ಬೆಳ್ತಂಗಡಿ; ಕೋವಿಡ್ ಸಂಕಷ್ಟ ಕಾಲದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ವತಿಯಿಂದ ಜಾತಿ ಧರ್ಮ ಭೇದವಿಲ್ಲದೆ ರಾಜ್ಯಾಧ್ಯಂತ 2 ಕೋಟಿ ರೂ. ಮೊತ್ತದ ಆಹಾರದ ಕಿಟ್ ನೀಡುವ ಮೂಲಕ ಅರ್ಹರಿಗೆ ಸಲ್ಲಿಸಿದ ಸೇವೆ ಮಾದರಿಯಾದುದು ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಇಂಡಿಯೋತ್ಸವ- 75 ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ, ಅನುಗ್ರಹ ಕಾಲೇಜು ಕ್ಯಾಂಪಸ್ ನಲ್ಲಿ ಹಮ್ಮಿಕೊಂಡಿದ್ದ,
ಸರಕಾರಿ ಇಲಾಖೆಯಲ್ಲಿನ ದಕ್ಷ ಸೇವೆಗೆ ಅಭಿನಂದನೆ, ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ
ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಇನ್ನೋರ್ವ ಮುಖ್ಯ ಅತಿಥಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ಎಂ.ಹೆಚ್ ಮಾತನಾಡಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೋವಿಡ್ ನಿಯಂತ್ರಣದಲ್ಲಿ ಸರಕಾರಕ್ಕೆ ಪೂರಕ ಕೆಲಸ ಮಾಡಿದ್ದು, ನಮ್ಮ ನಗರದಲ್ಲೂ ನೈರ್ಮಲ್ಯ ಕಾರ್ಯಕ್ರಮ ಆಯೋಜಿಸಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ತಾಲೂಕು ಅಧ್ಯಕ್ಷ ಎಸ್.ಎಂ ತಂಙಳ್ ಉಜಿರೆ ವಹಿಸಿದ್ದರು.ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ ಅಜಿಲ,ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಸ್ ವಿರೂಪಾಕ್ಷಪ್ಪ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟಿಹೆಚ್‌ಒ ಕಚೇರಿ ಬೆಳ್ತಂಗಡಿ ಇಲ್ಲಿ ಸರಕಾರಿ ವಾಹನ ಚಾಲಕರಾಗಿರುವ ಅಬ್ದುಲ್ ರಝಾಕ್ ಅವರ ಸೇವೆ ಗುರುತಿಸಿ ಸನ್ಮಾನಿಸಲಾಯಿತು.
ಲೈವ್ ಮೀಡಿಯಾ ನ್ಯೂಸ್ ಚಾನೆಲ್ ಸಂಪಾದಕ ಅಶ್ರಫ್ ಆಲಿಕುಂಞಿ ಮುಂಡಾಜೆ ಅಭಿನಂದನಾ ಭಾಷಣ ಮಾಡಿದರು.
ವೇದಿಕೆಯಲ್ಲಿ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಸದಸ್ಯ ಎಂಬಿಎಂ ಸಾದಿಕ್ ಮಾಸ್ಟರ್ ಮಲೆಬೆಟ್ಟು, ಕೋಶಾಧಿಕಾರಿ ಎ.ಕೆ ಅಹಮ್ಮದ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ತಾ. ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕಾಶಿಪಟ್ಣ ಸರಕಾರಿ ಪ್ರೌಢ ಶಾಲೆಯ ಸಹಶಿಕ್ಷಕಿ ಸರಿನ್ ತಾಜ್ ಮತ್ತು ಎಸ್‌ಡಿಎಂ ಆಂಗ್ಲ ಮಾಧ್ಯಮ ಸ್ಟೇಟ್ ಸಿಲೆಬಸ್ ಪ್ರೌಢ ಶಾಲಾ ಉಜಿರೆಯ ಸಹಶಿಕ್ಷಕಿ ರೇಷ್ಮಾ ಅವರಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.
ಮುಸ್ಲಿಂ ಜಮಾಅತ್ ತಾ. ಪ್ರಧಾನ ಕಾರ್ಯದರ್ಶಿ, ಮಾಜಿ ಸೈನಿಕ ಮುಹಮ್ಮದ್ ರಫಿ ಸ್ವಾಗತಿಸಿ ಪ್ರಸ್ತಾವನೆಗೈದರು. ಮಲ್‌ಜಅ ಸಂಸ್ಥೆಯ ಪಿಆರ್‌ಒ ಎಂ ಶರೀಫ್ ಬೆರ್ಕಳ ಕಾರ್ಯಕ್ರಮ ನಿರೂಪಿಸಿ, ಅಳದಂಗಡಿ ಬ್ಲಾಕ್ ಕಾರ್ಯದರ್ಶಿ ತಲ್‌ಹತ್ ಎಂ.ಜಿ ವಂದನಾರ್ಪಣೆಗೈದರು. ಕೋವಿಡ್ ನಿಯಮಾವಳಿಯಂತೆ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಜಮಾಅತ್ ನ ತಾಲೂಕು ಸಮಿತಿ, ಬ್ಲಾಕ್ ಸಮಿತಿ ಮತ್ತು ಗ್ರಾಮ ಸಮಿತಿಯ ಆಹ್ವಾನಿತ ಪ್ರತಿನಿಧಿಗಳು ಮಾತ್ರ ಭಾಗವಹಿಸಿದ್ದರು.