Posts

ಮತಕೇಂದ್ರದೊಳಕ್ಕೆ ಚಿಹ್ನೆ ಯ ಚೀಟಿ ಕಳಿಸಿದ ಅಭ್ಯರ್ಥಿ; ಪ್ರತಿಸ್ಪರ್ಧಿಗಳಿಂದ ಕಿರಿಕಿರಿ! 624 ಮಂದಿಯ ಭವಿಷ್ಯದ ಪೆಟ್ಟಿಗೆ ಎಸ್.ಡಿ.ಎಂ ಕಾಲೇಜಿನಲ್ಲಿ

2 min read


ಡಾ.ಹೆಗ್ಗಡೆ ದಂಪತಿ ಮತಚಲಾಯಿಸಿದರು;

ಬೆಳ್ತಂಗಡಿ; ತಾಲೂಕಿನಲ್ಲಿ ರವಿವಾರ ನಡೆದ 46 ಗ್ರಾಮ ಪಂಚಾಯತ್‌ಗಳ ಚುನಾವಣೆ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿ ನಡೆದರೂ ಒಂದೆರಡು ಕಡೆ ಕಿರಿಕ್‌ಗಳು ಆಗಿವೆ.

ತಾಲೂಕಿನಲ್ಲಿ 7 ಮಂದಿ ಅವಿರೋಧ ಆಯ್ಕೆಯಾಗಿರುವುದು ಬಿಟ್ಟರೆ ಉಳಿದ 624 ಅಭ್ಯರ್ಥಿಗಳ ಭವಿಷ್ಯ ಅಡಗಿರುವ ಮತ ಪೆಟ್ಟಿಗೆ ಉಜಿರೆ ಎಸ್.ಡಿ.ಎಂ ಕಾಲೇಜಿನ ಕೊಠಡಿಗಳಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿಡಲಾಗಿದೆ.

ತಾಲೂಕಿನಿನಲ್ಲಿ ನಡೆದ ಮತದಾನ ಪ್ರಕ್ರಿಯೆ ಯಲ್ಲಿ ತಾಲೂಕಿನ ಗಣ್ಯಾತಿಗಣ್ಯರು ತಮ್ಮ ವಾರ್ಡ್ ಗಳಿಗೆ ತೆರಳಿ ಹಕ್ಕು ಚಲಾಯಿಸಿದ್ದಾರೆ.

ಧರ್ಮಸ್ಥಳ ಅನುದಾನಿತ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ ಹೆಗ್ಗಡೆಯವರು, ಹರ್ಷೇಂದ್ರ ಕುಮಾರ್ ಅವರು ಮತಚಲಾಯಿಸಿದರು. ಶಾಸಕ ಹರೀಶ್ ಪೂಂಜ ದಂಪತಿ ಗರ್ಡಾಡಿ ಶಾಲೆಯಲ್ಲಿ, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ನಡ ಪೆರ್ಮಾಣು ಸರಕಾರಿ ಶಾಲೆಯಲ್ಲಿ, ಮಾಜಿ ಸಚಿವ ಕೆ ಗಂಗಾಧರ ಗೌಡ ಬಂಗಾಡಿ ಶಾಲೆಯಲ್ಲಿ, ಮಾಜಿ ಶಾಸಕ‌ ಪ್ರಭಾಕರ ಬಂಗೇರ ಕುವೆಟ್ಟು ಶಾಲೆಯಲ್ಲಿ, ಕಾಜೂರು ತಂಙಳ್ ಅವರು ಕಾಜೂರು ಸನಿಹದ  ಶಾಲೆಯಲ್ಲಿ ಮತದಾನಗೈದರು. ಮಾಜಿ ಶಾಸಕ ವಸಂತ ಬಂಗೇರ ನಗರ ಪ್ರದೇಶ ವಾಸಿಯಾಗಿರುವುದರಿಂದ ಅವರಿಗೆ ಮತದಾನಕ್ಕೆ ಅವಕಾಶ ಲಭಿಸಿರುವುದಿಲ್ಲ. ಉಳಿದಂತೆ ವೃದ್ಧರು, ವಿಕಲಚೇತನರು, ಅನಾರೋಗ್ಯ ಪೀಡಿತರು ತಮ್ಮವರ ಸಹಕಾರದಿಂದ ಮತಕೇಂದ್ರಕ್ಕೆ ಆಗಮಿಸಿ ಮತಚಲಾಯಿಸಿದರು.‌ ದೂರದ ಒಳನಾಡು ಪ್ರದೇಶ ಕುತ್ಲೂರು, ಅಳಂಬ, ಎಳನೀರು, ಮುಂತಾದೆಡೆ ಕೂಡ ಜನ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ‌ ಭಾಗಿಯಾದರು. ಬಾಂಜಾರು ಕಾಲನಿ, ದಿಡುಪೆ ಭಾಗದಲ್ಲೂ ಕೂಡ ಮತದಾನ ಸುಸೂತ್ರವಾಗಿ ನಡೆಯಿತು.

ಲಾಯಿಲದಲ್ಲಿ‌ ಕಿರಿಕ್;

ಲಾಯಿಲ ಗ್ರಾ.ಪಂ ವ್ಯಾಪ್ತಿಯ ಪಡ್ಲಾಡಿ ಮತಗಟ್ಟೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ‌ ಗಿರೀಶ್  ಡೋಂಗ್ರೆ ಮತ್ತು ಬಳಗದವರು ತಮ್ಮ ಚುನಾವಣಾ ಚಿಹ್ನೆ ಇರುವ ಸಣ್ಣ ಚೀಟಿ ಮುದ್ರಿಸಿ ಅದನ್ನು ಮತಕೇಂದ್ರದ ಬಳಿಯವರೆಗೂ ತಂದು ಮತದಾರರಿಗೆ ನೀಡುತ್ತಿದ್ದಾರೆ ಎಂದು ಆಪಾದಿಸಿ ಪ್ರತಿಸ್ಪರ್ಧಿಗಳು ಜಗಳಕ್ಕೆ ನಿಂತ ಘಟನೆ ನಡೆಯಿತು. ಪ್ರಬಲ‌ ಪ್ರತಿಸ್ಪರ್ಧಿಗಳಾಗಿದ್ದ ಪ್ರಸಾದ್ ಶೆಟ್ಟಿ ಏಣಿಂಜ, ಜೋಕಿಂ ಸಿಕ್ವೇರಾ ಹಾಗೂ ಅವರ ಬಳಗದ ಅಭ್ಯರ್ಥಿಗಳು ತೀವ್ರ ಆಕ್ಷೇಪಿಸಿ ಪರಸ್ಪರ ಮಾತಿನ ಚಕಮಕಿ ನಡೆಸಿಕೊಂಡರು.‌ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ಅವಲೋಕಿಸಿದರು. 

ಗಿರೀಶ್ ಡೋಂಗ್ರೆ ಅವರ ಕೃತ್ಯವನ್ನು ಪ್ರತಿಸ್ಪರ್ಧಿಗಳು ತೀವ್ರವಾಗಿ ವಿರೋಧಿಸಿದರು‌. ಮಾತುಕತೆ ಬಳಿಕ ಪರಿಸ್ಥಿತಿ ತಿಳಿಯಾಯಿತು‌. ಸಂಜೆಯವರೆಗೂ ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಅತ್ತ ಲಾಯಿಲ ಶಾಲೆಯ ಮತಗಟ್ಟೆಯಲ್ಲಿ ಒಂದು ಗುಂಪಿನ ಅಭ್ಯರ್ಥಿಗಳು ಆರೋಗ್ಯವಂತ ಮತದಾರರ ಜೊತೆಗೆ ಬೂತ್‌ನ ಒಳಗೆ ಹೋಗಿ ಅವರಿಗೆ ಸಹಾಯ ಮಾಡುವವರಂತೆ ನಟಿಸಿ‌ ಅವರ ಮತಗಳನ್ನು ತಾವೇ ಒತ್ತುತ್ತಿದ್ದರು ಎಂದು ಆಪಾದಿಸಿ ಪ್ರತಿಸ್ಪರ್ಧಿ  ನಾಗರಾಜ್‌ ಲಾಯಿಲ  ಅವರು ತೀವ್ರ ಪ್ರತಿರೋಧ ತೋರಿಸಿದ ವಿದ್ಯಮಾನ ನಡೆಯಿತು. ತಹಶಿಲ್ದಾರ್, ಎ.ಸಿ ಮತ್ತು ಡಿ.ಸಿ ಅವರಿಗೂ ದೂರವಾಣಿ ಮೂಲಕ ದೂರಿತ್ತ ಅವರು ರಸ್ತೆಯಲ್ಲೇ ಮಲಗಿ ಧರಣಿ‌ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಅಧಿಕಾರಿಗಳು ಮಧ್ಯಪ್ರದೇಶಿಸಿ ಸಮಸ್ಯೆ ಸರಿಪಡಿಸಿದರು.

ಪುಂಜಾಲಕಟ್ಟೆಯ ಮತಕೇಂದ್ರವೊಂದರಲ್ಲಿ ಮತಹಾಕಲು ಮೂವರು ಮುಸ್ಲಿಂ ಮಹಿಳೆಯರು ಆಗಮಿಸುತ್ತಿದ್ದಂತೆ ಅವರ ಮತಗಳನ್ನು ಅದಾಗಲೇ ಯಾರೋ ಬಂದು ಚಲಾಯಿಸಿ‌ಹೋಗಿದ್ದರು. ಗುರುತಿನ ಚೀಟಿ ಪರಿಶೀಲಿಸಿ ಮತದಾರನ ಗುರುತು ಖಚಿತಪಡಿಸದೆ ಈ ರೀತಿ ಎಡವಟ್ಟು ಮಾಡಿದ  ಅಧಿಕಾರಿಯ ನಿರ್ಲಕ್ಷ್ಯದ ವಿರುದ್ಧ ಮತದಾರರು ಕಿಡಿಕಾರಿದರು.

ಮತಕೇಂದ್ರಕ್ಕಿಂತ 100 ಮೀಟರ್ ದೂರದ ವರೆಗೆ ಯಾವುದೇ ರಾಜಕೀಯ ಚಟುವಟಿಕೆ, ಮತದಾರರನ್ನು‌ ಓಲೈಸುವ ತಂತ್ರ ನಡೆಸಬಾರದೆಂಬುದಾಗಿ ಕಟ್ಟುನಿಟ್ಟಿನ ಆಜ್ಞೆ ಇದ್ದರೂ ತಾಲೂಕಿನ ಬಹುತೇಕ ಕಡೆ ಈ ನಿಯಮವನ್ನು ಗಾಳಿಗೆ ತೂರಲಾಗಿತ್ತು. ರಾಜಕೀಯ ಪಕ್ಷದ ಚಿಹ್ನೆ ಈ ಮತದಾನ ದಲ್ಲಿ ಇಲ್ಲದಿದ್ದರೂ ಹೆಚ್ಚಿನ ಕಡೆಗಳಲ್ಲಿ ರಾಜಕೀಯ ಪಕ್ಷದ‌ ಪ್ರಮುಖ ನಾಯಕರೇ ರಂಗಕ್ಕಿಳಿದಿದ್ದರು. ಕೇಸರಿ ಶಾಲು, ತ್ರಿವರ್ಣ ಶಾಲುಗಳ ಕಾರ್ಯಕರ್ತರ ಪಡೆ ಎದುರುಬದುರು ಕೌಂಟರ್‌ಗಳನ್ನು ತೆರೆದು ತಮ್ಮ ಬೆಂಬಲಿತರ ಗೆಲುವಿಗಾಗಿ ಮತದಾರರನ್ನು ಆಕರ್ಷಿಸುತ್ತಿದ್ದ ದೃಷ್ಯ ಸಾಮಾನ್ಯವಾಗಿತ್ತು.‌ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಮೊದಲಾದವರು ತಾಲೂಕಿನಾಧ್ಯಂತ ಮತಗಟ್ಟೆಗಳಿಗೆ ಪ್ರವಾಸ ಕೈಗೊಂಡು ಹುರಿದುಂಬಿಸಿದರು.

ಇನ್ನುಳಿದಂತೆ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ.

ಡಾ.ಡಿ ವೀರೇಂದ್ರ ಹೆಗ್ಗಡೆಯವರು ಕುಟುಂಬ  ಸಮೇತರಾಗಿ ಬಂದು ಮತ ಚಲಾಯಿಸಿದರು.

ಶಾಸಕ ಹರೀಶ್ ಪೂಂಜ ದಂಪತಿ ಮತಚಲಾಯಿಸಿದರು


ಎಂ.ಎಲ್.ಸಿ‌ ಹರೀಶ್ ಕುಮಾರ್ ಮತ್ತು ಪ್ರತಾಪಸಿಂಹ ನಾಯಕ್ ಮತಚಲಾಯಿಸಿದರು.

ಮುಂಡಾಜೆಯಲ್ಲಿ ವಿವಾಹ ಸಂಭ್ರಮದಲ್ಲಿದ್ದ ಸಹೋದರಿಯರಾದ ಝುಹುರಾ ಮತ್ತು ಖೈರುನ್ನಿಸಾ ಮತ ಚಲಾಯಿಸಿದರು.



ತಾಲೂಕಿನ ಕೆಲವೆಡೆ ವಿಕಲಾಂಗರು, ವೃದ್ಧರು ಮತಚಲಾಯಿಸಿದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment