ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ರಿ. ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ರಿ ಧರ್ಮಸ್ಥಳ ಇದರ ವತಿಯಿಂದ ನವಜೀವನ ಸಮಾವೇಶ 2022-23 ನೇ ಸಾಲಿನ ಮದ್ಯವರ್ಜಿತರ ಕೌಟುಂಬಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಪ್ರಕೃತಿಚಿಕಿತ್ಸಾ ಪದ್ಧತಿ ಔಷಧಿ ರಹಿತ ಚಿಕಿತ್ಸೆ ಇವುಗಳ ಮೂಲಕ ಸ್ವಾಸ್ಥ್ಯ ಲಾಭ ಜನತೆಗೆ ದೊತೆತಿದೆ. ಧರ್ಮಸ್ಥಳದ ಧಾರ್ಮಿಕ ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಯೋಜನೆಗಳು ಸ್ಮರಣೀಯ ಮತ್ತು ಅದ್ಭುತ. ಇದರಿಂದ ಸಾವಿರಾರು ಲಕ್ಷಾಂತರ ಜನರ ವಿಕಾಸವಾಗಿ ಸಂತೋಷದ ವಾತಾವರಣ ನಿರ್ಮಾಣವಾಗಿರುವುದು ಪ್ರಶಂಸನೀಯ. ಅವುಗಳ ಪೈಕಿ ಜನಜಾಗೃತಿ ಮೂಲಕ ನಡೆಯುತ್ತಿರುವ ನಶೆ ಮುಕ್ತ ಕೆಲಸ ಅತ್ಯಂತ ಮುಖ್ಯವಾದುದು. ಇದು ದೇವರ ಕೆಲಸ.ಶಾಲಾ ಕಾಲೇಜು ಪರಿಸರದಲ್ಲಿ ನಶೆಯುಕ್ತ ಪದಾರ್ಥಗಳು ದೊರೆಯದಂತೆ ಮಾಡಬೇಕು. ಮಕ್ಕಳು ಈ ಚಟಕ್ಕೆ ಒಳಗಾದರೆ ಆರ್ಥಿಕ ಅಡಚಣೆಯಿಂದ ಕಳ್ಳತನದಂತಹಾ ಕೃತ್ಯಕ್ಕೆ ಕೈ ಹಾಕುತ್ತಾರೆ. ಇದರ ಪರಿಣಾಮ ಸಮಾಜ ದುರ್ಬಲಗೊಳ್ಳುತ್ತಾ ಹೋಗುತ್ತದೆ. ಆದ್ದರಿಂದ ಇಂತಹಾ ಚಳವಳಿಗೆ ಜನರ ಸಹಭಾಗಿತ್ವ ಮುಖ್ಯ. ಯುವಜನತೆಗೆ ಸರಿಯಾದ ದಾರಿ ತೋರಿಸುವ ಕೆಲಸವಾಗಬೇಕು.
ವಿಶ್ಚದ ಎಲ್ಲಾ ದೇಶಗಳ ದೃಷ್ಟಿ ಭಾರತದ ಮೇಲಿದೆ. ಆದ್ದರಿಂದ ದೇಶವಾಸಿಗಳು ದುಶ್ಚಟಮುಕ್ತರಾಗಿ ಸ್ವಸ್ಥ ಸಮಾಜವಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮದ್ಯಪಾನದಿಂದ ಮನುಷ್ಯನ ವ್ಯಕ್ತಿತ್ವ ನಾಶವಾಗುತ್ತದೆ. ದುಶ್ಚಟ ಇರುವವರು ದುಷ್ಟರಾಗುತ್ತಾರೆ. ಇಂದು ಇಲ್ಲಿ ಭಾಗವಹಿಸುತ್ತಿರುವ ನವಜೀವನ ಸಮಿತಿ ಸದಸ್ಯರು ತಾವು ಹಿಂದೆ ಕ್ಷೇತ್ರಕ್ಕೆ ಬಂದಿದ್ದಾಗ ಮನಸ್ಸಿನೊಳಗಡೆ ವ್ಯಸನೀಯ ಮನಸ್ಥಿತಿ ಇಟ್ಟುಕೊಂಡು ದೇವರಿಗೆ ಕೈಮುಗಿಯುವುದಕ್ಕಿಂತ ಈಗ ನೀವು ವ್ಯಸನಮುಕ್ತರಾಗಿ ಮಂಜುನಾಥನಿಗೆ ಕೈ ಮುಗಿದಾಗ ದೇವರಿಗೂ ಸಂತೋಷವಾಗಿರುತ್ತದೆ. ನೀವು ಸಂತೋಷವಾಗಿದ್ದರೆ ನಿಮ್ಮ ಮಡದಿ,ಮಕ್ಕಳು, ಮನೆ, ರಾಜ್ಯ ದೇಶ ಸಂತೋಷದಲ್ಲಿರಲು ಸಾಧ್ಯ ಎಂದರು.
ನವಜೀವನ ಸಮಿತಿ ಸದಸ್ಯರ ಮಕ್ಕಳಿಗಾಗಿ ಡಾ ವಿರೂಪಾಕ್ಷ ದೇವರಮನೆ ಬರೆದಿರುವ 'ನಿನಗೆ ನೀನೇ ಗೆಳೆಯ' ಪುಸ್ತಕವನ್ನು ಬಿಡುಗಡೆಗೊಳಿಸಿದ ಧರ್ಮಸ್ಥಳ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷೆ ಡಾ.ಹೇಮಾವತಿ ಹೆಗ್ಗಡೆಯವರು, ಬಿಟ್ಟಿ ಉಪದೇಶ ಎಲ್ಲರೂ ಹೇಳಬಹುದು. ಆದರೆ ಅಳವಡಿಸುವುದು ಕಷ್ಟ. ಜನಜಾಗೃತಿ ವೇದಿಕೆಯ ಮೂಲಕ ನಾಡಿನೆಲ್ಲೆಡೆ ಸದ್ಭಾವನೆಯ ಬೀಜ ಬಿತ್ತುವ ಕಾರ್ಯ ಮಾಡಲಾಗುತ್ತಿದೆ. ದುಶ್ಚಟದಿಂದ ಹೊರಬರಬೇಕಾದರೆ ಮಾರ್ಗದರ್ಶನ ಮಾತ್ರ ಸಾಲದು. ನಮಗೂ ಸಂಕಲ್ಪ ಶಕ್ತಿ ಮುಖ್ಯ. ಜೇಡರ ಬಲೆ ಆರಂಭದಲ್ಲಿ ಸಣ್ಣ ಮಟ್ಟದಲ್ಲಿದ್ದರೆ ಅದನ್ನು ಬಿಡಿಸಬಹುದು. ಹಾಗೆಯೇ ಬಿಟ್ಟರೆ ಅದು ಕಬ್ಬಿಣದ ಸರಪಳಿಯಂತಾಗಿ ಬಿಡಿಸಿಕೊಳ್ಳಲು ಕಷ್ಟಪಡಬೇಕಾಗಬಹುದು. ಕಣ್ಣಿಗೆ ಕಾಣುವ ದೇವರಂತಿರುವ ತಂದೆ ತಾಯಿಗೆ ಗೌರವ ದೊರೆತರೆ ಮನೆಯಲ್ಲಿ ನೆಮ್ಮದಿ ಇರುತ್ತದೆ ಎಂದರು.
ವೇದಿಕೆಯಲ್ಲಿ ಡಿ ಹರ್ಷೇಂದ್ರ ಕುಮಾರ್, ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಮೂ.ಕೊರವಿ ಉಪಸ್ಥಿತರಿದ್ದರು.
ಮದ್ಯಮುಕ್ತರಾದ ಮಂಜುನಾಥ ತೀರ್ಥಹಳ್ಳಿ ಅನಿಸಿಕೆ ವ್ಯಕ್ತ ಪಡಿಸಿದರು. ವ್ಯಸನಮುಕ್ತರಾದ 5 ಮಂದಿಗೆ ಸಾಂಕೇತಿಕವಾಗಿ ಗುರುತಿನ ಚೀಟಿ ವಿತರಿಸಲಾಯಿತು. 10 ವರ್ಷಗಳಿಂದ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಭವಿ ಸಮಾಜ ಸೇವಕ, ಸಂಪನ್ಮೂಲ ವ್ಯಕ್ತಿ ಡಾ. ಥೋಮಸ್ ಸ್ಕರಿಯಾ ಅವರಿಗೆ ಜನಜಾಗೃತಿ ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ವ್ಯಸನ ಮುಕ್ತ ಸಾಧಕರನ್ನು ಸನ್ಮಾನಿಸಲಾಯಿತು.
ಅತಿಥಿಗಳು ವೇದಿಕೆಗೆ ಆಗಮಿಸಿದಂತೆ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರಗೀತೆ ಪ್ರಸ್ತುತಪಡಿಸಿದರು. ಗ್ರಾ.ಯೋ. ಸುಮಂಗಲಾ ಬಳಗದವರು ಪ್ರಾರ್ಥನೆ ಹಾಡಿದರು. ಗ್ರಾ.ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಹೆಚ್ ಮಂಜುನಾಥ ಸ್ವಾಗತಿಸಿ ಪ್ರಸ್ತಾವನೆಗೈದರು.
ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ. ಪಾಯಿಸ್ ವಂದಿಸಿದರು. ಜನಜಾಗೃತಿ ವಿಭಾಗದ ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯ ಮತ್ತು ಯಶವಂತ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದಲ್ಲಿ ರಾಜ್ಯದ ಮೂಲೆಮೂಲೆಗಳಿಂದ ಮದ್ಯವರ್ಜಿತ ನವಜೀವನ ಸಮಿತಿ ಸದಸ್ಯರು ಭಾಗಿಯಾಗಿದ್ದರು.
1475 ಮದ್ಯವರ್ಜನ ಶಿಬಿರಗಳಿಂದ 1.25 ಲಕ್ಷ ಮಂದಿ ವ್ಯಸನ ಮುಕ್ತಿ
ಪ್ರಸ್ತಾವನೆಗೈದ ಗ್ರಾ.ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್ ಹೆಚ್ ಮಂಜುನಾಥ್ ಮಾತನಾಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ 31 ಜಿಲ್ಲಾ ವೇದಿಕೆ, 8 ತಾಲೂಕು ವೇದಿಕೆ, 112 ವಲಯ ವೇದಿಕೆಗಳು ಮತ್ತು 273 ಗ್ರಾಮ ಸಮಿತಿಗಳಾಗಿ ರಾಜ್ಯಾಧ್ಯಂತ ಕಾರ್ಯನಿರ್ವಹಿಸುತ್ತಿದೆ. 7000 ಕ್ಕೂ ಮಿಕ್ಕಿದ ಸಕ್ರೀಯ ಕಾರ್ಯಕರ್ತರು, 458 ಪದಾಧಿಕಾರಿಗಳ ಮೂಲಕ ಸಂಘಟನೆ ನಡೆಯುತ್ತಿದೆ. ಇದುವರೆಗೆ 1475 ಮದ್ಯವರ್ಜನ ಶಿಬಿರಗಳ ಮೂಲಕ ಹಾಗೂ ಸ್ವಪ್ರೇರಣೆಯಿಂದ 1.25 ಲಕ್ಷ ಮಂದಿ ಪಾನಮುಕ್ತರಾಗಿದ್ದಾರೆ. ಪಾನಮುಕ್ತರ 3116 ನವಜೀವನ ಸಮಿತಿ ರಚನೆಯಾಗಿದ್ದು, 217 ಮಂದಿಗೆ ಸ್ವ ಉದ್ಯೊಗ ತರಬೇತಿ, 2000 ಸದಸ್ಯರ ಜೊತೆ ಸಂವಾದ, 110 ಮಂದಿಗೆ "ಜಾಗೃತಿ ಅಣ್ಣ" ಮತ್ತು "ಮಿತ್ರ" ಪ್ರಶಸ್ತಿ ನೀಡಲಾಗಿದೆ. ಜನಜಾಗೃತಿ ವೇದಿಕೆಯ ಕಾರ್ಯಕ್ರಮದಿಂದ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿದ್ದು, ಕಳ್ಳಭಟ್ಟಿ, ಅನಧಿಕೃತ ಮದ್ಯಮಾರಾಟ, ಕೋಳಿ ಅಂಕ, ಜೂಜು ಮತ್ತಿತರ ದಂಧೆ ಗಣನೀಯವಾಗಿ ಕಡಿಮೆಯಾಗಿದೆ. ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ 2000 ಮಂದಿಗೆ ಗೌಪ್ಯವಾಗಿ ವ್ಯಸನ ಬಿಡುವ ಮನಪರಿವರ್ತನೆಯ ಚಿಕಿತ್ಸೆ ನೀಡಲಾಗಿದೆ ಎಂದರು.
ಧರ್ಮಸ್ಥಳ ವಿಶ್ವಪ್ರಸಿದ್ಧ ಕ್ಷೇತ್ರ; ರಾಜ್ಯಪಾಲ
ಧಾರ್ಮಿಕತೆ, ಧರ್ಮಪಾರಾಯಣ, ಮಾನವೀಯ ಸಕಾತ್ಮಕತೆಯ ಭೂಮಿ, ದಕ್ಷಿಣ ಭಾರತದ ಪ್ರಾಚೀನ, ಐತಿಹಾಸಿಕ, ಸುಂದರ, ಚಮತ್ಕಾರಿತ ಧಾರ್ಮಿಕ ಸ್ಥಳ ಧರ್ಮಸ್ಥಳಕ್ಕೆ ಎರಡನೇ ಬಾರಿ ಆಗಮಿಸುತ್ತಿರುವುದು ಬಹಳ ಖುಷಿಕೊಟ್ಟಿದೆ.
ಇಲ್ಲಿ ಸೇರಿರುವ ವ್ಯಸನಮುಕ್ತರ ಮನೆಯ ಮಹಿಳೆಯರ ನಗು ಕ್ಷೇತ್ರಕ್ಕೆಬಸಂದ ಗೌರವ. ತನ್ನ 20 ನೇ ವರ್ಷದಲ್ಲೇ ಈ ಕ್ಷೇತ್ರದ ಧರ್ಮಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಹೆಗ್ಗಡೆಯವರು ತನ್ನ ಪರಿವಾರದ ಜೊತೆಗೂಡಿ ಕಠೋರ ಮತ್ತು ಸಕಾರಾತ್ಮಕ ಪರಿಶ್ರಮದಿಂದಾಗಿ ಕ್ಷೇತ್ರ ಇಂದು ದೇಶ ಮಾತ್ರವಲ್ಲ ವಿಶ್ವದಲ್ಲೇ ಪ್ರಸಿದ್ದವಾಗಿದೆ.
ಥಾವರ್‌ಚಂದ್ ಗೆಹ್ಲೋಟ್
ರಾಜ್ಯಪಾಲರು, ಕರ್ನಾಟಕ