ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ಅನೇಕ ಜನರಿಗೆ ಸಹಾಯವಾಗುವ ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಅದರಲ್ಲಿ ಶಾಲೆಗಳಿಗೆ ಪೀಠೋಪಕರಣ ಕೊಡುವ ಕಾರ್ಯಕ್ರಮವೂ ಒಂದು. ಕೆಲವೊಂದು ಶಾಲೆಗಳಲ್ಲಿ ಭೌತಿಕ ಸೌಲಭ್ಯಗಳ ಕೊರತೆಯಿಂದ ಮಕ್ಕಳು ನೆಲದಲ್ಲಿ ಕುಳಿತು ಶಿಕ್ಷಣ ಪಡೆಯುವುದು, ಹಳೆಯ ಬೆಂಚು, ಡೆಸ್ಕ್ಗುಗಳಲ್ಲಿ ಶಿಕ್ಷಣ ಪಡೆಯುವುದು ನಮ್ಮ ಗಮನಕ್ಕೆ ಬಂದ ಬಳಿಮ ವಿದ್ಯಾರ್ಥಿಗಳನ್ನು ಇದರಿಂದ ಮುಕ್ತಗೊಳಿಸುವ ಉದ್ದೇಶದಿಂದ ಧ.ಗ್ರಾ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ವತಿಯಿಂದ ಶಾಲೆಗಳಿಗೆ ಪೀಠೋಪಕರಣ ಒದಗಿಸಲಾಗುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯೂ ಆಗಿರುವ ಗ್ರಾ. ಯೋ. ಅಧ್ಯಕ್ಷರಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಅವರು ಡಿ.28 ರಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆಯೋಜನೆಗೊಂಡಿದ್ದ, ರಾಜ್ಯದ ಬಾಗಲಕೋಟೆ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ, ಹೊಸಪೇಟೆ ಮುಂತಾದ ಕಡೆಯ 287 ಶಾಲೆಗಳಿಗೆ 2550 ಬೆಂಚು ಮತ್ತು ಡೆಸ್ಕ್ಗುಗಳನ್ನು ಹಸ್ತಾಂತರಿಸಿ ಮಾತನಾಡಿದರು.
ಕಳೆದ ಹತ್ತುವರ್ಷಗಳಲ್ಲಿ ರಾಜ್ಯದ 29ಜಿಲ್ಲೆಗಳ 9213 ಶಾಲೆಗಳಿಗೆ 28915 ಜೊತೆ ಡೆಸ್ಕು- ಬೆಂಚನ್ನು ವಿತರಿಸಲಾಗಿದ್ದು ಇದಕ್ಕೆ ಸುಮಾರು 15. 92 ಕೋಟಿ ರೂ. ವಿನಿಯೋಗಿಸಲಾಗಿದೆ.
ಇದರಲ್ಲಿ ಕ್ಷೇತ್ರದ %80 ಪಾಲು ಇದ್ದರೆ ಉಳಿದ ಶಾಲಾಭಿವೃದ್ಧಿ ಸಮಿತಿ 20% ಭರಿಸುತ್ತದೆ. ಈ ಕಾರ್ಯಕ್ರಮ ಮುಂದೆಯೂ ನಿರಂತರವಾಗಿ ನಡೆಯಲಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಸೋಮವಾರ ಬೆಂಚು ಡೆಸ್ಕ್ ಹೊತ್ತು ಪ್ರಯಾಣ ಆರಂಭಿಸಿದ ಲಾರಿಗಳಿಗೆ ಡಾ.ಹೆಗ್ಗಡೆಯವರು ಹಸಿರು ನಿಶಾನೆ ತೋರಿದರು.
ಈ ಸಂದರ್ಭದಲ್ಲಿ ಹೇಮಾವತಿ ವಿ ಹೆಗ್ಗಡೆ, ಹೆಗ್ಗಡೆಯವರ ಆಪ್ತ ಕಾಯದರ್ಶಿ ವೀರು ವಿ. ಶೆಟ್ಟಿ, ಸಮುದಾಯ ಅಭಿವೃದ್ಧಿ ವಿಭಾಗದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ , ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಯೋಜನಾಧಿಕಾರಿ ಪುಷ್ಪರಾಜ್, ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್ ಜನಾರ್ದನ, ಉದ್ಯಮಿ ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಉಜಿರೆ ಇವರುಗಳು ಉಪಸ್ಥಿತರಿದ್ದರು.