ಬೆಳ್ತಂಗಡಿ: ಕರಾವಳಿ ಭಾಗಕ್ಕೆ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಚಾರ್ಮಾಡಿ ಕಣಿವೆ ರಸ್ತೆಯ 6ನೇ ತಿರುವಿನಲ್ಲಿ ರಸ್ತೆ ಕುಸಿತವಾಗಿರುವುದರಿಂದ ಜು.24 ರಿಂದ ಇಲ್ಲಿ ರಾತ್ರಿ 7 ರಿಂದ ಬೆಳಗ್ಗಿನವರೆಗೆ ಯಾವುದೇ ತೆರನಾದ ವಾಹನಗಳ ಸಂಚಾರವನ್ನು ನಿಷೇಧಿಸಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ರಸ್ತೆಯ ಒಂದು ಪಾರ್ಶ್ವದ ಮಣ್ಣು ಕುಸಿದು ತಡೆಗೀಡೆಗೂ ಹಾನಿಯಾಗಿದೆ. ಈ ಪ್ರದೇಶದಲ್ಲಿ ಒಂದು ವಾಹನ ಮಾತ್ರ ಅತ್ತಿಂದಿತ್ತ ಸಂಚರಿಸಲು ಮಾತ್ರ ಸಾಧ್ಯವಾಗುತ್ತಿದೆ. ಇದು ಅಪಾಯ ಮತ್ತು ವಾಹನ ಧಟ್ಟಣೆಗೆ ಕಾರಣವಾಗುತ್ತಿದೆ. ಅಲ್ಲದೆ ಅಪಾಯದ ವಾತಾವರಣ ಇದೆ ಎನ್ನುವ ಕಾರಣಕ್ಕೆ ಡಿಸಿ ಅವರು ಈ ಆದೇಶ ನೀಡಿದ್ದಾರೆ.
ಸದ್ಯಕ್ಕೆ ಈ ಭಾಗದಲ್ಲಿ ಬ್ಯಾರಿಕೇಡ್ ಮತ್ತು ಎಚ್ಚರಿಕೆ ಪಟ್ಟಿಯನ್ನು ಅಳವಡಿಸಿಲಾಗಿದೆ.
ಜುಲೈ 23ರ ಸಾಯಂಕಾಲ 7ಗಂಟೆಯಿಂದ ಬೆಳಗ್ಗಿನ ವರೆಗೆ ಮುಂದಿನ ಆದೇಶ ರವರೆಗೆ ಚಾರ್ಮಾಡಿ ಘಾಟ್ ಸಂಚಾರ ಬಂದ್ ಆಗಲಿದೆ. ಹಗಲು ವೇಳೆ ಕೂಡ ಲಘು ವಾಹನಗಳನ್ನು ಮಾತ್ರ ಅನುಮತಿಸಲಾಗಿದೆ. ಇದರಿಂದಾಗಿ ಸರಕು ಸಾಗಾಣಿಕೆ ವಾಹನಗಳು ಪರ್ಯಾಯ ರಸ್ತೆ ಬಳಸುವುದು ಅನಿವಾರ್ಯವಾಗಿದೆ.
ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರಸ್ತೆಗೆ ಮರಗಳು ಉರುಳಿ ಬೀಳುವ ಹಾಗೂ ಭೂಕುಸಿತ ಸಾಧ್ಯತೆ ಅಧಿಕವಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ. ಇದೀಗ ಕುಸಿತಗೊಂಡಿರುವ 6ನೇ ತಿರುವಿನಲ್ಲಿ ತಾತ್ಕಾಲಿಕವಾಗಿ ಮರಳಿನ ಗೋಣಿಗಳನ್ನು ಪೇರಿಸಿಟ್ಟು ಸಂಭಾವ್ಯ ದುರಂತ ತಪ್ಪಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತವಾಗಿದೆ.