ಬೆಳ್ತಂಗಡಿ; ತಾಲೂಕಿನ ಗಡಿ ಪ್ರದೇಶವಾದ ತೆಂಕಕಜೆಕಾರು ಗ್ರಾಮದ ಕೆಳಗಿನಕರ್ಲ ಮನೆ ನಿವಾಸಿ ರಫೀಕ್ (20ವ.)ಎಂಬವರನ್ನು ಸಂಬಂಧಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಸೋಮವಾರ ನಡೆದಿದೆ. ಸ್ವಂತ ಸಮೀಪದ ಸಂಬಂಧಿಯೇ ಆಗಿರುವ ಸಿದ್ದೀಕ್(30ವ.) ಎಂಬವನೇ ಕೃತ್ಯ ನಡೆಸಿದ್ದೆಂದು ಗೊತ್ತಾಗಿದೆ.
ಇದೀಗ ಆರೋಪಿ ಸಿದ್ದೀಕ್ ಎಂಬಾತನನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದು ಕೃತ್ಯಕ್ಕೆ ಬಳಸಿದ ಆಲ್ಟೋ ಕಾರು, ಚೂರಿ, ರಕ್ತದ ಕಲೆಗಳನ್ನು ತೆಳೆದು ಶುಚಿಗೊಳಿಸಿಡಲಾಗಿದ್ದ ಒದ್ದೆ ವಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪುಂಜಾಲಕಟ್ಟೆ ಪೊಲೀಸ್ ಠಾಣಾ ಸರಹದ್ದಿನ ಪೊಲೀಸ್ ಸಿಬ್ಬಂದಿ, ಬೀಟ್ ಪೊಲೀಸ್ ವಿಶಾಲಾಕ್ಷಿ ಅವರ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದ್ದು, ರಫೀಕ್ ಮೃತದೇಹ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಕರ್ಲ ಸಮೀಪದ ಗುಡ್ಡದಲ್ಲಿ ಮೋರಿಯೊಂದರ ಕೆಳಗೆ ಹರಿವ ನೀರಿನಲ್ಲಿ ಎಸೆದುಹೋಗಲಾಗಿತ್ತು. ಕೌಟುಂಬಿಕವಾದ ಕಾರಣಕ್ಕೆ ಕೊಲೆ ಆಗಿದೆ ಎಂದು ಅರಂಭಿಕ ಮಾಹಿತಿ ಲಭಿಸಿದೆ. ಚೂರಿಯಿಂದ ಇರಿದು ಸಾಯಿಸಿದ್ದೆಂದು ತಿಳಿದುಬಂದಿದೆ.
ಜೀನ್ಸ್ ಪೇಂಟ್ ಮತ್ತು ಕೆಂಪು ಬಣ್ಣದ ಶರ್ಟ್ ಧರಿಸಿರುವ ರಫೀಕ್ ಮೃತದೇಹ ಅಂಗಾತ ಮಲಗಿದ ಸ್ಥಿತಿಯಲ್ಲಿ ಕಾಡಿನ ಬದಿ ಪತ್ತೆಯಾಗಿದೆ.
ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಶಿವಕುಮಾರ್, ಪುಂಜಾಲಕಟ್ಟೆ ಠಾಣಾ ಎಸ್ ಐ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಮಹಜರು ನಡೆಸುತ್ತಿದ್ದಾರೆ.