ಬೆಳ್ತಂಗಡಿ: ಕುಂದಾಪುರ ತಾಲೂಕಿನ ತ್ರಾಸಿ ಎಂಬಲ್ಲಿ ಶುಕ್ರವಾರ ನಡೆದಿದ್ದ ರಸ್ತೆ ಅಪಘಾತದಲ್ಲಿ ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ, ವೆಲ್ಡರ್ ವೃತ್ತಿ ನಡೆಸುತ್ತಿದ್ದ ಸದಾನಂದ ಕಿಣಿ (27.ವ) ಅವರು ಮೃತಪಟ್ಟಿದ್ದಾರೆ.
ಕಿಣಿಯವರು ತಮ್ಮ ಸಹೋದರ, ಲಾರಿ ಚಾಲಕ ಕೃಷ್ಣಾನಂದ ಕಿಣಿಯವರೊಂದಿಗೆ ಕಾರ್ಯ ನಿಮಿತ್ತ ಕುಂದಾಪುರಕ್ಕೆ ತೆರಳಿದ್ದರು. ಕುಂದಾಪುರದ ತ್ರಾಸಿ ಎಂಬಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಅವರಿಗೆ ಕಾರು ಡಿಕ್ಕಿಯಾಗಿ ಅವರು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಜಿಲ್ಲಾ ಸರಕಾರಿ ಆಸ್ಪತ್ರೆ ವೆನ್‌ಲಾಕ್ ಕರೆತರಲಾಯಿತಾದರೂ ರಸ್ತೆ ಪ್ರಯಾಣದ ಮಧ್ಯೆ ಅವರು ಅಸುನೀಗಿದರು.
ಮೃತರು ತಾಯಿ ಕಸ್ತೂರಿ ಕಿಣಿ, ಸಹೋದರರಾದ ನಿತ್ಯಾನಂದ ಕಿಣಿ, ಕೃಷ್ಣಾನಂದ ಕಿಣಿ, ಸಹೋದರಿ ಜಯಲಕ್ಷ್ಮೀ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ. ಉಪ್ಪಿನಂಗಡಿ ರುದ್ರಭೂಮಿಯಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.