ಮುಂಡಾಜೆ ಗ್ರಾಮದ ಪರಮುಖ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿ ನಾಪತ್ತೆಯಾಗಿದ್ದ ಹಿಂದೂ ಯುವಕನ ಪತ್ತೆಗಾಗಿ ಅಪರಾತ್ರಿವರೆಗೆ ಕಾರ್ಯಾಲಯ ನಡೆಸಿದ್ದ ಮುಸ್ಲಿಂ ಯುವಕರ ತಂಡ ಸೋಮವಾರ ಬೆಳಗ್ಗೆ ದೇಹ ಪತ್ತೆ ಮಾಡುವಲ್ಲಿವರೆಗೆ ಸಾಹಸಮಯ ಕಾರ್ಯಾಚರಣೆ ನಡೆಸಿ ಮೃತರ ಕುಟುಂಬಕ್ಕೆ ನೆರವು ನೀಡಿದ್ದಾರೆ.
ಪುತ್ತೂರು ತಾಲೂಕು ಕಬಕ ನಿವಾಸಿ ಸುಂದರಿ ಎಂಬವರ ಪುತ್ರ ಕಿರಣ್(20) ಎಂಬವರು ಮುಂಡಾಜೆಯ ಪರಮುಖ ಎಂಬಲ್ಲಿಗೆ ಅಜ್ಜಿ ಮನೆಗೆ ಬಂದವರು ರವಿವಾರ ನದಿ ಕಡೆಗೆ ಹೋಗಿ ಆಕಸ್ಮಿಕವಾಗಿ ಮುಳುಗಿ ನಾಪತ್ತೆಯಾಗಿದ್ದರು. ತಕ್ಷಣ ಸ್ನೇಹಿತ ಮನೋಜ್ ಕಿರಣ್ ರನ್ನು ರಕ್ಷಿಸಲು ಪ್ರಯತ್ನಪಟ್ಟರೂ ವಿಫಲವಾಗಿದ್ದರು.ಅಲ್ಲದೆ ಮನೋಜ್ ಕೂಡ ಅಪಾಯಕ್ಕೆ ಗುರಿಯಾಗಿದ್ದರಾದರೂ ಮತ್ತೋರ್ವ ಅವರ ಸಂಬಂಧಿ ಅವರನ್ನು ರಕ್ಷಿಸಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಧರ್ಮಸ್ಥಳ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಯವರು ಸ್ಥಳಕ್ಕೆ ಧಾವಿಸಿದ್ದರು. ಏರ್ ಬೋಟ್ ಮೂಲಕ ಅಗ್ನಿಶಾಮಕ ದಳದವರು ಕಾರ್ಯಾಚರಣೆ ಆರಂಭಿಸಿದರು. ಇದರಲ್ಲಿ ಪರಿಣಾಮ ಕಾಣದಾಗ ಸದ್ರಿ ವಿಚಾರ ಅರಿತ ಮುಳುಗು ಪರಿಣತರಾದ ರಶೀದ್ ಮುಂಡಾಜೆ, ಕಕ್ಕಿಂಜೆಯವರಾದ ಅಬ್ದುಲ್ ಖಾದರ್, ಶಮೀರ್ ಮತ್ತು ಶಂಶುದ್ದೀನ್ ಇವರು ನೀರಿಗೆ ದುಮುಕಿ ಬಾಲಕನ ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡರು. ಇವರಿಗೆ ಸಾದಿಕ್ ಮುಂಡಾಜೆ ಸಂಪೂರ್ಣ ಸಹಕಾರ ನೀಡಿದರು. ಕತ್ತಲಾಗುತ್ತಿದ್ದಂತೆ ಅಗ್ನಿಶಾಮಕ ದಳದವರು ಕಾರ್ಯಾಚರಣೆ ಸ್ಥಗಿತಗೊಳಿಸಿ ತೆರಳಿದರೂ ಈ ತಂಡ ಮಾತ್ರ ನಡುರಾತ್ರಿವರೆಗೂ ನದಿಯ ಅಪಾಯಕಾರಿ ಗುಂಡಿಯಲ್ಲಿ ಬಾಲಕನ ಪತ್ತೆಕಾರ್ಯ ನಡೆಸಿದರು. ಬಳಿಕ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತಗೊಳಿಸಿದ ತಂಡ ಬೆಳಗ್ಗೆ 6 ಗಂಟೆಗೆ ಮತ್ತೆ ಹುಡುಕಾಟ ಆರಂಭಿಸಿ 6.45 ರ ವೇಳೆಗೆ ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಸಫಲವಾಗಿದ್ದಾರೆ.ಚಾಲಕರು ಮತ್ತು ಕೂಲಿ ಕಾರ್ಮಿಕರಾಗಿರುವ ಈ ಯುವಕರ ತಂಡದ ಸಾಹಸವನ್ನು ಊರವರು ಕೊಂಡಾಡಿದ್ದಾರೆ.
ಕಿರಣ್ ಅವರು ನದಿ ನೀರಿನಲ್ಲಿ ಮುಳುಗಿದ್ದ ಜಾಗಕ್ಕಿಂತ ಅಂದಾಜು 30 ಅಡಿಯಷ್ಟು ಮುಂದಕ್ಕೆ ಸುಮಾರು 15 ಆಳದ ನೀರಿನಲ್ಲಿ ಮೃತದೇಹ ಪತ್ತೆಯಾಗಿತ್ತು. ಕಿರಣ್ ಈಜು ಬಲ್ಲವರಾದರೂ ಇತ್ತೀಚೆಗೆ ಅಪಘಾತದಲ್ಲಿ ಕೈ ನೋವು ಇದ್ದುದರಿಂದ ಈಜಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಬಡತನದ ಹಿನ್ನೆಲೆ ಇರುವ ಕುಟುಂಬದವರಾಗಿದ್ದ ಕಿರಣ್ ಕೂಲಿ ಕೆಲಸ ಮಾಡಿಕೊಂಡಿದ್ದು ಮನೆಗೆ ಆಧಾರವಾಗಿದ್ದರು. ಮೃತ ಕಿರಣ್ ತಂದೆ, ತಾಯಿ ಹಾಗೂ ಓರ್ವೆ ತಂಗಿಯನ್ನು ಅಗಲಿದ್ದಾರೆ.