ಉದ್ಘಾಟನೆ ನೆರವೇರಿಸುತ್ತಿರುವ ಹಿರಿಯ ನ್ಯಾಯವಾದಿ ವಿಜಯ ಕುಮಾರ್ ಕಾರ್ಕಳ
ಬೆಳ್ತಂಗಡಿ: ನೆರೆ ಮತ್ತು ಕೊರೋನಾ ಕಾಲಘಟ್ಟದಲ್ಲಿ ಬೆಳ್ತಂಗಡಿ ವಕೀಲರ ಸಂಘ ಸಲ್ಲಿಸಿದ ಸೇವೆಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಬೆಳ್ತಂಗಡಿಯಲ್ಲಿ ವಕೀಲರ ಸಂಘದ ಕಟ್ಟಡ ರಚನೆಯಾಗಿದ್ದು, ಶೀಘ್ರದಲ್ಲೇ ಉದ್ಘಾಟನೆ ನಡೆಯಲಿದೆ. ಇದಕ್ಕೆ ಬೇಕಾದ ಪೀಠೋಪಕರಣ ಲೋಕೋಪಯೋಗಿ ಇಲಾಖೆಯಿಂದ ಮಾಡಲಾಗಿದೆ. ಮುಂದಕ್ಕೆ ಪೂರ್ಣಪ್ರಮಾಣದ ವ್ಯವಸ್ಥೆ ಒದಗಿಸಿಕೊಡಲಿದ್ದೇನೆ. ರಚನೆಯಾಗಿರುವ ಹೊಸ ಕಟ್ಟಡದ ಮೂರನೇ ಮಹಡಿಯಲ್ಲಿ ಗ್ರಂಥಾಲಯ ವ್ಯವಸ್ಥೆ ಮಾಡಿಕೊಡುವ ಇಚ್ಛೆ ಕೂಡ ಇದೆ.ಮುಂದಕ್ಕೆ ಬೆಳ್ತಂಗಡಿ ಗೆ ಹೊಸ ಕೋರ್ಟ್ ಕಟ್ಟಡ ಕೂಡ ಬೇಕಾಗಿದೆ. ಅದನ್ನು ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಬೆಳ್ತಂಗಡಿ ವಕೀಲರ ಸಂಘದ ನೂತನ ಸಾಲಿನ ಸಮಿತಿಯ ಅಧಿಕಾರ ಪದಗ್ರಹಣ ಸಮಾರಂಭದಲ್ಲಿ ಅವರು ಪ್ರಧಾನ ಅತಿಥಿಯಾಗಿ ಮಾತನಾಡುತ್ತಿದ್ದರು.
ಪದಗ್ರಹಣ ನೆರವೇರಿಸಿದ ಕಾರ್ಕಳದ ಹಿರಿಯ ನ್ಯಾಯವಾದಿ ಎಂ.ಕೆ ವಿಜಯ ಕುಮಾರ್ ಮಾತನಾಡಿ, ನ್ಯಾಯಾಧೀಶರಿಗೆ ನಾವು ನೀಡುವ ಗೌರವ ಎಂದರೆ ಅದು ನಮಗೆ ನಾವೇ ನೀಡುವ ಗೌರವದಂತೆ. ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳು ಪರಸ್ಪರ ಅರ್ಥೈಸಿಕೊಂಡು ತಮ್ಮ ಕಕ್ಷಿದಾರನಿಗೆ ನ್ಯಾಯದೊರಕಿಸಿಕೊಡುವಂತಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ ನಾಗೇಶ್‌ಮೂರ್ತಿ ವಹಿಸಿದ್ದರು.
ಸಮಾರಂಭದಲ್ಲಿ ಪದಗ್ರಹಣ ಸ್ವೀಕರಿಸಿದ ವಕೀಲರ ಸಂಘದ ನೂತನ ಸಾಲಿನ ಅಧ್ಯಕ್ಷ ಪ್ರಸಾದ್ ಕೆ.ಎಸ್, ತಮ್ಮ ಅವಧಿಯಲ್ಲಿ ನಿರ್ವಹಿಸುವ ಕಾರ್ಯಯೋಜನೆಗಳನ್ನು ವಿವರಿಸಿ ಎಲ್ಲರ ಸಹಕಾರ ಕೋರಿದರು.
ಮುಖ್ಯ ಅತಿಥಿಗಳಾಗಿದ್ದ ಬೆಳ್ತಂಗಡಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಸತೀಶ್ ಕೆ.ಜಿ, ಹಿರಿಯ ನ್ಯಾಯವಾದಿ ಹಾಗೂ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಇವರು ಶುಭಹಾರೈಸಿದರು. ಪದಗ್ರಹಣ ನೆರವೇರಿಸಲು ಆಗಮಿಸಿದ ಎಂ.ಕೆ ವಿಜಯ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಅಲೋಶಿಯಸ್ ಲೋಬೋ, ಜೊತೆ ಕಾರ್ಯದರ್ಶಿ ಪ್ರಿಯಾಂಕಾ, ಕೋಶಾಧಿಕಾರಿ ಹರಿಪ್ರಕಾಶ್, ಹಿರಿಯ ವಕೀಲ ನೇಮಿರಾಜ್ ಶೆಟ್ಟಿ ಉಪಸ್ಥಿತರಿದ್ದರು.
ನೂತನ ಸಮಿತಿ ಕಾರ್ಯದರ್ಶಿ ಶಶಿಧರ ಆರ್ ಠೋಸರ್ ಸ್ವಾಗತಿದರು. ಡಾ. ಪ್ರಮೋದ್ ಆರ್ ನಾಯ್ಕ್, ಮಮ್ತಾಝ್ ಬೇಗಂ, ಬಿ.ಕೆ ಧನಂಜಯ ರಾವ್, ಮನೋಹರ್ ಕುಮಾರ್ ಇಳಂತಿಲ ಕಾರ್ಯಕ್ರಮ ನಿರೂಪಿಸಿದರು. ಲಿಖಿತಾ ಪ್ರಾರ್ಥನೆ ಹಾಡಿದರು. ನೂತನ ಉಪಾಧ್ಯಕ್ಷ ಗಣೇಶ್ ಗೌಡ ವಂದನಾರ್ಪಣೆಗೈದರು.