ಬೆಳ್ತಂಗಡಿ; ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಚ್ಚಿಲ ಎಂಬಲ್ಲಿ ಮೂರು ಹೆಣ್ಣು ಮಕ್ಕಳು ಮಾತ್ರ ಇರುವ ಅರ್ಹ ಕುಟುಂಬವೊಂದಕ್ಕೆ ರಾಜಕೇಸರಿ ಸಂಘಟನೆಯ ನೇತೃತ್ವದಲ್ಲಿ ಆಸರೆ ಮನೆ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ಅಡಿಪಾಯದ ಕಾಮಗಾರಿಗೆ ಶಿಲಾನ್ಯಾಸ ಡಿ.20 ರಂದು ನಡೆಯಿತು.
ಭೂಮಿ ಪೂಜೆಯನ್ನು ಪುರೋಹಿತರು ಹಾಗೂ ಜ್ಯೋತಿಷ್ಯರಾದ ಮನೋಹರ ತೋಡ್ತಿಲ್ಲಾಯ ನೆರವೇರಿಸಿದರು.
ಮುಂಡಾಜೆಯ ಕುಶಲಾವತಿ ಎಂಬವರು ವಿಧವೆಯಾಗಿದ್ದು, ಮೂರು ಮಂದಿ ಹೆಣ್ಣು ಮಕ್ಕಳನ್ನು ಮಾತ್ರ ಹೊಂದಿದ್ದು ಪ್ರಸ್ತುತ ಬಾಡಿಗೆ ಮನೆಯಲ್ಲಿ ನೆಲೆಸಿ ಸಂಕಷ್ಡದಿಂದ ಬದುಕು ಸಾಗಿಸುತ್ತಿದ್ದಾರೆ. ಅವರಿಗೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚಣ್ಣನ್ನವರ್ ಅವರ ಆಶ್ರಯದಲ್ಲಿ ಈ ಮನೆ ನಿರ್ಮಾಣವಾಗಲಿದೆ.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಉಜಿರೆಯ ಯುವ ಉದ್ಯಮಿ ಜಯಪ್ರಕಾಶ್ ಶೆಟ್ಟಿ ಪಣಿಯಲು, ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ, ತಾ. ಅಧ್ಯಕ್ಷ ಕಾರ್ತಿಕ್, ತಾ. ಸಂಚಾಲಕ ಪ್ರವೀಣ್ ಕುಲಾಲ್, ತಾಲೂಕು ಮಾನವ ಸ್ಪಂದನ ತಂಡದ ಮುಖ್ಯಸ್ಥ ಪಿ.ಸಿ ಸೆಬಾಸ್ಟಿಯನ್, ಕೋವಿಡ್ ಸೋಲ್ಜರ್ಸ್ ತಂಡದ ಮುಖ್ಯಸ್ಥ, ಪತ್ರಕರ್ತ ಅಶ್ರಫ್ ಆಲಿಕುಂಞಿ, ರಾಜಕೇಸರಿ ಕಾರ್ಯಕರ್ತರಾದ ಉಮೇಶ್, ಸಂತೋಷ್, ನಿತಿನ್, ಪ್ರವೀಣ್, ಸಂದೇಶ್, ರಾಜೇಶ್, ಗಣೇಶ್, ಲೋಕೇಶ್, ಸ್ಥಳೀಯ ಹಿರಿಯರಾದ ವೇದಾವತಿ, ಕಮಲಾ, ವೀಣಾ, ಉಷಾ, ವಿನೋದಾ ಇವರುಗಳು ಉಪಸ್ಥಿತರಿದ್ದರು.
ಸಂತ್ರಸ್ತ ಕುಟುಂಬದ ಕುಶಲಾವತಿ, ಅವರ ಮೂವರು ಮಕ್ಕಳಾದ ಶೃತಿ ಶೆಟ್ಟಿ, ಸುಮಾ ಮತ್ತು ಶುಶ್ಮಿತಾ ಇವರು ಎಲ್ಲರನ್ನೂ ಗೌರವಿಸಿ ಕೃತಜ್ಞತೆ ಸಲ್ಲಿಸಿದರು.