ಬೆಳ್ತಂಗಡಿ : ಕನ್ನಾಜೆ ಗ್ರಾಮಸ್ಥರು ಬೆಳ್ತಂಗಡಿ ನಗರಕ್ಕೆ ಬರಬೇಕಾದರೆ 5.5 ಕೀ.ಮೀ ಸುತ್ತಿಬಳಸಿ ಬರಬೇಕಾಗಿತ್ತು. ವಾಹನ ಬಾಡಿಗೆ ಕೂಡ 150 ರೂ. ಇತ್ತು.
ಬಾಡಿಗೆಗೆ ಕರೆದರೂ ರಿಕ್ಷಾ ಚಾಲಕರು ರಸ್ತೆ ಸರಿಯಿಲ್ಲದೆ ಬರುತ್ತಿರಲಿಲ್ಲ. ಇದರಿಂದ ಕನ್ನಾಜೆ ಗ್ರಾಮಸ್ಥರಿಗೆ ತೊಂದರೆಯಾಗುತ್ತಿತ್ತು. ಈ ನೈಜ ಸಮಸ್ಯೆ ಮನಗಂಡು ಶಾಸಕ ಹರೀಶ್ ಪೂಂಜಾ ಅವರು ಲಾಯಿಲ- -ಕನ್ನಾಜೆ ಸಂಪರ್ಕ ರಸ್ತೆ ಅಭಿವೃದ್ಧಿಗೊಳಿಸಿದ್ದಾರೆ. ಇದನ್ನು ಸಹಿಸಲಾಗದೇ ಕಳಪೆ ಕಾಮಗಾರಿಯಾಗಿದೆ ಎಂದು ಮಾಜಿ ಶಾಸಕರು ಆರೋಪ ಮಾಡಿದ್ದು ಇದು ರಾಜಕೀಯ ಉದ್ದೇಶವಾಗಿದೆ ಎಂದು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಗಿರೀಶ್ ಡೋಂಗ್ರೆ ಹೇಳಿದ್ದಾರೆ.
ಅವರು ಗುರುವಾರ ಲಾಯಿಲ- ಕನ್ನಾಜೆ ರಸ್ತೆ ಕಳಪೆ ಆರೋಪದ ಬಗ್ಗೆ ಸ್ಪಷ್ಟನೆ ನೀಡುತ್ತಾ ಮಾತನಾಡಿದರು.
ಇನ್ನೂ ಕಾಮಗಾರಿ ಪೂರ್ಣವಾಗಿಲ್ಲ. ಕಾಮಗಾರಿ ನಡೆಯುತ್ತಿರುವಾಗ ಕಳಪೆಯಾಗಿದೆ ಎಂಬುದರಲ್ಲಿ ಹುರುಳಿಲ್ಲ. ಪೂರ್ಣಗೊಂಡ ನಂತರ ಗುತ್ತಿಗೆದಾರರಿಗೆ ಐದು ವರ್ಷ ನಿರ್ವಹಣೆ ಇದೆ. ಇಂಜಿನಿಯರ್ ಹಾಗೂ ಗುತ್ತಿಗೆದಾರರು ಉತ್ತಮ ಕೆಲಸ ಮಾಡುತ್ತಿದ್ದು ಯಾವುದೇ ಕಳಪೆ ಕಾಮಗಾರಿ ನಡೆಯುತ್ತಿಲ್ಲ. ಕಳಪೆ ಕಾಮಗಾರಿ ಆರೋಪ ಬಂದ ತಕ್ಷಣ ಶಾಸಕ ಹರೀಶ್ ಪೂಂಜಾ ಸಂಬಂದಪಟ್ಟ ಇಂಜಿನಿಯರ್‌ಗಳನ್ನು ಸಂಪರ್ಕಿಸಿ ಪರಿಶೀಲಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಕನ್ನಾಜೆ ಪ್ರದೇಶಕ್ಕೆ ಸುಮಾರು 20 ಕೋಟಿ ರೂ.ಗಳಿಗೂ ಅಧಿಕ ಅನುದಾನವನ್ನು ಶಾಸಕ ಹರೀಶ್ ಪೂಂಜಾ ಮಂಜೂರುಗೊಳಿಸಿದ್ದು ಗ್ರಾಮದ ಅಭಿವೃದ್ಧಿಗೆ ಸಂಪೂರ್ಣ ಸಹಕರಿಸಿದ್ದಾರೆ ಎಂದರು.
ವಿಶಾಲಾಕ್ಷಿ ಕನ್ನಾಜೆ ಮಾತನಾಡಿ, ಇಪ್ಪತೈದು ವರ್ಷ ಶಾಸಕರಾಗಿದ್ದವರಿಂದ ನಮ್ಮ ಗ್ರಾಮದ ರಸ್ತೆಯನ್ನು ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ. ಕೇವಲ ಮೂರುವರೆ ವರ್ಷದಿಂದ ಶಾಸಕರಾದ ಹರೀಶ್ ಪೂಂಜಾ ನಮ್ಮ ಬೇಡಿಕೆಗೆ ಸ್ಪಂದಿಸಿದ್ದಾರೆ. ಅಲ್ಲದೆ ನೀರಾವರಿ ಸೌಲಭ್ಯವನ್ನೂ ಒದಗಿಸಿದ್ದಾರೆ. ನಮ್ಮ ರಸ್ತೆಯ ಗುಣಮಟ್ಟದ ಬಗ್ಗೆ ಮೂರನೇ ವ್ಯಕ್ತಿಗಳು ಬಂದು ಪರಿಶೀಲಿಸುವುದು ಬೇಡ. ಗಾಮಸ್ಥರಾದ ನಾವೇ ನೋಡಿಕೊಳ್ಳುತ್ತೇವೆ ಎಂದರು.
ಜಗದೀಶ್ ಕನ್ನಾಜೆ ಮಾತನಾಡಿ, ಜನರ ಬೇಡಿಕೆ ಈಡೇರಿಸಲಾಗದವರು ಈಗ ಮಾಜಿ ಶಾಸಕರಾಗಲು ಸಾಧ್ಯವಾಗಿದೆ. ಇದೀಗ ನಮ್ಮ ಊರು ಅಭಿವೃದ್ಧಿಯಾಗುತ್ತಿರುವಾಗ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಹಿಂದೆ ಗ್ರಾಮಸ್ಥರು ಹಲವಾರು ಬಾರಿ ಮನವಿ ನೀಡಿದರೂ ಸ್ಪಂದನೆ ನೀಡದೇ ಗ್ರಾಮಸ್ಥರಿಗೆ ಅನ್ಯಾಯ ಮಾಡಿದ ಮಾಜಿ ಶಾಸಕರು ಇದೀಗ ಅಭಿವೃದ್ಧಿಯಾಗುತ್ತಿರುವಾಗ ರಾಜಕೀಯ ಮಾಡುತ್ತಿದ್ದಾರೆ. ಬಹುಕೋಟಿ ಅನುದಾನ ಒದಗಿಸಿಕೊಟ್ಟ ಶಾಸಕ ಹರೀಶ್ ಪೂಂಜಾರನ್ನು ಅಭಿನಂದಿಸುತ್ತೇವೆ. ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆಯ ಗುಣಮಟ್ಟವನ್ನು ನೋಡಬಹುದು. ಈ ಬಗ್ಗೆ ಸಂದಪಟ್ಟ ಅಧಿಕಾರಿಗಳನ್ನು ಶಾಸಕರು ನಿರ್ದೇಶಿಸಿದ್ದಾರೆ ಎಂದರು.
ಊರವರ ಪರವಾಗಿ ತಾ.ಪಂ ಮಾಜಿ ಸದಸ್ಯ ಸುಧಾಕರ್ ಎಲ್, ಪ್ರಮುಖರಾದ ಸುಂದರ ಶೆಟ್ಟಿ, ಆನಂದ, ಮೊದಲಾದವರು ಉಪಸ್ಥಿತರಿದ್ದರು.