ಬೆಳ್ತಂಗಡಿ; ಈ ಬಾರಿ 10 ನೇ ತರಗತಿಯ ಎಲ್ಲ ವಿದ್ಯಾರ್ಥಿಗಳನ್ನೂ ಉತ್ತೀರ್ಣಗೊಳಿಸಲು ತೀರ್ಮಾನಿಸಲಾಗಿದ್ದು, ಅವರಲ್ಲಿ ಪಿಯುಸಿ ಸೇರಬಯಸುವ ಎಲ್ಲರಿಗೂ ಪ್ರವೇಶಾವಕಾಶ ಕಲ್ಪಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಮಕ್ಕಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಗುರುವಾರ ಕೊನೆದಿನದ ಪರೀಕ್ಷೆಯ ನಂತರ ನಗರದ ಹಲವಾರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಯಾವುದೇ ವಿದ್ಯಾರ್ಥಿಗೂ ತೊಂದರೆಯಾಗದಂತೆ ಎಲ್ಲರಿಗೂ ಪ್ರಥಮ ಪಿಯುಸಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು.
ರಾಜ್ಯದ ಎಲ್ಲ ಸರ್ಕಾರಿ , ಅನುದಾನಿತ ಮತ್ತು ಅನುದಾನ ರಹಿತ ಪಿಯು ಕಾಲೇಜುಗಳಲ್ಲಿ ಒಟ್ಟಾರೆ 12 ಲಕ್ಷ ಸೀಟುಗಳು ಲಭ್ಯವಿವೆ . ಜಿಲ್ಲಾವಾರು ಅಂಕಿ ಅಂಶಗಳನ್ನು ಸಂಗ್ರಹಿಸಿದ್ದು ಅದಕ್ಕಾಗಿ ಅಧಿಕಾರಿಗಳ ಸಮನ್ವಯ ವ್ಯವಸ್ಥೆ ರೂಪಿಸಲಾಗುತ್ತಿದೆ.
ಯಾವುದೇ ವಿದ್ಯಾರ್ಥಿಗೂ ಪಿಯು ಪ್ರವೇಶಕ್ಕೆ ತೊಂದರೆಯಾಗುವುದಿಲ್ಲ. ಯಾವುದೇ ಸಂಸ್ಥೆಗಳು ಸೀಟು ಹೆಚ್ಚಳದ ಪ್ರಸ್ತಾವನೆಯನ್ನು ಸಲ್ಲಿಸಿದರೆ ಅವರ ಬೇಡಿಕೆಯನ್ನು ಪುರಸ್ಕರಿಸಲಾಗುವುದು ಎಂದು ಅವರು ಹೇಳಿದರು.
ಆಗಸ್ಟ್ 10 ರ ವೇಳೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು ಎಂದರು.
ಒಟ್ಟಾರೆಯಾಗಿ ಪರೀಕ್ಷೆ ಯಾವುದೇ ವಿಘ್ನಗಳಿಲ್ಲದೇ ಯಶಸ್ವಿಯಾಗಿ ನಡೆದಿದ್ದು ಇದಕ್ಕೆ ಕಾರಣೀಭೂತರಾದ ನಮ್ಮ ವಿದ್ಯಾರ್ಥಿಗಳು , ಶಿಕ್ಷಕರು , ಅಧಿಕಾರಿ ವೃಂದಕ್ಕೆ ಸುರೇಶ್ ಕುಮಾರ್ ಈ ವೇಳೆ ಕೃತಜ್ಞತೆ ಸಲ್ಲಿಸಿದರು.