ಆರೋಪಿ ಅಶೋಕ ಗೌಡ ಕಾನರ್ಪ
ಬೆಳ್ತಂಗಡಿ: ಬೆಳಾಲು ಗ್ರಾಮದ ಕೆರೆಕೋಡಿ ನಿವಾಸಿ ಮನೆಯಲ್ಲಿ ಒಬ್ಬಂಟಿಯಿದ್ದ ವೃದ್ಧೆ ಅಕ್ಕುಅವರನ್ನು ಸಾಯಿಸಿ ಚಿನ್ನ ಅಪಗರಿಸಿದ ಸ್ವತಃ ಮೊಮ್ಮಗನನ್ನೇ ಧರ್ಮಸ್ಥಳ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.
ಪರಿಚಯಸ್ತನಾಗಿ ಮನೆಗೆ ಬಂದು ಅಜ್ಜಿಯ ಜೊತೆ ಪ್ರೀತಿಯಿಂದ ವರ್ತಿಸಿ ಮಧ್ಯಾಹ್ನ ಆಕೆ ನೀಡಿದ ಊಟವನ್ನೂ ಸೇವಿಸಿ ಬಳಿಕ ಆಕೆಯನ್ನು ಹೊಡೆದು ಸಾಯಿಸಿ ಕಿವಿ ಬೆಂಡೋಲೆ ದೋಚ್ಚಿದ್ದೆಂದು ಸ್ವತಃ ಆರೋಪಿ ತನಿಖೆಯ ವೇಳೆ ಒಪ್ಪಿಕೊಂಡಿದ್ದಾನೆ.
ಆರೋಪಿಯನ್ನು ಕಡಿರುದ್ಯಾವರ ಗ್ರಾಮದ ಕಾನರ್ಪ ನಿವಾಸಿ ಅಶೋಕ ಗೌಡ (32) ಎಂಬಾತನೆಂದು ಗುರುತಿಸಲಾಗಿದೆ.
ಆರೋಪಿ ಮತ್ಯಾರೂ ಅಲ್ಲ ಅಜ್ಜಿಯ ಸೊಸೆಯ ಅಕ್ಕನ ಮಗನೇ ಆಗಿದ್ದಾನೆ.
ಕೊಲೆ ನಡೆದ ಜಾಗ
ಕೆರೆಕೋಡಿ ಮನೆಯಲ್ಲಿ ಹಾಡಹಗಲೇ ವೃದ್ದೆ ಮೇಲೆ ಹಲ್ಲೆ ನಡೆಸಿ ಅವರ ಕಿವಿಯಲ್ಲಿದ್ದ ಬೆಂಡೋಲೆ ಕಳ್ಳತನಗೈಯ್ಯಲಾಗಿತ್ತು.ಶನಿವಾರ ಮಧ್ಯಾಹ್ನ ಈ ಘಟನೆ ಬೆಳಕಿಗೆ ಬಂದಿತ್ತು. ಕೊಲೆ ನಡೆದ ಅಜ್ಜಿಯ ಮನೆಅಶೋಕ ಎಳೆಯ ಪ್ರಾಯದವನಾದರೂ ವಿಪರೀತ ಕುಡಿತದ ಚಟ ಅಂಟಿಸಿಕೊಂಡಿದ್ದ. ಕುಡಿತಕ್ಕಾಗಿ ಹಣ ಇಲ್ಲದೆ ಕೇವಲ ಇದೇ ಆಸೆಗಾಗಿ ಅಜ್ಜಿಯನ್ನು ಕೊಲೆಗೈದಿದ್ದಾನೆ. ಅಜ್ಜಿಯನ್ನು ಕಾಣಲು ಬಂದಿದ್ದ ಅಶೋಕನ್ನು ಅಜ್ಜಿ ಪ್ರೀತಿಯಿಂದ ಬರಮಾಡಿಕೊಂಡಿದ್ದರು. ಮಧ್ಯಾಹ್ನ 12 ಗಂಟೆಗೆ ಬಂದಿದ್ದ ಆತ ಬಳಿಕ ಅಜ್ಜಿ ಕೊಟ್ಟ ಊಟ ಕೂಡ ಸೇವಿಸಿದ್ದ.ಇದೆಲ್ಲ ಆದ ಮೇಲೆ ಆಕೆಯ ಕಿವಿಯಲ್ಲಿ ಇದ್ದ ಬೆಂಡೋಲೆ ಕಸಿದುಕೊಳ್ಳುವ ಉದ್ಧೇಶದಿಂದ ಅಜ್ಜಿಯನ್ನು ದೂಡಿಹಾಕಿ ಹಲ್ಲೆ ಮಾಡಿದ್ದ. ಒಮ್ಮೆಲೇ ಆದ ಘಟನೆಯಿಂದ ಗಾಯ ಮತ್ತು ಆಘಾತಕ್ಕೊಳಗಾದ ಅಜ್ಜಿ ನೆಲಕ್ಕೆ ಬಿದ್ದಲ್ಲೇ ಸಾವನ್ನಪ್ಪಿದ್ದರು. ಇದಾದ ಬಳಿಕ ಅಶೋಕ ಗೌಡ ಅಜ್ಜಿಯ ಕಿವಿಯ ಬೆಂಡೋಲೆ ಕಸಿದುಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದ ಎಂದು ವಿವರಿಸಿದ್ದಾನೆ.
ಆರೋಪಿ ಸೋಮಂತಡ್ಕ ದಲ್ಲಿ ವಶಕ್ಕೆ
ಘಟನೆಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಮಾಹಿತಿ ಸಂಗ್ರಹಿಸಿದ ಪೊಲೀಸರು ಕೆಲವೇ ಘಂಟೆಗಳ ಅಂತರದಲ್ಲಿ ಶಂಕಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆತ ಆಗಿರುವ ಎಲ್ಲಾ ಘಟನೆಯನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇದೀಗ ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಆತನಿಗೆ ಮುಂದಿನ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.