ಬೆಳ್ತಂಗಡಿ: ವಿವಾಹಿತ ವ್ಯಕ್ತಿಯೋರ್ವನು ಅಕ್ರಮವಾಗಿ ಏಕಮುಖ ರೀತಿಯಲ್ಲಿ ಪ್ರೀತಿಸುತ್ತಿದ್ದ ಯುವತಿ ಜೊತೆ ವಿವಾಹ ಸಂಬಂಧ ಕುದುರಿಸಿದ್ದಾನೆಂಬ ಕಾರಣಕ್ಕೆ ಮಧುಮಗನನ್ನು ನಿಶ್ಚಿತಾರ್ಥದ ಹಿಂದಿನ ದಿನವೇ ಕಾರಿನಲ್ಲಿ ಕರೆದೊಯ್ದು ಕುತ್ತಿಗೆಗೆ ಹಗ್ಗ ಬಿಗಿದು ಕೊಲೆಗೈದು ಅರೆಬರೆ ಸುಟ್ಟುಹಾಕಿ ರಸ್ತೆ ಬದಿ ಎಸೆದುಹೋದ ಪ್ರಕರಣದ ಎಲ್ಲಾ ಆರು ಮಂದಿ ಅಪರಾಧಿಗಳಿಗೂ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಮಂಗಳೂರಿನ 1ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಕಳೆದ ಶುಕ್ರವಾರ ಈ ಪ್ರಕರಣ ತೀರ್ಪು ನೀಡಿದ್ದು, ಆರೋಪಿಗಳ ಮೇಲಿನ ಅಪರಾಧಿತ್ವ ಸಾಬೀತಾಗಿದೆ ಎಂದು ತಿಳಿಸಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಬುಧವಾರ ಪ್ರಕಟಿಸುವುದಾಗಿ ತಿಳಿಸಿದಂತೆ ಇದೀಗ ಎಲ್ಲರಿಗೂ ಜೀವಿತಾವಧಿ ಜೈಲು ಶಿಕ್ಷೆ ನೀಡಿದೆ.
ದಿಡುಪೆ ನಿವಾಸಿ ಸುರೇಶ್ ನಾಯ್ಕ (30ವ) ಎಂಬವರನ್ನು ಅಳದಂಗಡಿ ಸನಿಹದ ನಾವರ ನಿವಾಸಿ ಆನಂದ ನಾಯ್ಕ (39ವ.), ಬೆಳ್ತಂಗಡಿ ಪಟ್ಟಣದ ಕಸಬಾ ನಿವಾಸಿ ಪ್ರವೀಣ್ ನಾಯ್ಕ (39ವ.), ಚಾರ್ಮಾಡಿ ನಿವಾಸಿ ವಿನಯ ಕುಮಾರ್ (34ವ.), ಮೂಡುಕೋಡಿ ನಿವಾಸಿ ಪ್ರಕಾಶ್ (35ವ.), ಬಂಟ್ವಾಳ ಪುದು ನಿವಾಸಿ ಲೋಕೇಶ್ (38ವ.) ಮತ್ತು ಮೇಲಂತಬೆಟ್ಟು ನಿವಾಸಿ ನಾಗರಾಜ (43ವ) ಎಂಬವರು ವ್ಯವಸ್ಥಿತವಾಗಿ ಸಂಚು ರೂಪಿಸಿ ಕೊಲೆಗೈದಿದ್ದರು.
ಇವರ ಕೃತ್ಯಕ್ಕಾಗಿ ಐಪಿಸಿ ಸೆಕ್ಷನ್ 302 ರಂತೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ, ಸೆಕ್ಷನ್ 120 ಬಿ’ಯಂತೆ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ರೂಪಾಯಿ ದಂಡ , ಐಪಿಸಿ 201ರಂತೆ 3 ವರ್ಷ ಜೈಲು ಶಿಕ್ಷೆ, 143 ಐಪಿಸಿಯಂತೆ 3 ತಿಂಗಳು ಜೈಲು ಶಿಕ್ಷೆ, 147 ಐಪಿಸಿ ಯಂತೆ 1 ವರ್ಷ ಜೈಲು ಶಿಕ್ಷೆ , 148 ಐಪಿಸಿಯಂತೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕೊಲೆಯಾದ ಸುರೇಶ್ ನಾಯ್ಕ್ ಕುಟುಂಬಕ್ಕೆ 1ಲಕ್ಷ ರೂಪಾಯಿ ಪರಿಹಾರ ನೀಡುವಂತೆಯೂ ತೀರ್ಪಿನಲ್ಲಿ ಆದೇಶ ನೀಡಲಾಗಿದೆ.
ಅರೆ ಸುಟ್ಟ ಮೃತದೇಹಕೊಲೆಯಾಗಿದ್ದ ಸುರೇಶ್ ನಾಯ್ಕ
ಪ್ರಕರಣದ ಅಂತಿಮ ತೀರ್ಪು ನೀಡುವ ಜು.23 ರಂದು ಕೋರ್ಟ್‌ಗೆ ಹಾಜರಾಗಿದ್ದ ಎಲ್ಲಾ ಆರೂ ಮಂದಿಯನ್ನು ಪೊಲೀಸ್ ಕಷ್ಟಡಿಗೆ ಪಡೆದುಕೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಎಲ್ಲರನ್ನೂ ಅಂದು ಬಂಧಿಸಿ ಉಪಕಾರಾಗ್ರಹಕ್ಕೆ ಕರೆದೊಯ್ಯಲಾಗಿತ್ತು.
ಮುಂಡಾಜೆ ಗ್ರಾಮದ ರಸ್ತೆಯಲ್ಲಿ ಕಾರಿನೊಳಗೆ ಕುತ್ತಿಗೆಗೆ ನೇಣು ಬಿಗಿದು ಕೊಲೆ;
ಪ್ರಕರಣದ ಪ್ರಮುಖ ಆರೋಪಿ,ವಿವಾಹಿತನಾಗಿದ್ದು ಪತ್ನಿ ಮಕ್ಕಳಿದ್ದ ಅಳದಂಗಡಿ ಸನಿಹದ ನಾವರ ನಿವಾಸಿ ಆನಂದ ನಾಯ್ಕ ಎಂಬಾತ ಪರಿಚಯದ ಯುವತಿಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ. ಆ ಯುವತಿಯನ್ನು ಮದುವೆಯಾಗುವುದಾಗಿಯೂ ತೀರ್ಮಾನಿಸಿ ಆಕೆಯ ತಂದೆಯ ಬಳಿ ವಿಷಯವನ್ನೂ ತಿಳಿಸಿದ್ದ. ಆದರೆ ಇದು ನಡೆಯದ ಕಾರ್ಯವಾದುದರಿಂದ ಸಹಜವಾಗಿಯೇ ಆಕೆಯ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಆಕೆಯ ಬಗೆಗಿನ ಹುಚ್ಚು ಪ್ರೀತಿ ಆತನನ್ನು ದುಷ್ಕೃತ್ಯಕ್ಕೆ ಪ್ರೇರೇಪಿಸಿತ್ತು. ಹೆತ್ತವರ ನಿರಾಕರಣೆಯಿಂದಾಗಿ ಆತ ಮನಸ್ಸಿನೊಳಗೆಯೇ ರೋಷವಿಟ್ಟುಕೊಂಡಿದ್ದ.
ಈ ಮಧ್ಯೆ ಆಕೆಗೆ ದಿಡುಪೆ ನಿವಾಸಿ, ಸರಳ ವ್ಯಕ್ತಿತ್ವದ ಸುರೇಶ್ ನಾಯ್ಕ ಅವರ ಜೊತೆ ಮದುವೆ ಮಾತುಕತೆ ಏರ್ಪಟ್ಟಿತ್ತು. 2017ರ ಎಪ್ರಿಲ್ 30ರಂದು ನಿಶ್ಚಿತಾರ್ಥಕ್ಕೂ ದಿನ ನಿಗದಿಯಾಗಿತ್ತು. ಈ ವಿಷಯ ಭಗ್ನ ಪ್ರೇಮಿ ಆನಂದ ನಾಯ್ಕನ ಗಮನಕ್ಕೆ ಬಂದು ಯುವತಿಯ ಮನೆಯವರಲ್ಲಿ ಅದ್ಹೇಗೋ ಮಧುಮಗನ ಮೊಬೈಲ್ ನಂಬರ್ ಸಂಗ್ರಹಿಸಿ ಆತನಿಗೆ ಕರೆಮಾಡಿ ಆತನ ತಲೆತಿರುಗಿಸಲು ಪ್ರಯತ್ನಪಟ್ಟಿದ್ದ.
ಸುರೇಶ್ ನಾಯ್ಕನ ಜೊತೆ ದೂರವಾಣಿ ಮೂಲಕ ಮಾತನಾಡಿ, ನೀನು ಮದುವೆಯಾಗುವ ಯುವತಿಯನ್ನು ನಾನು ಪ್ರೀತಿಸುತ್ತಿದ್ದು ಈ ಸಂಬಂಧವನ್ನು ಬಿಟ್ಟುಬಿಡು. ಇಲ್ಲದಿದ್ದರೆ ನಿನಗೆ ಅಪಾಯವಿದೆ ಎಂದೂ ಬೆದರಿಸುವ ತಂತ್ರವನ್ನೂ ಪ್ರಯೋಗಿಸಿದ್ದ. ಇದ್ಯಾವುದೂ ನಡೆಯದೇ ಇದ್ದಾಗ ಆತ ತಾನು ಬೆದರಿಸಿದಂತೆಯೇ ಖತರ್ನಾಕ್ ಐಡಿಯಾಕ್ಕೆ ಚಾಲನೆ ಕೊಟ್ಟಿದ್ದ. ಇದಕ್ಕಾಗಿ ಆತ ಸುರೇಶ್ ನಾಯ್ಕ ಅವರ ನಿಶ್ಚಿತಾರ್ಥದ ಹಿಂದಿನ ದಿನವನ್ನೇ ಮುಹೂರ್ತವಾಗಿ ಫಿಕ್ಸ್ ಮಾಡಿದ್ದ.
2017 ಜುಲೈ 29 ರಂದು ಪ್ರಕರಣದ ಎರಡನೇ ಆರೋಪಿ ಪ್ರವೀಣ್ ನಾಯ್ಕ ಎಂಬಾತನು ಸುರೇಶ್ ಗೆ ಕರೆ ಮಾಡಿ ಆತ್ಮೀಯವಾಗಿ ಮಾತನಾಡಿಸಿ, ಸರಕಾರದ ಗಂಗಾ ಕಲ್ಯಾಣ ಯೋಜನೆಯಡಿ ಹಣ ಸಿಗಲಿದೆ ಎಂದು ಆತನನ್ನು ನಂಬಿಸಿ ಉಜಿರೆಗೆ ಬರುವಂತೆ ಮಾಡಿದ್ದ. ಮಾತು ನಂಬಿ
ಅಲ್ಲಿಗೆ ಬಂದಿದ್ದ ಸುರೇಶ್ ನಾಯ್ಕ ಅವರನ್ನು ಆರೋಪಿಗಳು ಮೊದಲೇ ಕಾರ್ಯತಂತ್ರ ಹೆಣೆದಂತೆ ಅವರನ್ನು ಓಮ್ನಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಬೆಳಾಲು ರಸ್ತೆ, ಕೊಯ್ಯೂರು ರಸ್ತೆ ಅಲ್ಲೆಲ್ಲಾ ಅಲೆದಾಡಿದ್ದರು. ಕೊನೇಗೆ ಮನೆ ಕಡೆ ದಾರಿಯಲ್ಲಿ ಮುಂಡಾಜೆ ದಿಡುಪೆ ರಸ್ತೆಯಲ್ಲಿ ಸೋಮಂತಡ್ಕ ಕ್ಕಿಂತ ಸ್ವಲ್ಪ ಮುಂದಕ್ಕೆ ಕಾರು ಪ್ರಯಾಣಿಸುತ್ತಿದ್ದ ವೇಳೆ ಹಗ್ಗದ ಸಹಾಯದಿಂದ ಹಿಂಬದಿಯಿಂದ ಕುತ್ತಿಗೆಗೆ ನೇಣು ಬಿಗಿದು ಉಸಿರುಗಟ್ಟಿಸಿ ಕಾರಿನ ಒಳಗೆಯೇ ಅವರನ್ನು ಕೊಲೆಗೈದಿದ್ದರು. ಕೊಲೆ ನಡೆದ ಬಳಿಕ ಮೃತದೇಹವನ್ನು ಏನು ಮಾಡುವುದೆಂದು ತೋಚದೆ ಮತ್ತೆ ಒಂದಿಷ್ಟು ದೂರ ಅಲೆದು ಕೊನೇಗೆ ಪಟ್ರಮೆ-ಧರ್ಮಸ್ಥಳ ರಸ್ತೆಯಲ್ಲಿ ಹೋಗಿ ಅವೆಕ್ಕಿ ಎಂಬಲ್ಲಿನ ತಗ್ಗು ಪ್ರದೇಶದಲ್ಲಿ ರಸ್ತೆ ಬದಿ ಎಸೆದು ಮೃತದೇಹದ ಗುರುತು ಸಿಗದಂತಾಗಲು ಹಾಗೂ ಸಂಪೂರ್ಣ ಉರಿದು ಹೋಗಲೆಂದು ಗೋಣಿ ಚೀಲ ಸುತ್ತಿ ಅದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ್ದರು. ಮೃತಪಟ್ಟ ವ್ಯಕ್ತಿಯ ಸೊತ್ತುಗಳನ್ನು ಕೊಯ್ಯೂರು ರಸ್ತೆಯ ಕಟ್ಟ ಎಂಬಲ್ಲಿ ಮೋರಿಯ ಕೆಳಗೆ ಸುಟ್ಟು ಹಾಕಿದ್ದರು. ಸುರೇಶ್ ನಾಯ್ಕರ ದೇಹ ಅರೆ ಬರೆ ಸುಟ್ಟ ಸ್ಥಿತಿಯಲ್ಲಿ ಮರುದಿನ ಪಟ್ರಮೆ ರಸ್ತೆಯಲ್ಲಿ ಪತ್ತೆಯಾಗಿತ್ತು. ಪ್ರಕರಣವನ್ನು ಭೇಧಿಸಿದ್ದ ಪೊಲೀಸರು ಆರೂ ಮಂದಿ ಆರೋಪಿಗಳನ್ನು ಮೇ 4 ರಂದು ಬಂಧಿಸಿದ್ದರು. ಮಂಗಳೂರು ಫೊರೆನ್ಸಿಕ್ ಲ್ಯಾಬ್‌ನಲ್ಲಿ ಪೋಸ್ಟ್ ಮಾರ್ಟಂ ಮಾಡಲಾದ ಅಪರಿಚಿತ ಶವದ ಗುರುತು ಪತ್ತೆಯಾದ ಬಳಿಕ ದಿಡುಪೆ ಮನೆಯಲ್ಲಿ ಅವರ ಅಂತ್ಯಸಂಸ್ಕಾರ ನಡೆದಿತ್ತು.
ಪ್ರಕರಣದ ತನಿಖೆಯಲ್ಲಿ ಧರ್ಮಸ್ಥಳ ಪೊಲೀಸ್ ಠಾಣಾ ಆಗಿನ ಎಸ್ ಐ ಕೊರಗಪ್ಪ ನಾಯ್ಕ, ಸಿಬ್ಬಂದಿಗಳಾದ ಬೆನ್ನಿಚ್ಚನ್ , ಸ್ಯಾಮುವೆಲ್, ವಿಜು, ಪ್ರಮೋದ್ ನಾಯ್ಕ್, ರಾಹುಲ್ ರಾವ್, ವೃತ್ತ ಕಛೇರಿಯ ಸಿಬ್ಬಂದಿಗಳಾದ ಈಗಿನ ಎಎಸ್‌ಐ, ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತರಾದ ವೆಂಕಟೇಶ್ ನಾಯ್ಕ್, ಪ್ರವೀಣ್ ದೇವಾಡಿಗ, ನವಾಝ್ ಬುಡ್ಕಿ ಮತ್ತು ಜಿಲ್ಲಾ ಗಣಕ ಯಂತ್ರ ವಿಭಾಗದ ಸಿಬ್ಬಂದಿಗಳಾದ ಸಂಪತ್ ಮತ್ತು ದಿವಾಕರ್ ರವರು ಸಹಕರಿಸಿರುತ್ತಾರೆ.
ತಂಡಕ್ಕೆ ಆಗಿನ ಎಸ್.ಪಿ ಬೊರಸೆ, ಬಂಟ್ವಾಳ ಉಪ ವಿಭಾಗದಲ್ಲಿ ಡಿವೈಎಸ್‌ಪಿ ಆಗಿದ್ದ ರವೀಶ್ ಸಿ.ಆರ್ ಅವರು ಮಾರ್ಗದರ್ಶನ ನೀಡಿದ್ದರು.
ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ಅವರು ಪ್ರಕರಣದಲ್ಲಿ 33 ಮಂದಿ ಸಾಕ್ಷಿದಾರರ ವಿಚಾರಣೆ ನಡೆಸಿ ವಾದ ವಿವಾದ ಆಲಿಸಿದ ಬಳಿಕ ಆರೋಪಿಗಳ ಮೇಲಿನ ಆಪಾದನೆಯನ್ನು ಸಾಬೀತುಪಡಿಸಿ ಇದೀಗ ಅವರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ
ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶೇಖರ್ ಶೆಟ್ಟಿ ಹಾಗೂ ರಾಜು ಪೂಜಾರಿರವರು ವಾದಿಸಿರುತ್ತಾರೆ.