ಬೆಳ್ತಂಗಡಿ; ಧರ್ಮಸ್ಥಳ ಸೇವಾ ಸಹಕಾರಿ ಸಂಘದ ಪಿಗ್ಮಿ ಸಂಗ್ರಾಹಕ ಜಗದೀಶ್ ರಾವ್(40) ಧರ್ಮಸ್ಥಳದ ತನ್ನ ಮನೆಯ ಸಮೀಪವೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿತ್ಯನಿಧಿ ಸಂಗ್ರಹದ ಜೊತೆಗೆ ಅವರು ಕನ್ಯಾಡಿಯಲ್ಲಿ ವಾಹನಗಳ ವಾಯು ಮಾಲಿನ್ಯ ತಪಾಸಣೆ ಕೇಂದ್ರ ಕೂಡ ಹೊಂದಿದ್ದರು.
ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.
ಈ ಸಂಬಂಧ ಮೃತರ ಪತ್ನಿ ಮಧು ಅವರು
ಧರ್ಮಸ್ಥಳ ಪೋಲೀಸರಿಗೆ ದೂರು ನೀಡಿದ್ದು, ಪತಿ ಅನೇಕ ಮಂದಿಯಿಂದ ಕೈಸಾಲ ಮಾಡಿಕೊಂಡಿದ್ದಾರೆ. ಅಲ್ಲದೆ ಉಜಿರೆಯ ಎಸ್.ಎಲ್.ವಿ ಫೈನಾನ್ಸ್ ನಲ್ಲಿ ನನ್ನ ಚಿನ್ನವನ್ನು ಅಡವಿಟ್ಟು 15 ಲಕ್ಷ ರೂ ಸಾಲ ಪಡೆದಿದ್ದಾರೆ ಎಂದು ವಿವರಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ತನಿಖೆ ಆರಂಭವಾಗಿದೆ.
ಸದ್ರಿ ಬ್ಯಾಂಕಿನ ಸಿಇಒ ಅವರೂ ಕೂಡ ಇತ್ತೀಚೆಗೆ ಬ್ಯಾಂಕಿನ ಸಭಾಂಗಣದ ಒಳಗೆಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಬೆನ್ನಿಗೇ ಬ್ಯಾಂಕಿನ ನಿರ್ದೇಶಕರು ಹಾಗೂ ಸಿಬ್ಬಂದಿಯ ವಿರುದ್ಧವೇ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಕೇಸು ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ಕೂಡ ನೀಡಿತ್ತು. ಈ ಮಧ್ಯೆ ಅಲ್ಪ ದಿನಗಳ ಅಂತರದಲ್ಲಿ ಮತ್ತೋರ್ವ ನೇಣು ಬಿಗಿದುಕೊಂಡಿದ್ದು ಜನರ ಬಾಯಲ್ಲಿ ವಿಭಿನ್ನ ಚರ್ಚೆಗಳು ಆರಂಭವಾಗಿದೆ.