Posts

ಉಜಿರೆ ಜನಾರ್ದನ ಸ್ವಾಮಿಗೆ ವಿಜಯ 'ರಾಜ' ಗೋಪುರ

4500 ಮನೆಗಳಿಗೆ ಸ್ವತಹಾ ಭೇಟಿ ನೀಡಿದ ಶರತ್‌ಕೃಷ್ಣ ಪಡುವೆಟ್ನಾಯ ಮತ್ತು ಬಳಗ

ಶಶಿಧರ ಶೆಟ್ಟಿ ಬರೋಡ, ಮೋಹನ್ ಕುಮಾರ್ 'ಲಕ್ಷ್ಮೀ' ಬಳಗದ ಅದ್ಭುತ ಜೋಡೆತ್ತು ಸಾಹಸ, ಸಮಿತಿ ಪದಾಧಿಕಾರಿಗಳು, ಉಜಿರೆಯ ವರ್ತಕರು ಮತ್ತು ಶ್ರಮಾದಾನಿಗಳ ಅಪೂರ್ವ ಬೆಂಬಲ

ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಮೂರನೇ ಐತಿಹಾಸಿಕ ಬ್ರಹ್ಮಕಲಶೋತ್ಸವದ ಸಂಭ್ರಮದ ಜೊತೆಗೆ ಉಜಿರೆಯ ಘನತೆಯನ್ನು ಎತ್ತಿಹಿಡಿದಿರುವ ಇನ್ನೊಂದು ಮಹತ್ವದ ಮೈಲಿಗಲ್ಲೆಂದರೆ ದೇವಾಲಯಕ್ಕೆ ನೂತನವಾಗಿ ನಿರ್ಮಾಣಗೊಂಡಿರುವ ವಿಜಯ'ರಾಜ'ಗೋಪುರ!

ಇದರ ಅದ್ಭುತ ಪರಿಪೂರ್ಣತೆಗಾಗಿ ಕ್ಷೇತ್ರದ ಆನುವಂಶಿಕ ಆಡಳಿತ‌ ಮೊಕ್ತೇಸರರಾಗಿರುವ ಶರತ್‌ಕೃಷ್ಣ ಪಡುವೆಟ್ನಾಯ ಅವರು ಉಜಿರೆ ಹಾಗೂ  ಸುತ್ತಮುತ್ತಲಿನ 4500 ಮನೆಗಳಿಗೂ ವೈಯುಕ್ತಿಕ ಭೇಟಿ ನೀಡಿ ಗೋಪುರದ ಸಂದೇಶವನ್ನು ಪ್ರತೀ ಮನೆಗೂ ತಲುಪಿಸಿರುವುದು ಅವರ ಶ್ರಮಸಾಧಕ ದೇವರ ಸೇವೆಯೇ ಸರಿ. 

ಅಂತೆಯೇ ಇದರ ಮುಖ್ಯಸ್ಥಿಕೆಯನ್ನು ವಹಿಸಿಕೊಂಡು ಈ ಅಪ್ರತಿಮ ಸಾಧನೆಗೆ 'ನವಶಕ್ತಿ' ಯಾದವರು ಗೋಪುರ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿರುವ ಬರೋಡದ ಪ್ರಖ್ಯಾತ ಉದ್ಯಮಿ ಶಶಿಧರ ಶೆಟ್ಟಿ ಯವರು. ಇದರ ಇಂಚಿಂಚೂ ನಿರ್ಮಾಣದ  ನೇತೃತ್ವವನ್ನು ವಹಿಸಿದವರು ಉಜಿರೆಯ ನವ 'ಕನಸುಗಾರ' ಮೋಹನ್ ಕುಮಾರ್ 'ಲಕ್ಷ್ಮೀ ಗ್ರೂಪ್ಸ್' ಇವರು.

ಬೆನಕ ಕನ್ಸ್‌ಟ್ರಕ್ಷನ್ಸ್ ಇದರ ಮಾಲಿಕ ಗಣೇಶ್ ಗೌಡ ಅವರು ಈ ಕಾಮಗಾರಿಯ ಪೂರ್ಣ ಗುತ್ತಿಗೆದಾರರು. ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ‌ ರಾಜಗೋಪುರದ ಕಾಮಗಾರಿಯಲ್ಲಿ ತಾಂತ್ರಿಕ‌ ಭಾಗಗಳನ್ನು ಹೊರತುಪಡಿಸಿ ಬಹುತೇಕ ಭಾಗ ಶ್ರಮಾದಾನದ ಮೂಲಕವೇ ಆಗಿದೆ ಎಂಬುದು ಇನ್ನೊಂದು ಸ್ಪಟಿಕ ಸಮಾನ ಸತ್ಯ. 

ಕ್ಷೇತ್ರದ ಆಡಳಿತ ಮೊಕ್ತೇಸರರೂ 'ನಡೆದಾಡುವ ಜನಾರ್ದನ' ನಾಗಿದ್ದ ಕೀರ್ತಿಶೇಷ ವಿಜಯರಾಘವ ಪಡುವೆಟ್ನಾಯ ಅವರು ಕಂಡಿದ್ದ ಕನಸನ್ನು ನನಸು ಮಾಡಲು ಇಡೀ ಉಜಿರೆಯ ಜನತೆ ಟೊಂಕ ಕಟ್ಟಿ ನಿಂತು ಪ್ರೀತಿಯ ಧಣಿಗಳ ಉದ್ಧೇಶ ಈಡೇರಿಕೆಗೆ ಕಠಿಬದ್ಧತೆ ಪ್ರದರ್ಶಿಸಿ ಅಂತಿಮವಾಗಿ ವಿಜಯಿಯಾಗಿದ್ದಾರೆ. ಇದೀಗ  ನಿರ್ಮಾಣಗೊಂಡಿರುವ ಗೋಪುರಕ್ಕೆ ಕೀರ್ತಿಶೇಷ ವಿಜಯರಾಘವ ಪಡುವೆಟ್ನಾಯರ ಸ್ಮರಣೆಗಾಗಿ 'ವಿಜಯಗೋಪುರ' ಎಂದೇ ನಾಮಕರಣ ಮಾಡಲಾಗಿದೆ.

49 ಅಡಿ ಎತ್ತರದ ಗೋಪುರ, ಅತ್ಯದ್ಭುತ ಕಲಾಗಾರಿಕೆ

ಹೆಚ್ಚಾಗಿ ಇಂತಹಾ ಅದ್ಭುತ ಕೆಲಸಗಳನ್ನು ಕೈಗೊಳ್ಳುವಾಗ ದೂರದ ಊರುಗಳಿಂದ ತಜ್ಞ ಕಾರ್ಮಿಕರನ್ನು ಕರೆತರುವುದು ವಾಡಿಕೆ. ಆದರೆ ಉಜಿರೆಯ ಗೋಪುರದ ಕಾಮಗಾರಿ ಸಂಪೂರ್ಣ ವಿಭಿನ್ನವಾಗಿದ್ದು, ಸ್ಥಳೀಯ‌ ಮೇಸ್ರ್ತಿಗಳು, ಗುತ್ತಿಗೆದಾರರು, ಕೂಲಿಯಾಳುಗಳು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ಶ್ರಮಾದಾನಿಗಳಿಂದಲೇ ಸುಂದರವಾಗಿ ಮೈದಳೆದು ನಿಂತಿದೆ ಎಂದರೆ ಎಲ್ಲರೂ‌ ಹುಬ್ಬೇರಿಸುವ ಸಂಗತಿಯಾಗಿದೆ.

ಎಲ್ಲರ ಶ್ರಮದ ಅಂತಿಮ ಫಲಿತಾಂಶವೇ 49 ಅಡಿ ಎತ್ತರದಲ್ಲಿ ಅತ್ಯಾಕರ್ಷಕ ವರ್ಣಾಲಂಕಾರದೊಂದಿಗೆ ಕಂಗೊಳಿಸುತ್ತಿರುವ ಗೋಪುರ.ಇದು ಭಕ್ತರ ಹೃದಯ ತಳದಲ್ಲಿ ಭಕ್ತಿಯ ಭಾವಕ್ಕೆ ಹೊಸ ವ್ಯಾಖ್ಯಾನ ಬರೆದಿದೆ‌ ಎಂದರೆ ಖಂಡಿತಾ ತಪ್ಪಲ್ಲ.

75 ಸಾವಿರ ಕೆಂಪು ಇಟ್ಟಿಗೆಗಳು, 1 ಸಾವಿರ ಬ್ಯಾಗ್ ಸಿಮೆಂಟ್, 5 ಸಾವಿರ ಸಿಎಫ್‌ಟಿ ಶಿಲೆಯ ಬಳಕೆ


ದೀರ್ಘ ಬಾಳಿಕೆಯ ಭರವಸೆಯೊಂದಿಗೆ ಭವಿಷ್ಯದ‌ ದೂರದೃಷ್ಟಿಯ ಕಲ್ಪನೆಯ ಮೂಲಕ ಉಜಿರೆಯ ವಿಜಯಗೋಪುರ ತಲೆ ಎತ್ತಿ ನಿಂತಿದೆ. ಇದಕ್ಕಾಗಿ 75 ಸಾವಿರ ಕೆಂಪು ಇಟ್ಟಿಗೆ (ಕಾರ್ಖಾನೆ ಇಟ್ಟಿಗೆ) ಬಳಕೆಯಾಗಿದೆ. 1 ಸಾವಿರ ಚೀಲ ಸಿಮೆಂಟ್, ಮಹಾದ್ವಾರಕ್ಕೆ ಸಾಗುವಾಣಿ ಮರ, ಮೇಲಿನ ಛಾವಣಿಗೆ ಕೇರಳದಿಂದ ತರಿಸಿದ ಕಲ್ಬಾಗಿ ಮರ, ಗೋಪುರದ ಇಕ್ಕೆಲಗಳಲ್ಲಿ ತಲಾ 100 ಅಡಿಗಳಷ್ಟು ಶಿಲಾಮಯ ಪೌಳಿಯ ನಿರ್ಮಾಣ ಸೇರಿ ಅಂದಾಜು 5 ಸಾವಿರ ಸೇಫ್ಟಿಯಷ್ಟು ಶಿಲೆಯ ಕೆಲಸ, ಮೇಲ್ಚಾವಣಿಗೆ ಪೂರ್ತಿ‌ ಮರದ ಪಕ್ಕಾಸು ಹೋಲುವ ಕಬ್ಬಿಣದ ಪಕ್ಕಾಸುಗಳು, ಎರಡು ಪದರಗಳಾಗಿ ಕೆಳ ಹೆಂಚು ಮತ್ತು ಮೇಲಂಚು ಸೇರಿ ತಲಾ 9 ಸಾವಿರ ದಂತೆ 18 ಸಾವಿರ ಹೆಂಚುಗಳು, ಅದರ ಅಡಿಭಾಗಕ್ಕೆ ಫೈಬರ್ ನಿರ್ಮಿತ ಡಿಸೈನ್ ಶೀಟ್‌ನ ಪದರ ನಿರ್ಮಿಸಲಾಗಿದ್ದು ಒಟ್ಟು ಕಾಮಗಾರಿಯೇ ಇಂದು ಒಂದು ಅದ್ಭುತ ಸನ್ನಿವೇಶವನ್ನು ಸೃಷ್ಟಿಸಿದೆ. ದ್ರಾವಿಢ ಶೈಲಿಯಲ್ಲಿ ಹಲವು ಕೆತ್ತನೆಗಳು, ಕುಸುರಿ ಕೆಲಸಗಳು, ದಶಾವತಾರ ಇತ್ಯಾಧಿ ಇದರ ವಿಶೇಷತೆಗಳು.

ಗೋಪುರದ ತಳಪಾಯವನ್ನು ಪಿಲ್ಲರ್ ಮೂಲಕ ಭದ್ರವಾಗಿ ನಿರ್ಮಿಸಲಾಗಿದ್ದು‌ ಅಡಿಭಾಗದ ಖಾಲಿ ಜಾಗವನ್ನು ಸದ್ಬಳಕೆ ಮಾಡುವ ರೀತಿಯಲ್ಲಿ‌ ಭೀಮ್ ಬಳಸಿ ಚಾಣಾಕ್ಷತೆ‌ ಮೆರೆಯಲಾಗಿದೆ. 

ಸುರ್ಯ ಭಾಗಕ್ಕೆ ಹೋಗುವ ರಸ್ತೆ ಬದಿಯೇ ದೇವಾಲಯ ಇರುವುದಿರಂದ ಗೋಪುರದ ಪೌಳಿ ಧೂಳುಮಯವಾಗಿ ಸಮಸ್ಯೆಯಾಗಬಾರದೆಂಬ ನೆಲೆಯಲ್ಲಿ ನೇರ ನೀರು ಹಾಯಿಸಿ ಸ್ಬಚ್ಚಗೊಳಿಸಲು ಅನುವಾಗುವಂತೆ ಪೌಳಿಯ ಕೆಲಸವನ್ನು ಕಲ್ಲಿನಿಂದಲೇ ನಿರ್ಮಿಸಲಾಗಿದೆ. ಕಲ್ಲು ಆಗಿರುವುದಿಂದ ಅದಕ್ಕೆ ಪೈಂಟಿಂಗ್ ಕೂಡ ಮಾಡಬೇಕಾದ ಆವಶ್ಯಕತೆ ಇರುವುದಿಲ್ಲ ಎಂಬುದು ಸಮಿತಿಯ ದೂರದೃಷ್ಟಿಯ ಚಿಂತನೆ. 

'ಬದುಕು ಕಟ್ಟೋಣ ಬನ್ನಿ' ತಂಡದ ಶ್ರಮಾದಾನದ ಆದರ್ಶಕ್ಕೆ ಉಜಿರೆ ಮತ್ತೊಮ್ಮೆ ಸಾಕ್ಷಿ





ನೇತ್ರಾವತಿ ಸ್ವಚ್ಛತೆ, ಸರಕಾರಿ ಶಾಲೆಗಳ ಉನ್ನತೀಕರಣ, ಪ್ರಕೃತಿ‌ ದುರಂತ ಸಂದರ್ಭದ ವಿಶೇಷ ಸೇವೆ ಇವೇ ಮೊದಲಾದ ಶ್ರಮಾದಾನ ಸೇವೆಯ ಆದರ್ಶ ಮೆರೆದಿರುವ "ಬದುಕು ಕಟ್ಟೋಣ ಬನ್ನಿ" ತಂಡದ ಸದಸ್ಯರೇ ಬಹುತೇಕ ಶ್ರಮಾದಾನದ ಮೂಲಕ ಈ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. 

ಉಜಿರೆಯ ವರ್ತಕರು, ರಿಕ್ಷಾ ಚಾಲಕರು, ಕ್ಷೇತ್ರದ ಭಕ್ತರು ಸ್ತ್ರೀ ಪುರುಷರು, ವಯೋ ವೃದ್ಧರೆಂಬ ಭೇದವಿಲ್ಲದೆ, ಎಲ್ಲ ವರ್ಗದ ಜನರೂ ಕೂಡ ಕೈ ಜೋಡಿಸಿರುವುದು ಒಂದು ಇತಿಹಾಸವೇ ಸರಿ. ನಿತ್ಯ ವ್ಯಾಪಾರದಲ್ಲಿ ನಿರತರಾಗಿರುವ ಉಜಿರೆಯ ವರ್ತಕರು ಆರ್ಥಿಕ ಬಲವನ್ನೂ ನೀಡಿದ್ದಲ್ಲದೆ ಹೆಂಚಿನ ಬಣ್ಣ ಬಳಿಯುವ ಕಾಯಕದಿಂದ‌ ಮೊದಲ್ಗೊಂಡು ಎಲ್ಲರೂ ಎಲ್ಲಾ ಕೆಲಸಗಳಿಗೂ ಸೈ ಎಂಬಂತೆ ಉಜಿರೆಯ ಶ್ರಮದಾನದ ಆದರ್ಶಕ್ಕೆ ಸಾಕ್ಷಿಗಳಾಗಿದ್ದಾರೆ. 

ಲಾಯಿಲದ ರಮೇಶ್ ಅವರ ತಂಡದಿಂದ ಕಲ್ಲಿನ‌ ಕೆಲಸ, ಗಣೇಶ್ ಇಂಜಿನಿಯರ್ ಅವರ ನೇತೃತ್ವದ ಕೆಲಸಗಾರರ ತಳಪಾಯ ಸಹಿತದ ಪೂರ್ಣ ಕೆಲಸ, ಕೃಷ್ಣಪ್ಪ ಅವರ ನೇತೃತ್ವದ ಕಾರ್ಮಿಕರು ಸೇರಿ 6-7 ತಿಂಗಳುಗಳಲ್ಲಿ 20 ರಿಂದ ಅರಂಭಗೊಂಡು ನೂರಾರು ತಜ್ಞ ಕಾರ್ಮಿಕರು, ಸಾವಿರಾರು ಶ್ರಮದಾನಿಗಳೂ ಸೇರಿ ಇದರಲ್ಲಿ ಸೇವಾ ಬದ್ಧತೆ ತೋರಿದ್ದಾರೆ.ಮರದ ಕೆಲಸಗಾರರು 3 ತಿಂಗಳಿನಿಂದ ತಮ್ಮ ಕಲಾ ನೈಪುಣ್ಯತೆ ಧಾರೆಎರೆದಿದ್ದಾರೆ.

ಅನ್ಯಧರ್ಮೀಯರೂ ಬಂದು ಸೇವೆ, ಆರ್ಥಿಕ ಬೆಂಬಲ‌ ನೀಡಿರುವ ಐಖ್ಯತೆಯ ಸಂದೇಶ 'ಉಜಿರೆ' ಬ್ರಹ್ಮಕಲಶೋತ್ಸದ್ದು;'ನವಶಕ್ತಿ' ಶಶಧರ ಶೆಟ್ಟಿ


ಉಜಿರೆ ದೇವಸ್ಥಾನಕ್ಕೆವಿಜಯಗೋಪುರ ಬೇಕೆಂಬುದು ವಿಜಯ ರಾಘವ ಪಡುವೆಟ್ನಾಯರ ಕನಸಾಗಿತ್ತು. ಅವರ ಜೀವಿತ ಕಾಲದಲ್ಲೇ ಅದಕ್ಕೆ ಸಂಕಲ್ಪಿಸಿ ಅವರು ಚಾಲನೆ ಕೊಟ್ಟಿದ್ದರು. ಅವರು ಇರುವಾಗಲೇ ಇದು ಆಗಬೇಕಿತ್ತು. ಅವರ ಅಂತಿಮ ಕಾಲದಲ್ಲಿ ಶಶಿಧರ ಶೆಟ್ಟಿ ಅವರ ನೇತೃತ್ವದಲ್ಲಿ ಇದು ಆಗಬೇಕೆಂದು ಅವರ ಮಗನ ಬಳಿ ಹೇಳಿದ್ದರು. ಅಲ್ಲದೆ ಅಂತಿಮ ಕಾಲದಲ್ಲಿ ನನಗೆ ಆಶೀರ್ವಾದ ಕೂಡ ಮಾಡಿದ್ದರು. ಆದ್ದರಿಂದ ನನಗೆ ಇದನ್ನು ಮಾಡುವ ಯೋಗ ಸಿಕ್ಕಿತು. ಈಗ ಕೆಲಸ ಪರಿಪೂರ್ಣವಾಗಿದ್ದು ಬಹಳ ಸಂತೋಷವಾಗಿದೆ ಎಂದು ವಿಜಯಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ, ಬರೋಡದ ಉದ್ಯಮಿ ಶಶಿಧರ ಶೆಟ್ಟಿ 'ನವಶಕ್ತಿ' ಪ್ರತಿಕ್ರಿಯಿಸಿದ್ದಾರೆ. 

ವಿಜಯಗೋಪುರ ಮತ್ತು‌ ಈ ಬ್ರಹ್ಮಕಲಶ ಸಾಕಾರಗೊಳ್ಳುವಲ್ಲಿ ಊರವರು 'ದಾನ' ಮತ್ತು 'ಶ್ರಮಾದಾನ' ದೊಂದಿಗೆ ಶಕ್ತಿ ಮೀರಿ ಸಹಕರಿಸಿದ್ದಾರೆ. ಕ್ರೈಸ್ತ ಧರ್ಮೀಯರೂ ಬಂದು ಇಡೀ ದಿನ ಶ್ರಮದಾನ ಹಾಗೂ ಹೊರೆ ಕಾಣಿಕೆ ಸಮರ್ಪಿಸಿದ್ದಾರೆ. ಸಾಕಷ್ಟು ಮುಸಲ್ಮಾನ ಬಾಂಧವರೂ ಬಂದು ದೇಣಿಗೆ ನೀಡಿದ್ದಾರೆ‌. ಈ ರೀತಿ ಅನ್ಯ ಧರ್ಮೀಯರೂ ಕೂಡ ಕ್ಷೇತ್ರಕ್ಕೆ ಬಂದು ಸೌಹಾರ್ದತೆಯಿಂದ ಈ ಬ್ರಹ್ಮಕಲಶೋತ್ಸವ ನಡೆಯುತ್ತಿರುವುದೇ ಅತ್ಯಂತ ವಿಶೇಷ. ಕ್ಷೇತ್ರದ ಈಗಿನ ಡಳಿತ ಮೊಕ್ತೇಸರರಾದ ಶರತ್‌ಕೃಷ್ಣ ಪಡುವೆಟ್ನಾಯರು ಈ ಕೆಲಸದ ಸಾಕಾರಕ್ಕಾಗಿ ಬಡವ ಬಲ್ಲಿದ, ಮೇಲು‌ ಕೀಳು ಎಂಬ ಭೇದವಿಲ್ಲದೆ ಗ್ರಾಮ ಮತ್ತು ಸೀಮೆಯ ಪ್ರತೀ ಮನೆಗೂ ಭೇಟಿ ನೀಡಿದ್ದಾರೆ‌. ಈ‌ ಕಾರಣಕ್ಕೆ ಇಂದು ಎಲ್ಲರೂ ಒಂದೇ ಅನ್ನಛತ್ರದಡಿ ಊಟ ಮಾಡುವ ವ್ಯವಸ್ಥೆ ಇಲ್ಲಿ ಆಗಿದೆ. ಪ್ರತಿ ದಿನ‌ ಸಾವಿರಾರು ಮಂದಿ ಸೇರಿ ಈ ರೀತಿ ಶ್ರಮಾದಾನ ಮಾಡಿರುವುದನ್ನು ನಾನು ಬೇರೆಲ್ಲೂ ಕಂಡಿಲ್ಲ. ಬ್ರಹ್ಮಕಲಶೋತ್ಸವದ ಜೊತೆಗೆ ಬ್ರಹ್ಮರಥ, ವಿಜಯಗೋಪುರ ಇವೆಲ್ಲವೂ ಆಗುತ್ತಿರುವುದೂ ಸಮುದಾಯದ ಐಖ್ಯತೆಯ ಬಹುದೊಡ್ಡ ಸಾಕ್ಷೀಕರಣ ಎಂದವರು ಪ್ರತಿಕ್ರಿಯಿಸಿದ್ದಾರೆ.

ಉಜಿರೆಯಲ್ಲಿ ದೊರೆತಿರುವ ಧರ್ಮಾತೀತ ಬೆಂಬಲ‌ ಇತರ ಶ್ರದ್ಧಾ ಕೇಂದ್ರಗಳಿಗೆ ಮಾದರಿ; ಶರತ್‌ಕೃಷ್ಣ ಪಡುವೆಟ್ನಾಯ


ಉಜಿರೆ ಜನಾರ್ದನ ಸ್ವಾಮಿಯ ಬ್ರಹ್ಮಕಲಶೋತ್ಸವ ಮತ್ತು ಪೂರಕ ಕೆಲಸಗಳಿಗೆ ಕ್ರೈಸ್ತ ಧರ್ಮೀಯರು, ಮುಸ್ಲಿಂ ಬಾಂಧವರು ಭಾಗವಹಿಸುವುದರೊಂದಿಗೆ ಆರ್ಥಿಕ ಸಹಕಾರ ಕೂಡ‌ ನೀಡಿದ್ದಾರೆ. ಇದು ಜಾತಿ ಮತ ಧರ್ಮವನ್ನೂ ಮೀರಿ ನಮ್ಮ ದೇವಸ್ಥಾನ, ನಮ್ಮ ಧಣಿಗಳು ಎಂಬ ಭಾವನೆಯಿಂದ ತೊಡಗಿಸಿಕೊಂಡಿದ್ದಾರೆ. ಇದು ನಿಜಕ್ಕೂ ಎಲ್ಲಾ ಶ್ರದ್ಧಾ ಕೇಂದ್ರಗಳಿಗೂ ಮಾದರಿ ಎಂಬಂತೆ ಆಗಿದೆ ಎಂದು ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಅವರು ಮನಬಿಚ್ಚಿ ಮಾತನಾಡಿದ್ದಾರೆ. 

ನಮ್ಮ ತಂದೆಯವರ ಹೆಸರಿನಲ್ಲೇ ರಾಜಗೋಪುರ ಆಗಬೇಕೆಂಬ ಸಂಕಲ್ಪದಿಂದಲೇ ಈ ಕೆಲಸಕ್ಕೆ ನಾವು ಹೊರಟಿದ್ದೆವು. ಯಾಕೆಂದರೆ ಅವರು ಜನಗಳಿಗೆ ಬಹಳ ಹತ್ತಿರವಾಗಿದ್ದವರು. ದೇವರ ಮೇಲಿನ ಭಕ್ತಿ, ತಂದೆಯವರ  ಮೇಲಿನ ಅಭಿಮಾನದಿಂದಾಗಿ ಜನರು ಕೈ ಜೋಡಿಸಿದ್ದರಿಂದ ರಾಜಗೋಪುರ ಕಟ್ಟಲು ನಮಗೆ ಸಾಧ್ಯವಾಯಿತು‌. ಶಶಿಧರ ಶೆಟ್ಟಿ 'ನವಶಕ್ತಿ'ಯವರು ಅಧ್ಯಕ್ಷರಾಗಿ ನೈತಿಕ ಬಲ ಮತ್ತು ಆರ್ಥಿಕ ಬಲ ಎರಡನ್ನೂ ತುಂಬಿದರು‌.ಸಂಚಾಲರಾಗಿದ್ದ ಮೋಹನ್ ಕುಮಾರ್ ರವರು ಮುಂದೆ‌ ನಿಂತು ಎಲ್ಲಾ ಕೆಲಸ ಮಾಡಿಸಿದ್ದಾರೆ. ರಾಜಗೋಪುರದ ಸಾಕಾರಕ್ಕಾಗಿ‌ ನಾವು ಗ್ರಾಮ ಮತ್ತು ಆಸುಪಾಸಿನ ಕಲ್ಮಂಜ, ಕನ್ಯಾಡಿ, ಧರ್ಮಸ್ಥಳ, ನಡ, ಲಾಯಿಲ, ಬೆಳಾಲು ಇಲ್ಲೆಲ್ಲಾ ಕಳೆದ 6 ತಿಂಗಳಿನಿಂದ ಪ್ರತೀ ಮನೆಗಳಿಗೂ ಭೇಟಿ ನೀಡಿದ್ದೆವು. ಕೇವಲ ಮನವಿ ಪತ್ರವನ್ನಷ್ಟೇ ನೀಡಿ,  ತ್ರಿಕರಣಪೂರ್ವಕವಾಗಿ ತೊಡಗಿಸಿಕೊಳ್ಳಬೇಕೆಂದಷ್ಟೇ ಹೇಳಿ ಬಂದಿದ್ದೆವು. ಅದನ್ನು ಜನಗಳು ಯಥಾ ಪಾಲಿಸಿದ್ದಾರೆ. 

ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ 8.30 ವರೆಗೆ, ರಜಾದಿನಗಳಲ್ಲಿ11 ಗಂಟೆಯವರೆಗೂ ಹೋಗಿದ್ದೇವೆ. ಮಳೆಗಾಲದಲ್ಲೂ ಹೆಚ್ಚು ಮನೆ ಭೇಟಿ ಮಾಡಿದ್ದೆವು. ಅಂತಿಮವಾಗಿ ಎಲ್ಲರೂ ಭಾವನಾತ್ಮಕವಾಗಿ ತೊಡಗಿಸಿಕೊಂಡಿದ್ದರಿಂದ ಇದೆಲ್ಲವೂ ಸಾಧ್ಯವಾಗಿದೆ ಎಂಬುದು ನಿತ್ಯಸ್ಮರಣೀಯ ವಿಷಯ ಎಂದವರು ಹೇಳಿದ್ದಾರೆ.

ಕೀರ್ತಿಶೇಷ ವಿಜಯರಾಘವ ಪಡುವೆಟ್ನಾಯರು
                           --------------------

ಪೂಜ್ಯ ಹೆಗ್ಗಡೆಯವರು, ಡಿ‌ ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನ ಮತ್ತು ಪ್ರೇರಣೆಯ ಪ್ರತಿರೂಪ ಈ ರಾಜಗೋಪುರ; ಮೋಹನ್ ಕುಮಾರ್ 'ಲಕ್ಷ್ಮೀ'


ಈ ಸುಂದರ ಗೋಪುರಕ್ಕೆ ತಮಿಳುನಾಡಿನ ಇಂಜಿನಿಯರ್ ವಿನ್ಯಾಸ ನೀಡಿದ್ದಾರೆ. ಪೂಜ್ಯ ಧರ್ಮಾಧಿಕಾರಿ ಡಾ‌. ಡಿ ವೀರೇಂದ್ರ ಹೆಗ್ಗಡೆಯವರು, ಅವರ ಸಹೋದರ ಹರ್ಷೇಂದ್ರ ಕುಮಾರ್ ಅವರು ನಮಗೆ ಸದಾ ಸ್ಪೂರ್ತಿ ಮತ್ತು ಮಾರ್ಗದರ್ಶನ ನೀಡಿದ್ದಾರೆ. ನಮ್ಮ ಬಗ್ಗೆ ವೈಯುಕ್ತಿಕ ಕಾಳಜಿಯನ್ನೂ ವಹಿಸಿದ್ದರು ಎಂಬುದೂ ಮುಖ್ಯ.ರಾಜಗೋಪುರದ ತಾಂತ್ರಿಕ ಕೆಲಸ ಹೊರತು ಪಡಿಸಿ ಬಹುತೇಕ ಎಲ್ಲಾ ವಿಭಾಗಗಳಲ್ಲೂ 'ಬದುಕು ಕಟ್ಟೋಣ ಬನ್ನಿ' ನಮ್ಮ ತಂಡದ ಸದಸ್ಯರು ಶ್ರಮದಾನ ಸೇವೆ ನೀಡಿದ್ದಾರೆ. ಶರತ್‌ಕೃಷ್ಣ ಪಡುವೆಟ್ನಾಯ ಅವರ ಪ್ರೋತ್ಸಾಹ, ಶಶಿಧರ ಶೆಟ್ಟಿ ಅವರು ಸಮಿತಿಯ ಅಧ್ಯಕ್ಷರಾಗಿ ನಮಗೆ ನೀಡಿದ ನೇತೃತ್ವ, ಸಮಿತಿಯ ಎಲ್ಲರೂ ಹಾಗೂ ಉಜಿರೆಯ ವರ್ತಕ ಬಂಧುಗಳು ಕೈ‌ಜೋಡಿಸಿದ‌ ರೀತಿ‌ ಅತ್ಯದ್ಭುತವಾದುದು. ಈ ಸಂದರ್ಭದಲ್ಲಿ ಅವರೆಲ್ಲರ ಪಾದ ಸ್ಪರ್ಶಿಸಿ ಕೃತಜ್ಞತೆ ಹೇಳಲೇಬೇಕು ಎಂದು ರಾಜಗೋಪುರ ನಿರ್ಮಾಣ ಸಮಿತಿ ಪ್ರಧಾನ ಸಂಚಾಲಕ ಮೋಹನ್ ಕುಮಾರ್ 'ಲಕ್ಷ್ಮೀ' ಹೇಳಿದ್ದಾರೆ.

ಹರ್ಷೇಂದ್ರ ಕುಮಾರ್ ಅವರು ಪ್ರತೀ 15 ದಿನಕ್ಕೊಮ್ಮೆ ದೂರವಾಣಿ ಮೂಲಕ ಪ್ರಗತಿ ಪರಿಶೀಲಿಸಿ ಸಲಹೆ ನೀಡುತ್ತಿದ್ದರು. ವೈಯುಕ್ತಿಕವಾಗಿ ನನ್ನ ಬಾಲ್ಯದಿಂದಲೂ ಇದುವರೆಗೆ ನನ್ನನ್ನು ಹರಸುತ್ತಾ ಬಂದವರೂ ಅವರೇ.

ಆ ಕಾರಣದಿಂದಾಗಿ ಉಜಿರೆ ಕ್ಷೇತ್ರದಲ್ಲಿ ಈಗ ಏನೆಲ್ಲಾ ಕೆಲಸಗಳು ಆಗಿವೆಯೋ ಅದರ ಕೀರ್ತಿಯನ್ನು ಹೆಗ್ಗಡೆಯವರಿಗೆ ಸಮರ್ಪಿಸುತ್ತಿದ್ದೇನೆ ಎಂದು ವಿಧೇಯತೆಯಿಂದ ಮನದ ಮಾತು ಆಡಿದ್ದಾರೆ ಮೋಹನ್ ಕುಮಾರ್ ಅವರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment

© Live Media News. All rights reserved. Distributed by Pixabin Official