ಬೆಳ್ತಂಗಡಿ: ತಾಲೂಕಿನ ತೆಂಕಕಾರಂದೂರು ಗ್ರಾಮದ ಆಲಡ್ಕ ಎಂಬಲ್ಲಿ 2018 ಮಾ.19ರಂದು ಕಾರೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿಹೊಡೆದು ಬೈಕ್ ಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಂಧಿಸಿದಂತೆ, ಆರೋಪಿ ಪುತ್ತೂರು ತಾಲೂಕಿನ ಕೋಡಿಂಬಾಳ ನಿವಾಸಿ ಶ್ರೀನಾಥ ಬಿ. ಅವರಿಗೆ ಬೆಳ್ತಂಗಡಿ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಆರೋಪಿ ಶ್ರೀನಾಥ ಅವರ ಕಾರು ಸುಚಿನ್ ಹೆಗ್ಡೆ ಎಂಬುವರು ಚಲಾಯಿಸುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಸಹಸವಾರ ಜಿತೇಶ್ ಕುಮಾರ್ ಜೈನ್ ಸಣ್ಣಪುಟ್ಟ ಗಾಯದಿಂದ ಪಾರಾಗಿ ಸವಾರ ಸುಚಿನ್ ಹೆಗ್ಡೆ (18ವ.) ಗಂಭೀರ ಗಾಯದೊಂದಿಗೆ ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದರು. ಆರೋಪಿ ವಿರುದ್ಧ ಆಗಿನ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ತನಿಖಾ ಸಹಾಯಕರಾಗಿ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರಾಗಿರುವ ಆಗಿನ ಹೆಡ್ ಕಾನ್ಸ್‌ಟೇಬಲ್ ವೆಂಕಟೇಶ್ ನಾಯ್ಕ್ ಸಹಕರಿಸಿದ್ದರು.
ಬೆಳ್ತಂಗಡಿ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಸತೀಶ ಕೆ.ಜಿ. ವಾದ ವಿವಾದ ಆಲಿಸಿ ಆರೋಪಿ ಶ್ರೀನಾಥ ಬಿ. ದೋಷಿಯೆಂದು ನಿರ್ಣಯಿಸಿ ಕಲಂ 279 ಮತ್ತು 337 ರಡಿ ಪ್ರತ್ಯೇಕವಾಗಿ 1 ತಿಂಗಳು ಜೈಲು ಶಿಕ್ಷೆ ಮತ್ತು ಒಂದು ಸಾವಿರ ರೂ.ದಂಡ, ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಜೈಲು ಶಿಕ್ಷೆ ಮತ್ತು ಐಪಿಸಿ ಕಲಂ 304(ಎ)ರಡಿ ಅಪರಾಧಕ್ಕೆ 1 ವರ್ಷ ಜೈಲು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ, ತೆರಲು ತಪ್ಪಿದಲ್ಲಿ ಒಂದು ತಿಂಗಳ ಜೈಲು ಶಿಕ್ಷೆ ಹಾಗೂ ಸಿಎಂವಿ ನಡಿ 115 ಜತೆಗೆ 190(2) ಮೋಟಾರು ವಾಹನ ಕಾಯ್ದೆಯಡಿ ಅಪರಾ‘ಕ್ಕಾಗಿ 1 ಸಾವಿರ ರೂ. ದಂಡ ವಿಧಿಡಿರುವುದಲ್ಲದೆ ಮೃತರ ವಾರೀಸುದಾರರಿಗೆ 50 ಸಾವಿರ ರೂ. ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಬೆಳ್ತಂಗಡಿ ಸರಕಾರಿ ಅಭಿಯೋಜಕ ದಿವ್ಯರಾಜ್ ವಾದ ಮಂಡಿಸಿದ್ದಾರೆ.