ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ನಿಡಿಗಲ್ ಗಣಪತಿ ದೇವಸ್ಥಾನದ ಬಳಿ ಆಗಿರುವ ಗುಂಡಿಯ ಬಳಿ ಕಳೆದ ಮೇ 23ರಂದು ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡಿದ್ದ ಮುಂಡಾಜೆ ಕಾಯರ್ತೋಡಿ ನಿವಾಸಿ, ಜ್ಯೋತಿಷಿ ಗೋಪಾಲಕೃಷ್ಣ ಜೋಶಿ(57) ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಜೋಷಿ ಅವರಿಗೆ ಅಪಘಾತದಿಂದ ಬೆನ್ನು ಮೂಳೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದು ಅದಕ್ಕೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಅಲ್ಲಿಂದ ಆಯುರ್ವೇದ ಚಿಕಿತ್ಸೆಗಾಗಿ ಉಡುಪಿಯ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆ ಬಳಿಕ ಚೇತರಿಸಿಕೊಂಡು ಮನೆಗೆ ಕರೆತರಲಾಗಿತ್ತು. ಕಳೆದ ಎರಡು ದಿನಗಳಿಂದ ಅವರಿಗೆ ಮೂತ್ರದ ಸಮಸ್ಯೆಯೊಂದಿಗೆ ಹಿಮೋ ಗ್ಲೋಬಿನ್ ಕುಸಿತವಾದ ಪರಿಣಾಮ ಅವರನ್ನು ಮತ್ತೆ ಅತ್ತಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಚಿಕಿತ್ಸೆಗೆ ಸ್ಪಂದಿಸದ ಅವರು ಬುಧವಾರ ಬೆಳಿಗ್ಗೆ ನಿಧನರಾದರು.
ಕೃಷಿಯ ಜತೆ ಪೌರೋಹಿತ್ಯವನ್ನು ಮಾಡುತ್ತಿದ್ದ ಜೋಷಿ ಅವರು ರೋಟರಿ ಸಮುದಾಯದಳ, ರೈತ ಸೇವಾ ಕೂಟ, ಚಿತ್ಪಾವನ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಪ್ರಸ್ತುತ ಅವರು ಮುಂಡಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಪತ್ನಿ, ಪುತ್ರ ಮತ್ತು ಪುತ್ರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಜೀವ ಕಸಿದುಕೊಂಡ ಮರಣ ಗುಂಡಿ
ಮುಂಡಾಜೆ ಗ್ರಾಮ ವ್ಯಾಪ್ತಿಗೊಳಪಟ್ಟ ನಿಡಿಗಲ್ ಗಣಪತಿ ದೇವಸ್ಥಾನದ ಸಮೀಪ ರಾಷ್ಟ್ರೀಯ ಹೆದ್ದಾರಿ ಯಲ್ಲೇ ನೀರಿನ ಪೈಪ್ ಕಾರಣದಿಂದ ಪ್ರತೀಬಾರಿ ರಸ್ತೆ ಡಾಂಬರು ಕಿತ್ತುಬಂದು ಹೊಂಡ ನಿರ್ಮಾಣವಾಗುತ್ತಿದೆ. ಇದು ಧವಿಚಕ್ರ ವಾಹನ ಸವಾರರಿಗಂತೂ ಮರಣಗುಂಡಿಯಾಗಿ ಪರಿವರ್ತನೆಯಾಗಿದೆ. ಇಲ್ಲಿ ಹೊಂಡ ಇರುವುದು ದೂರಕ್ಕೆ ಗೋಚರವಾಗದಿರುವುದರಿಂದ ಅನೇಕ ಮಂದಿಯ ವಾಹನ ಒಮ್ಮೆಲೇ ಇದಕ್ಕೆ ಬಿದ್ದು ನಿಯಂತ್ರಣ ತಪದಪುತ್ತಿದೆ. ಇನ್ನೂ ಹಲವರು ಇಲ್ಲಿಬಿದ್ದು ಶಾಶ್ವತ ವಿಕಲಚೇತನರಾಗಿದ್ದಾರೆ. ಅದಾಗ್ಯೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣಿಸುವಲ್ಲಿ ಹೆದ್ದಾರಿ ಇಲಾಖೆ ಸಂಪೂರ್ಣ ವಿಫಲವಾಗಿದೆ. ಅನೇಕ ಬಾರಿ ಇಲ್ಲಿ ಪೇಚ್ ವರ್ಕ್ ಮಾಡಿದರೂ ಅದು ಒಳಗಿನಿಂದ ನೀರು ಹರಿದುಬಂದು ಕರಗಿ ಮತ್ತದೇ ಗುಂಡಿ ನಿರ್ಮಾಣವಾಗುತ್ತಿದೆ. ಆದ್ದರಿಂದ ಇಲ್ಲಿ ಆಗುತ್ತಿರುವ ಅಪಘಾತಕ್ಕೆ ಯಾರು ಹೊಣೆ ಎಂಬುದೇ ಇದೀಗ ಎದ್ದಿರುವ ಪ್ರಶ್ನೆ.
ಜೋಷಿಯವರಿಗೆ ಅಪಘಾತವೆಸಗಿದ ವಾಹನ ಪತ್ತೆಯೇ ಇಲ್ಲ;
ಕಳೆದ ಮೇ.23 ರಂದು ಜೋಷಿ ಅವರು ತನ್ನ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಂತೆ ರಸ್ತೆ ಗುಂಡಿ ನೋಡಿ ಒಮ್ಮೆಲೇ ತನ್ನ ವಾಹನ ನಿಧಾನಗೊಳಿಸಿದ್ದರು. ಈ ವೇಳೆ ಅವರ ಹಿಂಭಾಗದಿಂದ ಬರುತ್ತಿದ್ದ ವಾಹನ ಇವರ ಬೈಕಿಗೆ ಹಿಂದಿನಿಂದ ಅಪಘಾತವೆಸಗಿ ಪರಾರಿಯಾಗಿತ್ತು. ಈಗ ಉಜಿರೆ ಮುಂಡಾಜೆ ಮತ್ತು ಆಸುಪಾಸಿನಲ್ಲೆಲ್ಲಾ ಸಿಸಿ ಕೆಮರಾ ವ್ಯವಸ್ಥೆಗಳು ಸಾಕಷ್ಡು ಇದ್ದರೂ
ಅಪಘಾತ ನಡೆದು ಇಷ್ಟು ದಿನವಾದರೂ, ಅಂದು ತಪ್ಪಿಸಿಕೊಂಡ ವಾಹನವನ್ನು ಇನ್ನೂ ಪತ್ತೆಮಾಡಲಾಗದೇ ಇರುವುದು ಆಶ್ಚರ್ಯ ತಂದಿದೆ.
ಒಟ್ಟಾರೆಯಾಗಿ ಇನ್ನಷ್ಟು ದಿನ ಬದುಕಿ ಬಾಳಿ ಸಮಾಜ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕಾಗಿದ್ದ ಗೋಪಾಲಕೃಷ್ಣ ಜೋಷಿ ಅವರು ಈ ರೀತಿ ಅಪಘಾತಕ್ಕೆ ತುತ್ತಾಗಿ ಅನ್ಯಾಯವಾಗಿ ಮೃತಪಟ್ಟಿರುವುದು ಬೇಸರ ತರಿಸಿದೆ.
ಒಟ್ಟಾರೆ ಬೆಳವಣಿಗೆಯಲ್ಲಿ ಈ ಸಾವು ನ್ಯಾಯವೇ ಎಂಬ ಪ್ರಶ್ನೆ ಮೂಡಿದೆ. ಇದರ ಹೊಣೆಯನ್ನು ಹೆದ್ದಾರಿ ಇಲಾಖೆ ಹೊರಬೇಕೇ? ನೀರಿನ ಪೈಪ್‌ಲೈನ್ ಕಾಮಗಾರಿಯಲ್ಲಿ ಆಗುತ್ತಿರುವ ಸೋರುವಿಕೆಯಿಂದ ಆಗಿದ್ದಲ್ಲಿ ಇದು ಯಾವ ಪ್ರಾಧಿಕಾರಕ್ಕೆ ಬರುತ್ತದೋ ಅವರ ಜವಾಬ್ದಾರಿಯೇ ಎಂಬುದಾಗಿ ಸಾರ್ವಜನಿಕರಿಗೆ, ಮೃತರ ಕುಟುಂಬಸ್ತರಿಗೆ ಸ್ಪಷ್ಟತೆ ಬೇಕಾಗಿದೆ.