ಬೆಳ್ತಂಗಡಿ; ಕರ್ನಾಟಕ ಉಚ್ಚ ನ್ಯಾಯಾಲಯದ 2020 ನೆ ಸಾಲಿನಲ್ಲಿ ಕರೆಯಲಾದ ಸಿವಿಲ್ ಜಡ್ಜ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಧರ್ಮಸ್ಥಳ ಗ್ರಾಮದ ನಾರ್ಯ ಚೇತನಾ (29ವ.) ಅವರು ಆಯ್ಕೆಯಾಗಿ ಸಿವಿಲ್ ನ್ಯಾಯಾಧೀಶೆಯಾಗಿ ಹೊರಹೊಮ್ಮಿದ್ದಾರೆ.
ನ್ಯಾಯಾಧೀಶರ ಆಯ್ಕೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಇದೀಗ ರಾಜ್ಯ ಉಚ್ಚ ನ್ಯಾಯಾಲಯ ಹೊರಡಿಸಿದ ಅಧಿಸೂಚನೆಯಂತೆ ಅವರ ಹೆಸರು ಪ್ರಕಡಗೊಂಡಿದೆ.
ನಾರ್ಯ ಎಂಬಲ್ಲಿನ ರಾಮಣ್ಣ ಪೂಜಾರಿ ಮತ್ತು ಸೀತಾ ದಂಪತಿಯ ನಾಲ್ಕು ಜನ ಮಕ್ಕಳಲ್ಲಿ ಚೇತನಾ ಎರಡನೆಯವರು.
ಇವರು ತಮ್ಮ 1-6 ತರಗತಿ ವಿದ್ಯಾಭ್ಯಾಸವನ್ನು ಉಪ್ಪಿನಂಗಡಿ ಸಮೀಪದ ಸರ್ಕಾರಿ ಪೆರ್ನೆ ಕನ್ನಡ ಮಾಧ್ಯಮ ಶಾಲೆಯಲ್ಲಿ, ಏಳನೇ ತರಗತಿ ಶಿಕ್ಷಣವನ್ನು ಧರ್ಮಸ್ಥಳ ಕನ್ಯಾಡಿ ಸರಕಾರಿ ಶಾಲೆಯಲ್ಲಿ, ಪ್ರೌಡ ಶಿಕ್ಷಣವನ್ನು ಶ್ರೀ. ಧ. ಮಂ. ಸೆಕೆಂಡರಿ ಶಾಲೆ ಧರ್ಮಸ್ಥಳದಲ್ಲಿ ಪಡೆದರು. ಮುಂದಿನ ಶಿಕ್ಷಣವನ್ನು ಬೆಳ್ತಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಸಿ, ಮಂಗಳೂರಿನ ಶ್ರೀ. ಧ. ಮಂ. ಕಾನೂನು ಕಾಲೇಜಿನಲ್ಲಿ 2016ರಲ್ಲಿ ಕಾನೂನು ಪದವಿ ಮುಗಿಸಿದವರಾಗಿದ್ದಾರೆ.
ಆರಂಭದಲ್ಲಿ ಬೆಳ್ತಂಗಡಿಯ ವಕೀಲರಾದ ಕೇಶವ ಪಿ. ಗೌಡ ಅವರ ಕಚೇರಿಯಲ್ಲಿ ವಕೀಲ ವೃತ್ತಿ ಆರಂಭಿಸಿ ನಂತರ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಬಿ. ಎ. ಪಾಟೀಲ್ ಅವರ ಲಾ ಕ್ಲಾರ್ಕ್ ರೀಸರ್ಚ್ ಅಸಿಸ್ಟಂಟ್ ಆಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಕೆಳೆದ ಒಂದು ವರ್ಷದಿಂದ ನ್ಯಾಯವಾದಿ ಶಿವಪ್ರಸಾದ್ ಶಾಂತನಗೌಡರ್ ರವರ ಕಚೇರಿಯಲ್ಲಿ ಕಿರಿಯ ವಕೀಲರಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ವೃತ್ತಿ ಜೀವನ ನಡೆಸುತ್ತಿದ್ದರು.