ್ಕಳಲ್ಲದೆ ಓರ್ವ ಅಣ್ಣ ರಾಜೇಶ್ ಉಪ್ಪಾರ್, ಓರ್ವ ಸಹೋದರ ಗಣೇಶ್ ಉಪ್ಪಾರ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ. ದಿನೇಶ್ ಅವರ ಅಂತ್ಯಸಂಸ್ಕಾರ ವಿಧಿಗಳು ಮಂಜೇಶ್ವರದ ಮನೆಯಲ್ಲಿ ನಡೆಸಲಾಗಿದೆ.