ಬೆಳ್ತಂಗಡಿ; ಮನೆಯಲ್ಲಿ ಸಂಜೆ ವೇಳೆ ನಡೆದ ವಿದ್ಯುತ್ ಅವಘಡದಿಂದಾಗಿ ಕಡಿರುದ್ಯಾವರ ಗ್ರಾಮದ ಕೌಡಂಗೆ ನಿವಾಸಿ ಅವಿನಾಶ್ ಗೌಡ (23ವ.) ಅವರು ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ವೇಳೆ ನಡೆದಿದೆ.
ಕೌಡಂಗೆ ನಿವಾಸಿ ಕೃಷಿಕ ಚನನ ಗೌಡ ಮತ್ತು ದೇವಕಿ ದಂಪತಿಯ ಮೂರನೇ ಪುತ್ರರಾಗಿರುವ ಅವಿನಾಶ್ ಅವರು ಮೇಸ್ತ್ರಿ ಕೆಲಸದ ಜೊತೆಗೆ ಇಲೆಕ್ಟ್ರೀಷಿಯನ್ ಸಹಾಯಕರಾಗಿ ಕೂಡ ಕೆಲಸ ಮಾಡುತ್ತಿದ್ದರು.
ಘಟನೆ ನಡೆದ ತಕ್ಷಣ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅದಾಗಲೇ ಅವರು ಅಸುನೀಗಿದ್ದರು. ಆ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ವರ್ಗಾಯಿಸಲಾಯಿತು.
ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ ಸಕ್ರೀಯ ಕಾರ್ಯಕರ್ತರಾಗಿದ್ದ ಅವಿನಾಶ್ ಗೌಡ ಅವರು ಸರಳ ಸಜ್ಜನಿಕೆಯ ಸ್ವಭಾವದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಮೃತರು ತಂದೆ, ತಾಯಿ ಮಾತ್ರವಲ್ಲದೆ ಇಬ್ಬರು ಅಕ್ಕಂದಿರಾದ ಅಶ್ವಿನಿ ಮತ್ತು ಅಕ್ಷತಾ, ಏಕೈಕ ಸಹೋದರ ಅಭಿಲಾಷ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.