ಬೆಳ್ತಂಗಡಿ: ತಾ.ಪಂ ಮಾಜಿ ಅಧ್ಯಕ್ಷ ಜತ್ತನ್ನ ಗೌಡ ಅವರ ಪುತ್ರ, ಬೆಳಾಲು ಗ್ರಾ. ಪ. ಮಾಜಿ ಅಧ್ಯಕ್ಷ ಏರ್ದೋಟ್ಟು ಮೋಹನ ಗೌಡ (48) ಅಲ್ಪಕಾಲದ ಅನಾರೋಗ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ಕೊನೆಯುಸಿರೆಳೆದಿದ್ದಾರೆ.
ಪಿತ್ತಕಾಮಾಲೆ ರೋಗಕ್ಕೆ ತುತ್ತಾಗಿದ್ದ ಅವರು ಕಳೆದ ಕೆಲವು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಈ ಮಧ್ಯೆ ಅವರ ಆರೋಗ್ಯ ಸ್ಥಿತಿ ವಿಷಮಿಸಿ ಬಹುಅಂಗಾಂಗ ವೈಫಲ್ಯಕ್ಕೊಳಗಾಗಿದ್ದರು.ಉದ್ಯಮಿಯಾಗಿದ್ದ ಮೋಹನ ಗೌಡ ಅವರು ಬೆಳಾಲಿನಲ್ಲಿ ಅಕ್ಕಿ ಮಿಲ್ಲು ನಡೆಸುತ್ತಿದ್ದರು. ಸಾಮಾಜಿಕವಾಗಿ, ಧಾರ್ಮಿಕವಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಅವರು ಬೆಳಾಲಿನ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷರಾಗಿ, ಕಾಂಗ್ರೆಸ್ ಪಕ್ಷದ ಗ್ರಾಮ ಸಮಿತಿಯ ಅಧ್ಯಕ್ಷರಾಗಿ, ಶ್ರೀ ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಇದರ ಜೀರ್ಣೋದ್ಧಾರ ಕಾರ್ಯದಲ್ಲಿ ಅಹೋರಾತ್ರಿ ಶ್ರಮಿಸಿ ಅಲ್ಲಿ ಖಾಯಂ ಆಹ್ವಾನಿತ ಸದಸ್ಯರಾಗಿ, ಮೈತ್ರಿ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರ ಪಾರ್ಥವ ಶರೀರ ಸೋಮವಾರ ಬೆಳಿಗ್ಗೆ 8.00 ಕ್ಕೆ ಬೆಳಾಲಿನ ಅವರ ಅಕ್ಕಿ ಮಿಲ್ಲಿನ ವಠಾರಕ್ಕೆ ತರಲಾಗಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿದೆ ಎಂದು ಅವರ ಸಹೋದರ, ನೋಟರಿ ಪಬ್ಲಿಕ್ ನ್ಯಾಯವಾದಿ ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳು, ಮೂವರು ಸಹೋದರರು ಮತ್ತು ಒಬ್ಬಳು ಸಹೋದರಿ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.