ಬೆಳ್ತಂಗಡಿ; ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಗೊಳಿಸುವ ಸಲುವಾಗಿ ದ.ಕ. ಜಿಲ್ಲೆಯ 17 ಗ್ರಾಪಂಗಳನ್ನು ಜೂ.14ರಿಂದ ಬೆಳಗ್ಗೆ 9 ಗಂಟೆಯಿಂದ 21ರ ಬೆಳಗ್ಗೆ 9 ಗಂಟೆಯವರೆಗೆ ಸೀಲ್ಡೌನ್ ಮಾಡಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.
ದ.ಕ.ಜಿ.ಪಂ ಸಿಇಒ ಡಾ.ಎಸ್.ಕುಮಾರ್ ಅವರ ವರದಿ ಆಧರಿಸಿ 50ಕ್ಕಿಂತ ಅಧಿಕ ಕೋವಿಡ್ ಸಕ್ರಿಯ ಪ್ರಕರಣಗಳು ಇರುವ ಗ್ರಾ.ಪಂ. ಗಳನ್ನು ಸೀಲ್ಡೌನ್ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಬೆಳ್ತಂಗಡಿ ತಾಲೂಕಿನ 8 ಪಂಚಾಯತ್ ಗಳಾದ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾಯಿಲ, ಉಜಿರೆ ಮತ್ತು ಚಾರ್ಮಾಡಿ ಪಂಚಾಯತ್ ಗಳು ಒಳಗೊಂಡಿದೆ.ಈ ಗ್ರಾಮಗಳಲ್ಲಿ ಮುಂದಿನ ಒಂದು ವಾರಗಳ ಕಾಲ ಪೂರ್ಣ ಸೀಲ್ ಡೌನ್ ಆಗಲಿವೆ.
ಹೊರಹೋಗುವ, ಒಳ ಬರುವವರಿಗೆ ವಿಶೇಷ ಕಂಡೀಷನ್;
ಈ 17 ಗ್ರಾ.ಪಂ. ಗಳಿಗೆ ಹೊರಗಿನಿಂದ ಬರುವವರು ಮತ್ತು ಅಲ್ಲಿಂದ ಹೊರಗೆ ಹೋಗುವವರಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಅಲ್ಲದೆ ನರ್ಸಿಂಗ್ ಹೋಂ, ಕ್ಲಿನಿಕ್, ಲ್ಯಾಬ್, ಟೆಲಿ ಮೆಡಿಸಿನ್, ರಕ್ತ ಸಂಗ್ರಹ ಕೇಂದ್ರ ಇತ್ಯಾದಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಕೆಎಂಎಫ್ ಹಾಲಿನ ಬೂತ್ ಮತ್ತು ರಾಜ್ಯ, ರಾಷ್ಟ್ರ ಹೆದ್ದಾರಿ ಪಕ್ಕದ ಪೆಟ್ರೋಲ್ ಬಂಕ್‌ಗಳನ್ನು ತೆರೆಯಬಹುದು.
ವೈದ್ಯಕೀಯ ಮತ್ತು ಇತರ ತುರ್ತು ಅಗತ್ಯ ಸೇವೆಗೆ ವಾಹನ ಓಡಾಟಕ್ಕೆ ಅನುಮತಿ ನೀಡಲಾಗುತ್ತದೆ. ಗ್ರಾಮಸ್ಥರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಗ್ರಾಮಪಡೆಗಳು ಕ್ರಮ ವಹಿಸಲಿದ್ದಾರೆ. ಕೊರೋನ ಸೋಂಕು ತಗ್ಗಿಸಲು ಕೆಲವು ಕಠಿಣ ನಿರ್ಧಾರ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.