ಬೆಳ್ತಂಗಡಿ; ವಿದ್ಯಾರ್ಥಿಗಳು, ಹೆತ್ತವರು, ಶಿಕ್ಷಕವೃಂದ ಮತ್ತು ಆಡಳಿತ ಮಂಡಳಿ ಈ ನಾಲ್ಕೂ ವಿಭಾಗ ಎಂದರೆ ಒಂದೇ ವಾಹನದ ನಾಲ್ಕು ಚಕ್ರ ಇದ್ದಂತೆ. ಇವರು ಪರಸ್ಪರ ಹೊಂದಾಣಿಕೆ, ಸಮತೋಲನದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಶೈಕ್ಷಣಿಕ ಬಂಡಿ ಸರಾಗವಾಗಿ ಮುಂದೆ ಸಾಗಲು ಸಾಧ್ಯವಿದೆ ಎಂದು ಶಿಕ್ಷಣತಜ್ಞ, ರಾಷ್ಟ್ರೀಯ ತರಬೇತುದಾರ ಕೆ.ಎಮ್ ಅಬೂಬಕ್ಕರ್ ಸಿದ್ದೀಕ್ ಮೋಂಟುಗೊಳಿ ಹೇಳಿದರು.
ಕಾಜೂರಿನಲ್ಲಿ ನಡೆದ ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಆಡಳಿತಕ್ಕೊಳಪಟ್ಟ ಎಜ್ಯುಕೇಶನಲ್ ಟ್ರಸ್ಟ್ ಅಧೀನದ 'ರಾಹ ಪಬ್ಲಿಕ್ ಸ್ಕೂಲ್' ಇಲ್ಲಿ ನಡೆದ ಪೇರೆಂಟ್ಸ್ ಒರಿಯಂಟೇಷನ್ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.
ಇದೇ ವೇಳೆ ಕಾಜೂರಿನ ಪ್ರಧಾನ ಧರ್ಮಗುರುಗಳಾದ
ಸಯ್ಯಿದ್ ಕಾಜೂರು ತಂಙಳ್ ಅವರು, ಕಾಜೂರಿನ ಶಿಕ್ಷಣ ಸಂಸ್ಥೆಗಳಿಗೆ "ರಾಹ ಪಬ್ಲಿಕ್ ಸ್ಕೂಲ್" ಎಂಬುದಾಗಿ ಹೊಸ ನಾಮವನ್ನು ಆನ್ಲೈನ್ ಮೂಲಕ ಘೋಷಿಸಿದರು.
ಸಮಾರಂಭದಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಹ್ಮಾನಿಯಾ ಪ್ರೌಢ ಶಾಲೆ ಕಾಜೂರು ಇಲ್ಲಿ 500 ಕ್ಕಿಂತ ಅಧಿಕ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಕಾಜೂರಿನ ಎಲ್ಲಾ ಶಿಕ್ಷಣ ಸಂಸ್ಥೆಗಳ ಅವಲೋಕನದೊಂದಿಗೆ ಮುಂದಿನ ಗುರಿಯ ಬಗ್ಗೆ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಾಸ್ತಾವಿಕವಾಗಿ ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಜೂರು ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು ಇಬ್ರಾಹಿಂ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಕೆ.ಎಮ್ ಕಮಾಲ್, ಶಿಕ್ಷಣ ಸಮಿತಿಯ ಉಮರುಲ್ ಅಶ್ಪಾಕ್, ಮುಹಮ್ಮದ್ ಆಲಿ, ಅಬ್ದುಲ್ ಮಜೀದ್ ಕುಕ್ಕಾವು, ಆಸಿಫ್ ಜೆ.ಹೆಚ್, ಮದರಸ ಮುಖ್ಯೋಪಾಧ್ಯಾಯ ಡಿ.ಕೆ ರಶೀದ್ ಮದನಿ, ಉಪನ್ಯಾಸಕ ಅಬ್ದುಲ್ ರಹಿಮಾನ್ ಸಅದಿ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯೋಪಾದ್ಯಾಯಿನಿ ಶಂಶಾದ್ ಎಸ್ ಬೆರ್ಕಳ ಸ್ವಾಗತಿಸಿ, ನಿರೂಪಿಸಿದರು. ಶಿಕ್ಷಕ ವೃಂದ, ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಹೆತ್ತವರು ಸಮಾರಂಭದಲ್ಲಿ ಭಾಗಿಯಾಗಿದ್ದರು.