ಬೆಳ್ತಂಗಡಿ: ಧರ್ಮದ ಸಾರ ತಿಳಿಯದೇ ಇರುವ ಮಂದಿಯಿಂದ ಮಾತ್ರ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ ಎಂದು ಕರ್ನಾಟಕ ಸರಕಾರದ ವಸತಿ ಸಚಿವ ವಿ ಸೋಮಣ್ಣ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ ಮಹೋತ್ಸವದ ಅಂಗವಾಗಿ ರವಿವಾರ ನಡೆದ ಸರ್ವಧರ್ಮಗಳ ಸಮ್ಮೇಳದ 88 ನೇ ಅಧಿವೇಶನ ಉದ್ಘಾಟಿಸಿ ಅವರು ಮಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಕನಕಗಿರಿ ಶ್ರೀ ಕ್ಷೇತ್ರ ಜೈನಮಠದದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಮಾತನಾಡಿ, ಅನೇಕ ಯುಗಗಳಿಂದ ಪ್ರಾಣಿ, ಪಕ್ಷಿ, ಚರಾಚರ ವಸ್ತುಗಳು ಧರ್ಮದಲ್ಲಿ ಸಹಜವಾಗಿ ನಡೆಯುತ್ತಿವೆ. ಆದರೆ ಮನುಷ್ಯ ಮಾತ್ರ ಮನುಷ್ಯ ಗುಣ ಬಿಟ್ಟು ಹಾದಿ ತಪ್ಪುತ್ತಿದ್ದಾನೆ. ಈ ದುಸ್ಸಾಹಸ ನಮಗೇಕೆ ಬಂತು ಎಂದು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ ಎಂದರು.
ಸ್ವಾಗತ ಭಾಷಣ ಮಾಡಿದ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಸರಕಾರದವರು ಜಾತಿಯನ್ನು ಗುರುತಿಸುತ್ತಾರೆ. ಆದರೆ ಕೆಲವರು ತಮ್ಮ ವ್ಯವಹಾರ ದಲ್ಲಿ ಧರ್ಮವನ್ನು ಗುರುತಿಸಿ ಹೆಮ್ಮೆಪಟ್ಟುಕೊಳ್ಳುವುದನ್ನು ಕಂಡಿದ್ದೇವೆ. ಎಷ್ಟೋ ಸಲ ಇದು ಸ್ವಾರ್ಥಕ್ಕೆ ತಿರುಗಿ ಇನ್ನೊಬ್ಬರಿಗೆ ನೋವಾಗುವ ಹಾಗೂ ವ್ಯವಹಾರದಲ್ಲಿ ತೊಡಕಾಗಿದ್ದು ಕಂಡು ಬರುತ್ತದೆ. ಇನ್ನೊಬ್ಬರಿಗೆ ಸಮಸ್ಯೆಯಾಗದ ಹಾಗೆ ನಮ್ಮ ಧರ್ಮದ ನಿಷ್ಟೆಯನ್ನು, ನಮ್ಮ ಧರ್ಮದ ಆಚರಣೆಯನ್ನು ನಾವು ಆಚರಿಸಿಕೊಂಡು ಬರಬೇಕು ಮತ್ತು ನಮ್ಮ ವೃತ್ತಿಧರ್ಮವನ್ನು ನಾವು ಹಾಳುಮಾಡಿಕೊಳ್ಳದೆ ಅದನ್ನು ಕಾಪಾಡಿಕೊಳ್ಳಬೇಕು ಬೆಳೆಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಕೇಶವ ಮಳಗಿ ಬೆಂಗಳೂರು ಮತ್ತು ರೆ.ಫಾ. ಚೇತನ್ ಲೋಬೋ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಹೇಮಾವತಿ ಹೆಗ್ಗಡೆ, ಸಚಿವ ಸೋಮಣ್ಣ ಅವರ ಧರ್ಮಪತ್ನಿ ಶೈಲಾ ಸೋಮಣ್ಣ ಉಪಸ್ಥಿತರಿದ್ದರು.
ಡಿ ಸುರೇಂದ್ರ ಕುಮಾರ್ ಉಪನ್ಯಾಸಕರಿಗೆ ಗೌರವಾರ್ಪಣೆ ನಡೆಸಿದರು.
ಸಚಿವ ಸೋಮಣ್ಣ ಅವರು ಸರಕಾರದ ಪರವಾಗಿ ಭಟ್ಟಾರಕ ಸ್ವಾಮೀಜಿ ಹಾಗೂ ಡಾ.ಡಿ ವೀರೇಂದ್ರ ಹೆಗ್ಗಡೆ ದಂಪತಿಯನ್ನು ಸನ್ಮಾನಿಸಿದರು.
ಅತಿಥಿಗಳ ಗೌರವಾರ್ಪಣೆ ಪತ್ರವನ್ನು ಸುನಿಲ್ ಪಂಡಿತ್ ಮತ್ತು ಡಾ. ಬಿ ಯಶೋವರ್ಮ ವಾಚಿಸಿದರು. ಶ್ರದ್ಧಾ ಅಮಿತ್ ಶೈಲಾ ಅವರಿಗೆ ಗೌರವಾರ್ಪಣೆ ಸಲ್ಲಿಸಿದರು.
ಎಸ್‌ಡಿಎಂ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿಗಳು ಪ್ರಾರ್ಥನೆ ಹಾಡಿದರು.
ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಸಭೆಗೂ ಮುನ್ನ ಶ್ರೀ ಕ್ಷೇತ್ರದಿಂದ ಅಮೃತವರ್ಷಿಣಿ ಸಭಾಂಗಣದವರೆಗೆ ಭವ್ಯ ಮೆರವಣಿಗೆ ನಡೆಯಿತು.