ಬೆಳ್ತಂಗಡಿ: ಮಚ್ಚಿನ ಗ್ರಾಮದ ಪುಂಚಪಾದೆ ಎಂಬಲ್ಲಿನ ಜನರ ಓಡಾಟ ಕಡಿಮೆ ಇರುವ ಸಾರ್ವಜನಿಕ ಪ್ರದೇಶದಲ್ಲಿ ಅಡಿಕೆ ಸಿಪ್ಪೆ ತೆಗೆಯುತ್ತಿದ್ದ ಇಬ್ಬರು ಶಂಕಿತ ವ್ಯಕ್ತಿಗಳನ್ನು ಸ್ಥಳೀಯರ ನೆರವಿನೊಂದಿಗೆ ಪುಂಜಾಲಕಟ್ಟೆ ಪೊಲೀಸರು ಸೆರೆಹಿಡಿದಿದ್ದಾರೆ. ಇಲ್ಲಿ ಪತ್ತೆಯಾಗಿರು ಅಡಿಕೆ ಮುಂಡಾಜೆಯ ಹಮೀದ್ ಎಂಬವರ ಮನೆಯ ಅಂಗಳದಿಂದ ಕಳ್ಳರು ಎಗರಿಸಿದ್ದೆಂದು ತಿಳಿದುಬಂದಿದೆ.
ಮನೆಯ ಅಂಗಳದಲ್ಲಿ ಒಣಗಲು ಹಾಕುತ್ತಿದ್ದ ಅಡಿಕೆಯನ್ನು ಚಾಣಾಕ್ಷತನದಿಂದ ಕಳ್ಳತನ ನಡೆಸುತ್ತಿದ್ದ ಈ ಕಳ್ಳರು ಅದನ್ನು ಪುಂಚಪಾದೆ ಎಂಬಲ್ಲಿಗೆ ತಂದು ಸಿಪ್ಪೆಸೀಳಿ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದರೆಂದು ಪ್ರಾಥಮಿಕ ಮಾಹಿತಿ ಹೊರಬಿದ್ದಿದೆ.
ಸಂದೇಹದ ಮೇಲೆ ಇಬ್ಬರು ಆರೋಪಿಗಳನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ತನಿಖೆ ಪ್ರಾರಂಭವಾಗಿದ್ದು ಇನ್ನಷ್ಟು ವಿಚಾರ ಹೊರಬರಲಿದೆ.
ಬಂಧಿತ ಯುವಕರನ್ನು ಸರಳಿಕಟ್ಟೆ ಮತ್ತು ಪಾಂಡವರಕಲ್ಲು ಭಾಗದವರೆಂದು ಹೇಳಲಾಗಿದ್ದು, ತಂಡದಲ್ಲಿ ಇನ್ಯಾರ್ಯಾರು ಇದ್ದಾರೆ ಎಂಬ ಬಗ್ಗೆ ವಿಚಾರಣೆ ಆರಂಭವಾಗಿದೆ.
ಅಡಿಕೆಗೆ ಬೆಲೆ ದಿನದಿಂದ ಏರುತ್ತಿದ್ದು ಈ ಹಿನ್ನೆಲೆಯಲ್ಲಿ ಈ ಯುವಕರು ಹೊಸ ಮಾರ್ಗ ಕಂಡುಕೊಂಡಿದ್ದರೆಂದು ಹೇಳಲಾಗಿದೆ. ಕಳೆದ ಒಂದೂವರೆ ತಿಂಗಳುಗಳಿಂದ ತಾಲೂಕಿನ ಹಲವೆಡೆ ಅಡಿಕೆ ಕಳ್ಳತನ ನಡೆಯುತ್ತಿತ್ತೆನ್ನಲಾಗಿದ್ದು ಆರೋಪಿಗಳು ಪತ್ತೆಯಾಗುತ್ತಿರಲಿಲ್ಲ. ಆ ಕಳ್ಳತನಗಳಿಗೂ ಈ ಆರೋಪಿಗಳಿಗೂ ಸಂಬಂಧವಿದೆಯೇ ಎಂದು ತಿಳಿದುಬರಬೇಕಿದೆ.