ಬೆಳ್ತಂಗಡಿ: ಧರ್ಮ ಸೃಜನ ಶೀಲವಾಗಿರುವುದಿಲ್ಲವೋ ಅಲ್ಲಿ ಧರ್ಮಾಂಧತೆ ಹುಟ್ಟಿಕೊಳ್ಳುತ್ತದೆ. ಧರ್ಮ ಚಿಂತನಾಪೂರ್ವವಾಗಿರಬೇಕಾದರೆ ಸಾಹಿತ್ಯ ಬೇಕು. ಹಿರಿಯರ ವಿವೇಕ ಮತ್ತು ಯವ್ವನದ ಉತ್ಸಾಹ ಜೊತೆ ಜೊತೆಯಾಗಿರಬೇಕು.
ಧರ್ಮ ಪರಂಪರೆಯನ್ನು ಸಮಕಾಲೀನಗೊಳಿಸದಿದ್ದರೆ, ಆಧುನಿಕ ಸ್ಪರ್ಷಕೊಡದಿದ್ದರೆ ಬೆಲೆ ಇಲ್ಲ ಎಂದು ಬೆಂಗಳೂರಿನ ಹಿರಿಯ ಸಾಹಿತಿ ಹಾಗೂ ಖ್ಯಾತ ವಿಮರ್ಷಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವ ಮಹೋತ್ಸವದ ಅಂಗವಾಗಿ ಸೋಮವಾರ ನಡೆದ ಸಾಹಿತ್ಯ ಸಮ್ಮೇಳನದ 88 ನೇ ಅಧಿವೇಶನ ಉದ್ಘಾಟಿಸಿ ಅವರು ಮಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡದ ಪ್ರಖ್ಯಾತ ವಾಗ್ಮಿ, ವಿಮರ್ಷಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಮಾತನಾಡಿ, ಸಮಾಜದಲ್ಲಿ ಮೌಲ್ಯಗಳ ಕುಸಿತ ಸಮಾಜದ ಅಧಪತನಕ್ಕೆ ಕಾರಣವಾಗಿದೆ. ಮೌಲ್ಯಗಳು ಅಂದರೆ ಆಧ್ಯಾತ್ಮಿಕ, ದಾರ್ಮಿಕ ಮೌಲ್ಯ, ಸಾಮಾಜಿಕ ಮೌಲ್ಯಗಳೂ ಒಳಗೊಂಡಿದೆ.
ಶಾಂತಿ ಮತ್ತು ಸುಖ ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನ ಅರಿತಿರಬೇಕು ಎಂದರು. ಸ್ವಾಗತ ಭಾಷಣ ಮಾಡಿದ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಧರ್ಮದ ತಿರುಳು, ಸಾಹಿತ್ಯದ ಸತ್ವ ಮನುಜ ಹಿತವೇ ಆಗಿದೆ. ಆದ್ದರಿಂದ ಜನರಲ್ಲಿ ನೈತಿಕತೆ, ಸಚ್ಛಾರಿತ್ರ್ಯಗಳು ಬೆಳೆಸುವ ಕಾರ್ಯವೂ ಇವುಗಳಿಂದಲೇ ಆಗಬೇಕಿದೆ.
ಇಂದು ಪಂಚಭೂತಗಳು, ಪಂಚೇಂದ್ರಿಯಗಳು ಮಲಿನವಾಗದಂತೆ ಎಚ್ಚರಿಸುವ ಕಾರ್ಯ ಸಾಹಿತ್ಯ ದಿಂದಾಗುತ್ತಲೇ ಇದೆ ಎಂದರು.
ಲಾಕ್‌ಡೌನ್ ಸಂದರ್ಭ ನಾನು ಅತೀ ಹೆಚ್ಚು ಪುಸ್ತಕಗಳನ್ನು ಓದಿದ್ದೇನೆ. ಜನರು ತಮ್ಮ ಆಸಕ್ತಿಯ ವಿಷಯಗಳನ್ನು ವಿಂಗಡಿಸಿ ಆ ವಿಭಾಗದಲ್ಲಿರುವ,ಪ್ರಕಟಗೊಂಡಿರುವ, ಹೆಚ್ಚು ಪುಸ್ತಕಗಳನ್ನು ಖರೀದಿಸಿ ಓದಿರಿ ಮತ್ತು ಹಾಗೂ ಮುಂದಿನ ಪೀಳಿಗೆಗೂ ಈ ಅಭಿರುಚಿ ರೂಢಿಸಿಕೊಳ್ಳಲು ಪ್ರೇರೇಪಿಸಿ. ಹಾಗಾದರೆ ಮಾತ್ರವೇ ಸಾಹಿತ್ಯದ ವಿವಿಧ ಮಜಲುಗಳ ಪರಿಚಯ ಸಮಾಜದ ಸಮಕಾಲೀನ ವಾಸ್ತವತೆಗಳಿಗೆ ಸ್ಪಂದಿಸುವ ಮನಸ್ಸುಗಳ ನಿರ್ಮಾಣವಾಗುತ್ತದೆ ಎಂದರು.
ವೇದಿಕೆಯಲ್ಲಿ ಪಮಲಪನ ಆದಿಪುರಾಣದಲ್ಲಿ ಜೀವನ ದೃಷ್ಟಿ ಎಂಬ ವಿಷಯದಲ್ಲಿ ಡಾ. ಜ್ಯೋತಿ ಶಂಕರ್, ಲಿಪಿ- ಭಾಷೆ ಹಾಗೂ ಸಂಸ್ಕೃತಿ ಎಂಬ ವಿಷಯದಲ್ಲಿ ಡಾ.ಪುಂಡಿಕಾಯ್ ಗಣಪಯ್ಯ ಭಟ್ ಅವರು ವಿಶೇಷ ಉಪನ್ಯಾಸ ನೀಡಿದರು.
ಅತಿಥಿಗಳ ಗೌರವಾರ್ಪಣೆ ಪತ್ರವನ್ನು ಮೈತ್ರೀ ನಂದೀಶ್, ಶ್ರದ್ಧಾ ಅಮಿತ್, ಡಿ ಶ್ರೇಯಸ್ ಕುಮಾರ್ ವಾಚಿಸಿದರು.
ಎಸ್‌ಡಿಎಂ ಸ್ವಾಯುತ್ತ ಮಹಾವಿದ್ಯಾಲಯದ ವಿದ್ಯಾರ್ಥಿನಿಗಳು ನಾಡಗೀತೆ ಮೊಳಗಿಸಿದರು. ಸಭೆಯ ಆರಂಭಕ್ಕೂ ಮುನ್ನ ವಿದ್ಯಾವಾಚಶ್ಪತಿ ಡಾ.ಬನ್ನಂಜೆ ಗೋವಿಂದ ಆಚಾರ್ಯ ಅವರಿಗೆ ಮೌನಪ್ರಾರ್ಥನೆ ಸಲ್ಲಿಸಲಾಯಿತು.
ಡಾ.ಬಿ.ಪಿ ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಭೆಗೂ ಮುನ್ನ ಶ್ರೀ ಕ್ಷೇತ್ರದಿಂದ ಅಮೃತವರ್ಷಿಣಿ ಸಭಾಂಗಣದವರೆಗೆ ಭವ್ಯ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಡಾ.ವಿಘ್ನರಾಜ ಅವರ 'ಪ್ರಾಚೀನ ಭಾರತೀಯ ಲಿಪಿಗಳು' ಕೃತಿ ಹಾಗೂ ಉಸ್ತಾದ್ ರಫೀಕ್ ಖಾನ್ ಅವರ ಜೀವನಚರಿತ್ರೆ ಇಂಗ್ಲಿಷ್ ಮತ್ತು ಕನ್ನಡ ಕೃತಿಗಳ ಬಿಡುಗಡೆ ನಡೆಯಿತು.