Posts

ಮಾರ್ಚ್ 3 ರಿಂದ 11ರ ವರೆಗೆ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನ ಬ್ರಹ್ಮಕಲಶೋತ್ಸವ

ಮಾರ್ಚ್ 3 ರಿಂದ 11ರ ವರೆಗೆ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನ ಬ್ರಹ್ಮಕಲಶೋತ್ಸವ 

✍️*ಅಚ್ಚು ಮುಂಡಾಜೆ*

 *ಸೀನಿಯರ್ ರಿಪೋರ್ಟರ್*

ಬೆಳ್ತಂಗಡಿ; ಸುಮಾರು ಒಂದು ಸಾವಿರ ವರ್ಷಗಳಿಗಿಂತಲೂ ಮಿಗಿಲಾದ ದಾಖಲಿತ  ಇತಿಹಾಸವುಳ್ಳ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅಷ್ಟಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮ 2026 ನೇ ಮಾರ್ಚ್ 3 ರಿಂದ ಮೊದಲ್ಗೊಂಡು ಮಾರ್ಚ್ 11 ರ ವರೆಗೆ ಭಕ್ತಿ‌ಭಾವ, ಧಾರ್ಮಿಕ  ಸಾಂಸ್ಕತಿಕ, ಸದ್ಭಾವನೆಗಳೊಂದಿಗೆ ಸಂಪನ್ನಗೊಳ್ಳಲಿದೆ. 

ಈ ಬಾರಿಯ ವಿವಿಧ ಕಾರ್ಯಕ್ರಮಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ ವಿರೇಂದ್ರ ಹೆಗ್ಗಡೆಯವರೂ ಸೇರಿದಂತೆ ಸುಪ್ರಸಿದ್ಧ ಮಠ ಮಾನ್ಯಗಳ ಸುಮಾರು 13 ಮಂದಿ ಶ್ರೇಷ್ಠ ಯತಿವರೇಣ್ಯರುಗಳು ದಿವ್ಯ ಸಾನಿದ್ಯ ನೀಡಲಿದ್ದಾರೆ. ಮಂತ್ರಿ ಮಹೋದಯರು,  ಜನಪ್ರತಿನಿಧಿಗಳನ್ನೂ ಒಳಗೊಂಡು 113 ಮಂದಿ ಅಗ್ರಮಾನ್ಯ ಗಣ್ಯ ಅತಿಥಿಗಳು ಕ್ಷೇತ್ರದ ವಿವಿಧ ದಿನಗಳ  ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ. 

ಕಾರ್ಯಕ್ರಮ ಒಟ್ಟಂದ ಕಾಪಾಡುವುದಕ್ಕಾಗಿ ವಿವಿಧ ಉಪಸಮಿತಿಗಳ ರಚನೆಯಾಗಿದ್ದು 1892 ಮಂದಿ ಕಾರ್ಯಕಕರ್ತರಾಗಿ ವಿವಿಧ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಇದು ಸ್ಥಳೀಯವಾಗಿ ಅತೀ ದೊಡ್ಡ ಸ್ವಾಗತ ಸಮಿತಿ ರಚಿತವಾಗಿರುವ ದಾಖಲೆಯ ಉತ್ಸವ ಸಮಿತಿಯಾಗಿ ಹೊಸ‌ ಇತಿಹಾಸ ಬರೆದಿದೆ. 

ವಿಜಯಗೋಪುರ, ಬ್ರಹ್ಮರಥ, ಪುಷ್ಪರಥ ಸಮರ್ಪಣೆ;

ಈ ಬಾರಿಯ ಬ್ರಹ್ಮಕಲಶೋತ್ಸವ ಕೇವಲ ಉಜಿರೆಗೆ ಮಾತ್ರವಲ್ಲ ನಾಡಿನುದ್ದಗಲ ನೆಲೆಯಾಗಿರುವ ಶ್ರೀ ಜನಾರ್ದನ ದೇವರ ಭಕ್ತರು ಹಾಗೂ ಆಸ್ತಿಕ ಬಾಂಧವರ ಧಾರ್ಮಿಕ ಹೆಮ್ಮೆಯ ಸಂಕೇತವೆಂಬಂತೆ ಶ್ರೀ ದೇವಳಕ್ಕೆ ವಿಜಯಗೋಪುರ ಸಮರ್ಪಿತವಾಗುತ್ತಿದೆ. ಬಹುಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ಬ್ರಹ್ಮರಥ ಹಾಗೂ ಲಕ್ಷಾಂತರ ರೂ ವೆಚ್ಚದಲ್ಲಿ ನಿರ್ಮಿಸಿದ ಪುಷ್ಪರಥ ಕೂಡ ಶ್ರೀ ದೇವರಿಗೆ ಅರ್ಪಣೆಯಾಗುತ್ತಿದ್ದು, ಒಟ್ಟಾರೆ ಈ ಬಾರಿಯ ಬ್ರಹ್ಮಕಲಶೋತ್ಸವ ದಾಖಲೆಯ ಪುಟಗಳಲ್ಲಿ ಸ್ವರ್ಣಾಕ್ಷರಗಳಲ್ಲಿ ಬರೆದಿಡುವ ಅಚ್ಚಳಿಯದ ಸ್ಮರಣೆಯಾಗಿ ಇತಿಹಾಸ ದಾಖಲಿಸಲಿದೆ.


ದೇವಳದ ಐತಿಹಾಸಿಕ ಹಿನ್ನೆಲೆ;

ಉಜಿರೆ ಶ್ರೀ ಜನಾರ್ದನ ದೇವರ ಸನ್ನಿದಾನವು ಬಂಗಾಡಿ ಸೀಮೆಯ ಪ್ರಧಾನ ವಿಷ್ಣು ಕ್ಷೇತ್ರವಾಗಿ, ಭಕ್ತರ ಶ್ರದ್ಧಾಕೇಂದ್ರವಾಗಿ ಪ್ರಸಿದ್ಧವಾಗಿದೆ.

ಗಜಪೃಷ್ಠಾಕಾರದ ಶ್ರೀ ಜನಾರ್ದನ ದೇವರ ಗರ್ಭಗುಡಿಯ ಬಲಭಾಗದಲ್ಲಿ ಶ್ರೀ ಮಂಜುಳೇಶ ದೇವರು, ಎಡಭಾಗದಲ್ಲಿ ಶ್ರೀ ಅಮ್ಮನವರು ಹಾಗೂ ಪರಿವಾರ ದೇವರುಗಳಾಗಿ ಬಲಮುರಿ ಶ್ರೀ ಮಹಾಗಣಪತಿ ಹಾಗೂ ಶ್ರೀ ನೆತ್ತೆ‌ರ್ ಮುಗುಳಿ ದೈವಸ್ಥಾನವಿದೆ. 800 ವರ್ಷಗಳ ಹಿಂದೆ ಅಚಾರ್ಯ ಮಧ್ವರು ಈ ಕ್ಷೇತ್ರಕ್ಕೆ ಬಂದು ಕರ್ಮ ನಿರ್ಣಯ ಎಂಬ ಗ್ರಂಥರಚಿಸಿದ ಉಲ್ಲೇಖವಿದೆ.

ಇಂತಹ ಪ್ರಾಚೀನ ಕ್ಷೇತ್ರವು ಪರಿಸರದ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ರಾಜಾಶ್ರಯವಾಗಿದ್ದು, ಈ ದೇವಸ್ಥಾನವನ್ನು ಉಜಿರೆಯ ಪ್ರತಿಷ್ಠಿತ ಪಡುವೆಟ್ನಾಯ ಮನೆತನದವರು ಆನುವಂಶೀಯ ಆಡಳಿತ ಮೊಕ್ತಸರರಾಗಿ ದೇವರ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಈ ಆಡಳಿತ ಪರಂಪರೆಯಲ್ಲಿ 1999 ರಿಂದ 2023ರ ವರೆಗೆ ಆಡಳಿತ ಮೊಕ್ತೇಸರರಾಗಿದ್ದ  ಗೌರವಾನ್ವಿತ ಯು. ವಿಜಯರಾಘವ ಪಡುವೆಟ್ನಾಯರು ಚಲಿಸುವ ದೇವಾಲಯದಂತೆ ದೇವತಾಸೇವೆ ಮಾಡಿ  ಕೀರ್ತಿಶೇಷರಾಗಿದ್ದಾರೆ.  ಉಜಿರೆಯ ಧಣಿಗಳೆಂದೇ ಪ್ರಸಿದ್ಧರಾಗಿ ಎಲ್ಲರ ಅದರಾಭಿಮಾನಗಳಿಗೆ ಪಾತ್ರರಾಗಿದ್ದ ಅವರ ಆಡಳಿತ ಕಾಲದಲ್ಲಿ ದೇವಸ್ಥಾನವನ್ನು ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ದಾಗೊಳಿಸಿ 2001 ಮತ್ತು 2013 ರಲ್ಲಿ ಅತ್ಯಂತ ವೈಭವಪೂರ್ಣವಾಗಿ ಬ್ರಹ್ಮಕಲಶೋತ್ಸವವನ್ನು ನಡೆಸಿಕೊಟ್ಟಿರುವುದಕ್ಕೆ ಈ ನಾಡು ಸಾಕ್ಷಿಯಾಗಿದೆ. 


ವಿಜಯಗೋಪುರ‌ ನಾಮಕರಣ;

2011ರಲ್ಲಿ ಕೀರ್ತಿಶೇಷ ಯು. ವಿಜಯರಾಘವ ಪಡುವೆಟ್ನಾಯರಿಗೆ ಊರವರ ಸಮರ್ಪಿಸಿದ 'ಸಪ್ತತಿ ಸಮ್ಮಾನ' ಸಮಾರಂಭದಲ್ಲಿ ಶ್ರೀ ದೇವಳಕ್ಕೆ ನೂತನ ಮತ್ತು ಭವ್ಯವಾದ ರಾಜಗೋಪುರವನ್ನು ನಿರ್ಮಿಸುವ ಬಗ್ಗೆ ಸಂಕಲ್ಪವಾಗಿತ್ತು. ಅವರ ಕಾಲಾನಂತರ ಪ್ರಸ್ತುತ ಅವರ ಆದರ್ಶಗಳು ಜನಮಾನಸದಲ್ಲಿ ನೆಲೆಯಾಗಲಿ ಎಂಬ ಉದ್ಧೇಶದಿಂದ  ರಾಜಗೊಪುರ ನಿರ್ಮಾಣ ಪಣತೊಟ್ಟು ಅದಕ್ಕೆ ನಿತ್ಯ ಸ್ಮರಣೀಯ 'ವಿಜಯಗೋಪುರ' ಎಂದೇ ನಾಮಕರಣ ಮಾಡಲಾಯಿತು. ಪ್ರಸ್ತುತ ದೇವಳದ ಆನುವಂಶೀಯ ಆಡಳಿತ ಮೊಕ್ತೇಸರರಾದ ಶರತ್‌ಕೃಷ್ಣ ಪಡುವೆಟ್ನಾಯ ಅವರ ಮುಂದಾಳತ್ವದಲ್ಲಿ ಬರೋಡದ ಖ್ಯಾತ ಉದ್ಯಮಿ  ಶಶಿಧರ ಶೆಟ್ಟಿ 'ನವಶಕ್ತಿ' ಇವರ ಅಧ್ಯಕ್ಷತೆಯ ಸಮಿತಿ  ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ರಾಜಗೋಪುರ ನಿರ್ಮಾಣ ಕಾರ್ಯ ಕೈಗೊಂಡು ಭಕ್ತಲೋಕಕ್ಕೆ ಕೊಡುಗೆಯಾಗಿ ಸಮರ್ಪಿತವಾಗುತ್ತಿದೆ.


2 ಕೋಟಿ ರೂ. ವೆಚ್ಚದ ಬ್ರಹ್ಮರಥ; 15 ಲಕ್ಷ ರೂ ವೆಚ್ಚದ ಪುಷ್ಪರಥ:

ಈ ಬಾರಿಯ ಬ್ರಹ್ಮಕಲಶೋತ್ಸವದೊಂದಿಗೆ ಇನ್ನೆರಡು ಸ್ಮರಣೀಯ ಕೊಡುಗೆಗಳು ಶ್ರೀ ದೇವರಿಗೆ ಸಮರ್ಪಿತವಾಗುತ್ತಿದ್ದು, ಮೂಲತಃ ಉಜಿರೆಯವರಾಗಿದ್ದು ಪ್ರಸ್ತುತ ಅಮೆರಿಕಾದಲ್ಲಿ ನೆಲೆಸಿರುವ ವೇದ‌ಮೂರ್ತಿಗಳು ಹಾಗೂ ಅಮೆರಿಕಾದ ಶ್ರೀ ವೆಂಕಟಕೃಷ್ಣ ಮಂದಿರದ ಅರ್ಚರಾಗಿರುವ ಕಿರಣ್ ರಾವ್ ಅವರು ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಬ್ರಹ್ಮರಥವನ್ನು ಶ್ರೀ ದೇವರಿಗೆ ಸಮರ್ಪಿಸಿ ಕೃತಾರ್ಥರಾಗುತ್ತಿದ್ದಾರೆ. ಅದರ ಜೊತೆಗೆ ಉಜಿರೆಯ ಬೆನಕ ಕನ್‌ಸ್ಟ್ರಕ್ಷನ್ಸ್ ಇದರ ಮಾಲಕ ಗಣೇಶ್ ಗೌಡ ಅವರು 15 ಲಕ್ಷ ರೂ. ವೆಚ್ಚದಲ್ಲಿ ನೂತನ ಪುಷ್ಪರಥವನ್ನು ಕೊಡುಗೆಯಾಗಿ ಅರ್ಪಣೆಗೊಳಿಸಲಿದ್ದಾರೆ.

ವೈಧಿಕ ಮತ್ತು ಕಾರ್ಯಕ್ರಮ ನೇತೃತ್ವಕ್ಕೆ ಅಗ್ರ ತಂಡ;

ಖ್ಯಾತ ತಂತ್ರಿವರೇಣ್ಯರಾದ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವದ ತಂಡ ವೈಧಿಕ ನೇತೃತ್ವ ವಹಿಸುತ್ತಿದ್ದು, ಪೂಜ್ಯ ವೀರೇಂದ್ರ ಹೆಗ್ಗಡೆಯವರ ಗೌರವ ಮಾರ್ಗದರ್ಶನದಲ್ಲಿ, ಡಿ ಹರ್ಷೇಂದ್ರ‌ ಕುಮಾರ್ ಅವರು ಪ್ರಧಾನ ಗೌರವಾಧ್ಯರಾಗಿ ಈ ಅಭೂತಪೂರ್ವ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಕ್ರಿಯಾ ಭಾಗದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಹಿರಿಯ ನ್ಯಾಯವಾದಿ ಹಾಗೂ ಎಂಎಲ್‌ಸಿ  ಪ್ರತಾಪಸಿಂಹ ನಾಯಕ್, ಕಾರ್ಯಾಧ್ಯಕ್ಷರು ಹಾಗೂ ವಿಜಯಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷರಾಗಿ 'ನವಶಕ್ತಿ' ಶಶಿಧರ ಶೆಟ್ಟಿ ಬರೋಡ ಇವರ ಪೂರ್ಣ  ಮುಂದಾಳತ್ವದಲ್ಲಿ ಅಪ್ರತಿಮ‌ ಸಂಘಟಕ ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಉಜಿರೆ, ಭರತ್ ಕುಮಾರ್, ಲಕ್ಷ್ಮಣ ಸಫಲ್ಯ, ರಾಜೇಶ ಪೈ ಇವರು ಪ್ರಧಾನ ನಿರ್ವಹಣೆಯಲ್ಲಿ ಭಕ್ತಾದಿಗಳು ಮತ್ತು ಊರ ಪರವೂರ ದಾನಿಗಳ ಒಗ್ಗೂಡುವಿಕೆಯೊಂದಿಗೆ ಈ‌ ಬಾರಿಯ ಬ್ರಹ್ಮಕಲಶೋತ್ಸವ ಮತ್ತು ರಾಜಗೋಪುರ ನಿರ್ಮಾಣ ಸಮಿತಿ ರಚಿತವಾಗಿದ್ದು ಯಶಸ್ವಿ ಕಾರ್ಯಾಚರಣೆ ನಡೆದಿದೆ. ಅವರ ಸಮಿತಿಯ ಈ ಘನಕಾರ್ಯ ಲಕ್ಷಾಂತರ ಭಕ್ತರನ್ನು‌ ಭಾವಪರವಶವಾಗಿಸುವುದರಲ್ಲಿ ಅನುಮಾನವಿಲ್ಲ.

ಕ್ಷೇತ್ರಕ್ಕೆ ಚಿತೈಸಿ ಹರಸಲಿರುವ ಯತಿಶ್ರೇಷ್ಠರುಗಳು;

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು, ಉಡುಪಿಯ ಹಂಗಾರಕಟ್ಟೆ ಶ್ರೀ ಬಾಳೆಕುದ್ರು ಮಠದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿಯವರು, ಕಾಸರಗೋಡು ಶ್ರೀ ಎಡನೀರು ಶ್ರೀ ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು, ಜೈನ‌ಮಠ ಮೂಡಬಿದ್ರೆಯ ಡಾ. ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು, ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು, ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ  ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿಯವರು, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿಯವರು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಂ ನ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು, ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಉಡುಪಿ ಪುತ್ತಿಗೆ ಮಠದ ಕಿರಿಯ ಪಟ್ಟಾಧಿಪತಿ ಶ್ರೀ ಸುಶೀಂದ್ರ ತೀರ್ಥ ಶ್ರೀ ಪಾದರು, ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನ ತೀರ್ಥ ಶ್ರೀ‌ಪಾದಂಗಳವರು ಹಾಗೂ ಉಡುಪಿ ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀ ಪಾದಂಗಳವರು ವಿವಿಧ ದಿನಗಳಲ್ಲಿ ಶ್ರೀ ಜನಾರ್ದನ ನ ಸನ್ನಿಧಿಗೆ ಚಿತ್ತೈಸಿ, ತಮ್ಮ ಮಂಗಳ ಉಪನ್ಯಾಸ ನೀಡುವ ಮೂಲಕ ಭಕ್ತರನ್ನು ಹರಸಲಿದ್ದಾರೆ. 

ಗಣ್ಯಮಾನ್ಯರು:

ಅಳದಂಗಡಿ ಅಜಿಲ ಸೀಮೆಯ ತಿಮ್ಮಣ್ಣರಣ ಡಾ. ಪದ್ಮ ಪ್ರಸಾದ ಅಜಿಲರೂ ಸೇರಿದಂತೆ ಅಗ್ರಪಂತಿಯ ಅತಿಥಿಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ದಿನೇಶ್ ಗುಂಡೂರಾವ್, ಕಂದಾಯ ಸಚಿವ ಕೃಷ್ಣ ಭೈರೇ ಗೌಡ ಅವರು, ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಕರ್ನಾಟಕ ಸರಕಾರದ ಮಾನವ ಹಕ್ಕು ಆಯೋಗದ ಅಧ್ಯಕ್ಷ ಟಿ ಶ್ಯಾಮ್ ಭಟ್, ಸಂಸದ ಬೃಜೇಶ್ ಚೌಟ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ, ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಸಹಿತ ಕರಾವಳಿಯ ವಿವಿಧ ಕ್ಷೇತ್ರದ ಶಾಸಕರುಗಳು, ವಿಧಾನ ಪರಿಷತ್ತಿನ ಶಾಸಕರುಗಳು ಹಾಗೂ ಹತ್ತಾರು ಕ್ಷೇತ್ರಗಳ ಗಣ್ಯ ಮಾನ್ಯ ಅತಿಥಿಗಳು, ಉದ್ಯಮ ಮತ್ತು ವಿವಿಧ ಕ್ಷೇತ್ರದ ಶಾಸಕರುಗಳು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.‌

ಮಹಾ ದಾನಿಗಳೂ‌ ಸೇರಿದಂತೆ ಒಟ್ಟು22 ಮಂದಿಗೆ ಗೌರವಾರ್ಪಣೆ ಕೂಡ ನಡೆಯಲಿದೆ. 

ಹೊರೆ ಕಾಣಿಕೆಯ ಸಂಭ್ರಮ;

ಬ್ರಹ್ಮಕಲಶೋತ್ಸವದ ಒಟ್ಟು‌7 ದಿನಗಳಲ್ಲಿ ಉಜಿರೆಯ ನಾನಾ ದಿಕ್ಕುಗಳ ಬೈಲುವಾರು- ಗ್ರಾಮವಾರು ವಿಂಗಡಣೆಯೊಂದಿಗೆ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ ಕಾರ್ಯವೂ ವೈಭವದಿಂದ ನಡೆಯಲಿದೆ. ಅದಕ್ಕಾಗಿ ರಚಿತವಾಗಿರುವ ಸಮಿತಿ ಆ ಕಾರ್ಯವನ್ನು ಅಚ್ಚುಕಟ್ಟುಗೊಳಿಸಿಕೊಡಲಿದೆ.

ಸಾಂಸ್ಕೃತಿಕ ವೈಭವ;

ಪುತ್ತೂರು ನರಸಿಂಹ ನಾಯಕ್ ಅವರಿಂದ ದಾಸಾಮೃತ ಭಕ್ತಿ ಗಾಯನ, ವಿಧುಷಿ ಶ್ರೇಯಾ ಕೊಳತ್ತಾಯ ಸುರತ್ಕಲ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಕೊಡವೂರು ಉಡುಪಿಯ ಮಾನಸಿ ಸುಧೀರ್ ಬಳಗದಿಂದ ನಾರಸಿಂಹ ನೃತ್ಯ ರೂಪಕ, ಕೃತಿ ಭಟ್ ಚೆನ್ನೈ ಬಳಗದಿಂದ ಶಾಸ್ತ್ರೀಯ ಸಂಗೀತ, ಎಸ್.ಡಿ.ಎಂ ಕಲಾವೈಭವ ಸಾಂಸ್ಕೃತಿಕ ವೈವಿಧ್ಯ, ಕಲಾಸಿರಿ ಮಂಜೇಶ್ವರ ತಂಡದಿಂದ ತುಳು ಸಾಮಾಜಿಕ ನೀತಿಬೋಧಕ ನಾಟಕ, ಕು. ಮೇಧಾ ವಿದ್ಯಾಭೂಷಣ್ ವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ದಾಸವಾಣಿ, ವಿಧುಷಿ ಸುಮಂಗಲಾ ರತ್ನಾಕರ ರಾವ್ ಬಳಗದವರಿಂದ ಹರಿ ಲೀಲಾಮೃತಂ ನೃತ್ಯ ವೈವಿಧ್ಯ, ವಿಧುಷಿ ಡಾ. ಚಿತ್ರಾ ಹೊಳ್ಳ ಪುತ್ತೂರು ಇವರ ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೂಷಿತ ಯಕ್ಷಗಾನ ಮಂಡಳಿ ಪಾವಂಜೆ ಯವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ, ಪದ್ಮಶ್ರೀ ಪಂಡಿತ್ ಎಂ ವೆಂಕಟೇಶ್ ಕುಮಾರ್ ಧಾರವಾಡ ಇವರಿಂದ ಹಿಂದೂಸ್ತಾನಿ ಗಾಯನ ಮತ್ತು ದಾಸವೈಭವ, ಪ್ರಸನ್ನ ಬೈಲೂರು ನಿರ್ದೇಶನದ ರಾಘು ಮಾಷ್ಟ್ರು ತುಳು ಹಾಸ್ಯಮಯ ನಾಟಕ, ಗಾನ ಗಂಧರ್ವ ಶಶಿಧರ ಕೋಟೆ ಮತ್ತು ತಂಡದಿಂದ ಭಕ್ತಿ ಸಂಗೀತ ಸಂಭ್ರಮ, ಧರ್ಮಸ್ಥಳ ಬಿ ಪ್ರಕಾಶ ದೇವಾಡಿಗ ಬಳಗದಿಂದ ನಾದ ಮಾಧುರ್ಯ ಸೇಕ್ಸೋಫೋನ್ ಸಂಗೀತ ಕಚೇರಿ, ಉಜಿರೆ ಸಂಗೀತ ಉತ್ಸವ 2026. ರಸಮಂಜರಿ ಕಾರ್ಯಕ್ರಮ ಇತ್ಯಾಧಿಗಳು ನಡೆಯಲಿದೆ.

ಅನ್ನದಾನ; ಪ್ರತಿದಿನ ನಡೆಯುವ ಕಾರ್ಯಕ್ರಮಗಳಲ್ಲಿ ತಾಲೂಕಿನ 81 ಗ್ರಾಮಗಳಿಂದಲೂ ಜನ ಹರಿದು ಬರುವ ನಿರೀಕ್ಷೆ ಇದೆ. ಹೊರ ತಾಲೂಕು, ಬೆಂಗಳೂರಿನಲ್ಲಿರುವ ಉಜಿರೆಯ ನಿವಾಸಿಗಳು ಸೇರಿದಂತೆ ಕ್ಷೇತ್ರಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಅನ್ನಪ್ರಸಾದ ವಿತರಣೆ ನಡೆಯಲಿದೆ. ಅದಕ್ಕಾಗಿ ರಚಿಸಿದ ಸಮಿತಿಯು ಈಗಾಗಲೇ ಕಾರ್ಯತಂತ್ರಗಳನ್ನು ರೂಪಿಸಿಕೊಂಡಿದೆ.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official