ಬೆಳ್ತಂಗಡಿ; ಮುಂಡಾಜೆ, ಚಾರ್ಮಾಡಿ, ಧರ್ಮಸ್ಥಳ ಸಹಿತ ವೇಣೂರು ಭಾಗದ ಕೆಲವು ಪ್ರಮುಖ ನದಿಗಳು ಮರಳುಗಾರಿಕೆಯ ಅಡ್ಡೆಗಳಾಗುತ್ತಿದೆ. ಆದರೂ ಗಣಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಮೌನ ಹಲವು ಸಂದೇಹ, ಊಹಾ ಪೋಹಗಳಿಗೆ ಕಾರಣವಾಗಿದೆ.
ತಿಂಗಳುಗಳ ಹಿಂದೆ ಧರ್ಮಸ್ಥಳ ನೇತ್ರಾವತಿ ನದಿಯಲ್ಲಿ ಡೆಜ್ಜಿಂಗ್ ಬೋಟ್ ವಶಕ್ಕೆ ಪಡೆದುಕೊಂಡ ಬೆನ್ನಿಗೇ ಇದೀಗ ಮುಂಡಾಜೆಯ ಮೃತ್ಯುಂಜಯ ನದಿಯಲ್ಲಿ ಇನ್ನೊಂದು ಅಕ್ರಮ ಮರಳು ಗಾರಿಕೆ ಪತ್ತೆಯಾಗಿದೆ.ಗ್ರಾಮದ ಕಾಪಿನಬಾಗಿಲು ಎಂಬಲ್ಲಿ ಖಾಸಗಿ ಜಾಗದಲ್ಲಿ ದಾರಿ ಮಾಡಿಕೊಂಡು ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಡೆಜ್ಜಿಂಗ್ ಬೋಟ್ ಸಹಿತ 3.50 ಲಕ್ಷ ರೂ.ಗಳ ಸೊತ್ತು ಶುಕ್ರವಾರ ಪತ್ತೆಯಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿದ್ದಾರೆ.
ವಶಪಡಿಸಿಕೊಂಡ ಸೊತ್ತುಗಳು ಈಗ ಧರ್ಮಸ್ಥಳ ಪೊಲೀಸ್ ಠಾಣೆಯ ವಶಕ್ಕೆ ನೀಡಲಾಗಿದೆ.
ನದಿಪಾತ್ರದ ಕೆಲವರು ಕೃಷಿ ತೋಟಗಳಿಗೆ ಬಿದ್ದಿರುವ ಹೂಳು ತೆಗೆಯುವ ನೆಪದಲ್ಲಿ ಕೆಲವರು ಸ್ಥಳೀಯಾಡಳಿತದಿಂದ ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಪರವಾನಿಗೆ ಪಡೆದುಕೊಂಡು ವ್ಯಾಪಕವಾದ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪವಿದೆ.
ಸಿಕ್ಕಿದ ಅನುಮತಿ ಪತ್ರ ಬಳಸಿಕೊಂಡು ನೇರ ನದಿಗೆ ಇಳಿಯುವ ಹಿಟಾಚಿ ಮತ್ತು ಜೆಸಿಬಿ ಯಂತ್ರಗಳು ಮರಳು ಶೇಖರಿಸುವ ಕಾರ್ಯ ಮಾಡುತ್ತಿದ್ದು, ಗುಡ್ಡೆ ಹಾಕಿದ ಮರಳನ್ನು ಸಾಗಾಟಮಾಡಿ ಭಾರೀ ಮೊತ್ತಕ್ಕೆ ಮಾರಾಟಮಾಡುವ ದೊಡ್ಡ ಡೀಲ್ ಇಲ್ಲಿ ನಡೆಯುತ್ತಿದೆ. ದಿನವೊಂದಕ್ಕೆ ಲಕ್ಷಗಟ್ಟಲೆ ಹಣಕಾಸು ವ್ಯವಹಾರ ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆಯನ್ನು ಬಾಯಿಮುಚ್ಚಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ.
ಸ್ಥಳೀಯವಾಗಿ ಕೆಲವರಿಗೆ ಮಾಮೂಲಿ ಕೂಡ ನೀಡಲಾಗುತ್ತಿದ್ದು ಹಲವರು ಇದೇ ವ್ಯವಹಾರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಎಂಬ ಆರೋಪವಿದೆ. ಕೆಲವು ನದಿಯಲ್ಲಿ ಸೇತುವೆಯ ಪಿಲ್ಲರ್‌ಗಳ ತಳಪಾಯದವರೆಗೂ ಮರಳುಗಾರರು ಆಳ ಗುಂಡಿಗಳನ್ನು ಮಾಡಿದ ಉದಾಹರಣೆಗಳಿದ್ದು, ಗುರುಪುರ, ಕೈಕಂಬದಂತೆ ಬೆಳ್ತಂಗಡಿ ತಾಲೂಕಿನಲ್ಲೂ ಮುಂದೊಂದು ದಿನ ಸೇತುವೆಗಳು ಕುಸಿದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಹೇಳಲಾಗಿದೆ.