Posts

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ದ. ಕ ಜಿಲ್ಲೆಯಲ್ಲೇ ಬೆಳ್ತಂಗಡಿಯನ್ನು ಪ್ರಥಮ ಸ್ಥಾನಕ್ಕೆ ತಂದ ವಿದ್ಯಾರ್ಥಿಗಳಿಗೆ ಶಾಸಕರ ಮೆಚ್ಚುಗೆ

2 min read

ಬೆಳ್ತಂಗಡಿ; ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಎಲ್ಲಾ  4235 ವಿದ್ಯಾರ್ಥಿಗಳೂ ಕೂಡ ಉತ್ತೀರ್ಣರಾಗಿದ್ದು ತಾಲೂಕಿನಲ್ಲಿ 100 ಶೇ. ಫಲಿತಾಂಶ ಬರುವಂತಾಗಿದೆ. ಅದಕ್ಕಾಗಿ ಕ್ಷೇತ್ರದ ಶಾಸಕ ಎಂಬ ನೆಲೆಯಲ್ಲಿ ನಾನು ಹಾಗೂ ಶಿಕ್ಷಣ ಇಲಾಖೆಯ ಪರವಾಗಿ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ. ಇದರ ಹಿಂದೆ ಪ್ರಯತ್ನ ಪಟ್ಟಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಮತ್ತು  ಮಕ್ಕಳನ್ನು ಪರೀಕ್ಷೆಗೆ ಸನ್ನದ್ದಗೊಳಿಸಿದ ಎಲ್ಲಾ ಶಿಕ್ಷಕವೃಂದದವರನ್ನೂ ಅಭಿನಂದಿಸುತ್ತೇನೆ ಎಂದು‌ ಶಾಸಕ ಹರೀಶ್ ಪೂಂಜ ಹೇಳಿದರು.

ಬೆಳ್ತಂಗಡಿ ಸರಕಾರಿ ಪ್ರವಾಸಿ ಮಂದಿರದಲ್ಲಿ ಬುಧವಾರ ಕರೆದಿದ್ದ‌ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಈ ಕೊರೋನಾ ಕಾಲಘಟ್ಟದಲ್ಲೂ ನಮ್ಮ ತಾಲೂಕಿನ ವಿದ್ಯಾರ್ಥಿಗಳು ಉತ್ತಮ ರೀತಿಯ ಫಲಿತಾಂಶ ಸಾಧಿಸಿದ್ದಾರೆ. ತಾಲೂಕಿನ ಶೈಕ್ಷಣಿಕ ಬೆಳವಣಿಗೆಯ ದೃಷ್ಟಿಯಿಂದ ಅವರು ಕೊಟ್ಟಿರುವ ಫಲಿತಾಂಶ ಅತ್ಯಂತ ತೃಪ್ತಿದಾಯಕ. ದ.ಕ  ಜಿಲ್ಲೆಯಲ್ಲೇ ಹೆಚ್ಚಿನ‌ ಫಲಿತಾಂಶ ಬಂದಿರುವುದು ಹರ್ಷದಾಯಕ.  ತಾಲೂಕಿನಲ್ಲಿ ‌ಒಟ್ಟು 70 ಹೈಸ್ಕೂಲ್ ಗಳಲ್ಲಿ 60 ಹೈಸ್ಕೂಲ್‌ಗಳಲ್ಲಿ ಎ ಗ್ರೇಡ್ ಫಲಿತಾಂಶ ಬಂದಿದ್ದು, ಇದು 85.75 ಶೇ. ಆಗಿರುತ್ತದೆ. ದ.ಕ‌ ಜಿಲ್ಲೆಯಲ್ಲೇ ಬೆಳ್ತಂಗಡಿ ತಾಲೂಕು ಪ್ರಥಮ ಸ್ಥಾನದಲ್ಲಿದೆ. 10 ಶಾಲೆಗಳು ಬಿ ಗ್ರೇಡ್ ನಲ್ಲಿದೆ‌.‌ ತಾಲೂಕಿನಲ್ಲಿ ಸಿ‌ ಗ್ರೇಡ್ ನ ಫಲಿತಾಂಶವೇ ಇಲ್ಲ ಎಂಬುದು ಉಲ್ಲೇಖನೀಯ ಎಂದರು. ಎ ಪ್ಲಸ್ ಗ್ರೇಡ್‌ನಲ್ಲಿ 325 ವಿದ್ಯಾರ್ಥಿಗಳು, ಎ ಗ್ರೇಡ್‌ನಲ್ಲಿ 657 ಮಂದಿ,  ಬಿ ಗ್ರೇಡ್‌ನಲ್ಲಿ 1866 ಮಂದಿ ಮತ್ತು , ಸಿ ಗ್ರೇಡ್ ನಲ್ಲಿ 1094  ವಿದ್ಯಾರ್ಥಿಗಳು ಉತ್ತೀರ್ಣರಾಗಿ ದಾಖಲೆ ಮಾಡಿದ್ದಾರೆ. ಇದು ತಾಲೂಕಿನ ಶೈಕ್ಷಣಿಕ ಗುಣಮಟ್ಟ ಉತ್ತಮ ರೀತಿಯಲ್ಲಿದೆ ಎಂದು ರೂಪಿಸಿದಂತೆಯೂ ಆಗುತ್ತದೆ ಎಂದರು.

ಸೈಂಟ್ ಮೇರಿಸ್ ಲಾಯಿಲ ಶಾಲಾ ವಿದ್ಯಾರ್ಥಿನಿ ಸಂಯುಕ್ತ ಡಿ ಪ್ರಭು 625 ಪೂರ್ಣ ಅಂಕಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದಾರೆ.ಅವರಿಗೆ ತಾಲೂಕಿನ ಶಾಸಕನಾಗಿ ಶಿಕ್ಷಣ ಇಲಾಖೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.‌ ಜೀವನ್ ಆಶಿಸ್ ಮತ್ತು  ಹಿಲ್ಡಾ ಮ್ಯಾಥ್ಯೂ ಎಂಬ ವಿದ್ಯಾರ್ಥಿಗಳು ಸಮಾನ 623 ಅಂಕಗಳನ್ನು ಪಡೆದು ಪ್ರಗತಿ ಸಾಧಿಸಿದ್ದಾರೆ. 8 ಮಂದಿ ವಿದ್ಯಾರ್ಥಿಗಳು 621 ಅಂಕಗಳನ್ನು ಸಾಧಿಸಿ ಮೂರನೇ ಸ್ಥಾನದಲ್ಲಿದ್ದಾರೆ.ಅದರಲ್ಲೂ ವಿಶೇಷವಾಗಿ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ಕಾಯರ್ತಡ್ಕದ ವಿದ್ಯಾರ್ಥಿ ಹರ್ಷಿತಾ 621 ಅಂಕಗಳನ್ನು ಪಡೆದು ಮನ್ನಣೆಗೆ ಪಾತ್ರರಾಗಿದ್ದಾರೆ.ಅಲ್ಲದೆ ಎಸ್‌ಡಿಎಂ ಆಂ.‌ಮಾ. ಶಾಲೆ ಬೆಳ್ತಂಗಡಿಯ ಕವನ್ ವಿ.ಎಸ್ ಮತ್ತು ಅನಘಾ, ಸೈಂಟ್ ಮೇರಿಸ್ ಲಾಯಿಲ ಶಾಲೆಯ ಜ್ಞಾನಶ್ರೀ,  ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದ ವಿದ್ಯಾರ್ಥಿನಿಗಳಾದ ಅಪೂರ್ವ ಮತ್ತು ಧರಿತ್ರಿ ಭಿಡೆ, ವಾಣಿ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಿದ್ಯಾರ್ಥಿಗಳಾದ ಗೌರವ್ ವೈ ಮತ್ತು  ಸಾತ್ವಿಕ್ ಇವರುಗಳು‌ 621 ಅಂಕಗಳನ್ನು ಪಡೆದು ನಮ್ಮ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.  ಅವರೆಲ್ಲರಿಗೂ‌ ಅಭಿನಂದನೆ ಹೇಳುತ್ತೇನೆ. ಅವರ ಮುಂದಿನ  ಶಿಕ್ಷಣ ಹಾದಿಗೆ ಶುಭ ಕೋರುತ್ತೇನೆ. ಇನ್ನಷ್ಟು ಉನ್ನತ ಸಾಧನೆ ಮಾಡಲು ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಬೇಡುತ್ತೇನೆ .‌ಇದರ ಹಿಂದೆ ಶ್ರಮಿಸಿದ ಎಲ್ಲಾ ಶಿಕ್ಷಕರಿಗೆ, ವಿದ್ಯಾರ್ಥಿ ಪೋಷಕರಿಗೂ ಅಭಿನಂದನೆಗಳು ಎಂದರು. ಫಲಿತಾಂಶ ಪಡೆದ ವಿದ್ಯಾರ್ಥಿಗಳ ಪೈಕಿ ಮೂರು ಮಂದಿ ಕೋವಿಡ್ ಬಾಧಿಸಿದ್ದ ವಿದ್ಯಾರ್ಥಿಗಳೂ ಒಳಗೊಂಡಿದ್ದು ಓರ್ವ ವಿದ್ಯಾರ್ಥಿ ಆಸ್ಪತ್ರೆಯಿಂದ ಆಗಮಿಸಿ ಪರೀಕ್ಷೆ ಬರೆದಿದ್ದರು ಎಂಬುದು ಗಮನಾರ್ಹ ಎಂದು‌ ಶಾಸಕರು‌ ಈ ಸಂದರ್ಭ  ತಿಳಿಸಿದರು.

ತ್ರಿಕಾಗೋಷ್ಠಿ ಬಳಿಕ ಶಾಸಕರು ತಾಲೂಕಿಗೆ ಪ್ರಥಮ ಸ್ಥಾನಿಯಾದ ಸಂಯುಕ್ತ ಪ್ರಭು ಅವರ ನಿವಾಸಕ್ಕೇ ತೆರಳಿ ತಾಲೂಕಿನ ಪರವಾಗಿ ಅವರನ್ನು ಅಭಿನಂದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಇಒ ವಿರೂಪಾಕ್ಷಪ್ಪ, 

ಶಿಕ್ಷಣ ಸಂಯೋಜಕರಾದ ಶಂಭು ಶರ್ಮ ಮತ್ತು ಸುಭಾಸ್ ಜಾದವ್ ಉಪಸ್ಥಿತರಿದ್ದರು.

ಆಧುನಿಕ ಪ್ರಪಂಚ ಅಂತರ್ಜಾಲ ಯುಗ ಮತ್ತು ಮಾಹಿತಿ ಯುಗವಾಗಿ ಪರಿವರ್ತಿತವಾಗಿದೆ. ಜಗತ್ತು ಎಷ್ಟು ವೇಗವಾಗಿ ಮುನ್ನಡೆಯುತ್ತಿದೆ ಎಂದರೆ ನಿಮಿಷ‌ ನಿಮಿಷಕ್ಕೆ ನಮ್ಮ ಅರಿವು, ನಮ್ಮಲ್ಲಿರುವ ಮಾಹಿತಿ ಹಳೆಯದಾಗುತ್ತಿದೆ. ಆದ್ದರಿಂದ ಕಾಲದ‌ ವೇಗದ ಜೊತೆಗೆ…

Post a Comment