ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರುಬಳಿಗೆ ಎಂಬಲ್ಲಿ ಅರಣ್ಯ ಪ್ರದೇಶದ ಒಳಗಡೆ ಇರುವ ಜಲಪಾತದ ಬಳಿ ಭೂಕುಸಿತವಾಗಿದೆ ಎಂಬ ಮಾಹಿತಿ ಬಂದಿದ್ದು, ಗೆಳೆಯರ ಜೊತೆ ತೆರಳಿದ್ದ ಉಜಿರೆ ಕಾಲೇಜಿನ ಪದವಿ ವಿದ್ಯಾರ್ಥಿ ಯೊಬ್ಬ ಅದರಡಿ ಸಿಲುಕಿಕೊಂಡಿದ್ದಾನೆ ಎಂಬ ಆತಂಕಕಾರಿ ಘಟನೆ ನಡೆದಿದೆ.
ಮಣ್ಣಿನಡಿ ಸಿಲುಕಿದ ಯುವಕ ಉಜಿರೆ ಕಾಶಿಬೆಟ್ಟು ಸನಿಹದ ನಿವಾಸಿ, ಎಸ್‌ಡಿಎಂ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿ ಸನತ್ ಶೆಟ್ಟಿ (20ವ.) ಎಂಬವರೆಂದು ಮಾಹಿತಿ ಲಭ್ಯವಾಗಿದೆ.
ಅವರು ಇನ್ನೂ ಜೀವಂತವಿರುವ ಸಾಧ್ಯತೆಯೂ ಇದೆ ಎಂದು ತಿಳಿದುಬಂದಿದೆ.
ಸಂಸೆಗೆ ಕ್ರಿಕೆಟ್ ಆಡಲೆಂದು ಸ್ನೇಹಿತರ ಜೊತೆ ಸಂಸೆಗೆ ತೆರಳಿದ ಯುವಕ;
ಚಿಕ್ಕಮಗಳೂರು ಜಿಲ್ಲೆಯ ಸಂಸೆಯಲ್ಲಿ ಕ್ರಿಕೆಟ್ ಪಂದ್ಯಾಟ ಇರುವುದಾಗಿ ಹೇಳಿ ಒಟ್ಟು ಆರು ಮಂದಿ ಸ್ನೇಹಿತರ ಜೊತೆ ಸನತ್ ಶೆಟ್ಟಿ ಮನೆಯಿಂದ ಹೋಗಿದ್ದರು. ರಾತ್ರಿ ಅಲ್ಲೇ ಮಿತ್ರರ ಮನೆಯಲ್ಲಿ ಉಳಿದುಕೊಂಡಿದ್ದರೆಂದು ಗೊತ್ತಾಗಿದೆ.
ಸೋಮವಾರ ಬೆಳಿಗ್ಗೆ ಮನೆಗೆ ಕರೆ ಮಾಡಿ ಮಾತನಾಡಿದ್ದು ಸಂಜೆ ವೇಳೆ ಬರುವುದಾಗಿ ತಿಳಿಸಿದ್ದರಂತೆ.
ಈ ಮಧ್ಯೆ ಅತ್ತ ಬಂಗಾರುಬಳಿಗೆ ಜಲಪಾತದ ಬಳಿಯಿಂದ ಅಪಾರಾಹ್ನ ಸಮಯ ಐದಾರು ಮಂದಿ ಯುವಕರು ಓಡಿಬಂದಿದ್ದು, ಓರ್ವ ಸಂಗಡಿಗ ಮಣ್ಣಿನಡಿ ಸಿಲುಕಿದ್ದಾಗಿ ಸ್ಥಳೀಯರಿಗೆ ತಿಳಿಸಿದ್ದಾರೆ.
ಈ ವೇಳೆ ಊರವರು ಒಟ್ಟಾಗಿ ಆ ಪ್ರದೇಶಕ್ಕೆ ತೆರಲಕಿದ್ದಾರೆ. ಅಷ್ಟರಲ್ಲಿ ಬೆಳ್ತಂಗಡಿ ಪೊಲೀಸರಿಗೂ ಮಾಹಿತಿ ಲಭಿಸಿದ್ದು ತಕ್ಷಣ ಕಾರ್ಯಪ್ರವೃತರಾದ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ, ಸಬ್ ಇನ್ಸ್‌ಪೆಕ್ಟರ್ ನಂದ ಕುಮಾರ್ ಮತ್ತು ಸಿಬ್ಬಂದಿಗಳು ಧಾವಿಸಿದ್ದಾರೆ.
ಜೆಸಿಬಿ ಮೂಲಕ ಕಾರ್ಯಾಚರಣೆ;
ಸ್ಥಳದಲ್ಲಿ ಮಣ್ಣು ಕುಸಿದ ಲಕ್ಷಣ ಗೋಚರಿಸಿದೆ. ಇದು ಸೋಮವಾರ ಕುಸಿತವಾದದ್ದೇ ಅಥವಾ ಮೊದಲೇ ಕುಸಿದ ಮಣ್ಣಿನಡಿ ಸನತ್ ಶೆಟ್ಟಿ ಸಿಲುಕಿಕೊಂಡದ್ದೇ ಎಂದು ಖಚಿತಪಟ್ಟಿಲ್ಲ. ಸ್ಥಳಕ್ಕೆ ಹೋಗಲು ದುರ್ಗಮ ಹಾದಿ, ವಿದ್ಯುತ್ ವ್ಯವಸ್ಥೆ ಇಲ್ಲದಿರುವುದು, ಮತ್ತು ಕುಸಿತ ಮಣ್ಣಿನ ಕಾರ್ಯಾಚರಣೆ ಗೆ ತೀವ್ರ ಅಡ್ಡಿಯಾಗಿದೆ ಎಂದು ತಿಳಿದು ಬಂದಿದೆ.
ಇನ್ನೂ ಮೂವರು ಪಾರು ಎಂಬ ಮಾಹಿತಿ;
ಯುವಕರ ತಂಡ ಸಹಜವಾಗಿಯೇ ಝರಿನೀರಿನ ಸ್ನಾನಕ್ಕೆ ಹೋಗಿದ್ದವರು ದಿಢೀರನೆ ನಡೆದ ಕುಸಿತ ಘಟನೆಯಿಂದ ಒಟ್ಟು ಮೂವರು ಮಣ್ಣಿನಡಿಯಲ್ಲಿ ಸಿಲುಕಿದ್ದರೆಂದೂ, ಈ ಪೈಕಿ ಇನ್ನಿಬ್ಬರು ಕಷ್ಟಪಟ್ಟು ರಕ್ಷಿಸಿಕೊಂಡಿದ್ದಾರೆಂದೂ ಹೇಳಲಾಗಿದೆ.
ಅರಣ್ಯದಂಚಿನಲ್ಲಿ ಇರುವ ಜಲಪಾತ ಜನವಸತಿ ಪ್ರದೇಶದಿಂದ ದೂರವಿದೆ.ಇದು ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿದ್ದರೂ ಮೂಡಿಗೆರೆ ತಾಲೂಕಿನ ಸಂಸೆ, ಕಳಸ ಪ್ರದೇಶಕ್ಕೆ ಸಮೀಪವಿದೆ. ಈ ಭಾಗ ಪ್ರಕೃತಿ ರಮಣೀಯ ಪ್ರದೇಶವಾಗಿದ್ದು, ಇದರ ಮಾಹಿತಿ ಅರಿತ ಅನೇಕ ಮಂದಿ ಅಲ್ಲಿಗೆ ಚಾರಣ ಕೈಗೊಳ್ಳುತ್ತಾರೆ. ಇತ್ತೀಚೆಗಷ್ಟೆ ಜಲಪಾತಕ್ಕೆ ನಿಷೇಧ ಹೇರುವಂತೆ ಗ್ರಾಮಸ್ಥರು ಸ್ಥಳೀಯ ಆಡಳಿತಕ್ಕೆ ಒತ್ತಡ ಹೇರಿದ್ದರು. ಈಎಲ್ಲದರ ಮಧ್ಯೆಯೇ ಇದೀಗ ಪ್ರಾಣಾಪಾಯ ಸಂಭವಿಸಿದೆ.