ಬೆಳ್ತಂಗಡಿ; ಚಾರ್ಮಾಡಿ ಗ್ರಾಮಸಹಿತ ತಾಲೂಕಿನ 8 ಪಂಚಾಯತ್ ಗಳಲ್ಲಿ 50 ಕ್ಕಿಂತ ಅಧಿಕ ಕೊವಿಡ್ ಪ್ರಕರಣಗಳು ಚಾಲ್ತಿಯಲ್ಲಿರುವುದರಿಂದ ಸೀಲ್ ಡೌನ್ ಘೋಷಣೆ ಯಾದ ಬೆನ್ನಿಗೇ ಸೋಮವಾರ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್ ಕುಮಾರ್ ಭೇಟಿ ನೀಡಿದ್ದು ಈ ವೇಳೆ ನಡೆದ ಸಭೆಯಲ್ಲಿ ನೆರಿಯ ಗ್ರಾ.ಪಂಚಾಯತ್ ನ ಸೀಲ್‌ಡೌನ್ ತೀರ್ಮಾನವನ್ನು ಹಿಂತೆಗೆದುಕೊಂಡ ವಿದ್ಯಮಾನ ನಡೆದಿದೆ.
ಆದರೆ ಇದೀಗಾಗಲೇ ವಾರದಿಂದ ಸ್ವಯಂ ಸೀಲ್ ಡೌನ್ ಹೇರಿಕೊಂಡಿದ್ದ ಕೊಯ್ಯೂರು ಗ್ರಾಮ ಪಂಚಾಯತ್ ರವಿವಾರ ಮತ್ತೆ ತೆರೆದುಕೊಂಡಿರುವಂತೆಯೇ ಡಿಸಿ ಅವರ ನೂತನ ಆದೇಶ ಕೊಯ್ಯೂರು ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಚಾರ್ಮಾಡಿ ಗ್ರಾ.ಪಂ ಸಭಾಂಗಣದಲ್ಲಿ ಸೋಮವಾರ ಸಿಇಒ ಎಸ್ ಕುಮಾರ್ ಅವರು ಸಭೆ ನಡೆಸಿದ ವೇಳೆ ನೆರಿಯ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಯಿಂದ ಅಧಿಕಾರಿಯ ಗಮನಸೆಳೆಯಲಾಯಿತು.
ನೆರಿಯದಲ್ಲಿ ಅತೀ ಹೆಚ್ಚು ಪ್ರಕರಣಗಳು ಇರುವುದು ಸಿಯೋನ್ ಆಶ್ರಮದಲ್ಲಿ.ಆದರೆ ಅವರೆಲ್ಲರೂ ಧರ್ಮಸ್ಥಳದ ರಜತಾದ್ರಿಯಲ್ಲಿ ಹಾಗೂ ವಿವಿಧ ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿದ್ದಾರೆ. ಹಾಗಿರುವಾಗ ಸಂಖ್ಯಾ ಆಧಾರದಲ್ಲಿ ಇಲ್ಲಿ ಸೀಲ್ ಡೌನ್‌ನ ಆವಶ್ಯಕತೆ ಇಲ್ಲ ಎಂದು ಮನವರಿಕೆ ಮಾಡಿಕೊಡುವಲ್ಲಿ ನೆರಿಯ ಗ್ರಾ.ಪಂ ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಕುಶಲಾ ಹಾಗೂ ಸರ್ವ ಪಕ್ಷದ ಸದಸ್ಯರು ಯಶಸ್ಸಾದ ಹಿನ್ನೆಲೆಯಲ್ಲಿ ಸಿಇಒ ಅವರು ಆದೇಶವನ್ನು ಹಿಂಪಡೆದುಕೊಂಡರು.
ಸಭೆಯಲ್ಲಿ ಪಿ.ಡಿ.ಓ. ಗಾಯತ್ರಿ ಮತ್ತು ಗ್ರಾಮ ಕರಣಿಕ ಸತೀಶ್ , ಕಾರ್ಯದರ್ಶಿ ಅಜಿತ್ ಎಂ ಬಿ, ಅದರಂತೆ ಸದಸ್ಯರಾದ ಬಾಬು ಗೌಡ, ಬಿ.ಅಶ್ರಫ್, ಮಹಮ್ಮದ್ ಪಿ, ತೋಮಸ್ ವಿ. ಡಿ, ರಮೇಶ್ ಕೆ. ಎಸ್, ಸಚಿನ್, ದಿನೇಶ್, ರೀನಾ ಶಿಜು, ಸಜಿತಾ, ಸವಿತಾ, ಸುಮಂಗಲ, ಆಶೋಕ್, ಮರಿಯಮ್ಮ , ಮಾಲತಿ, ವೇದಾವತಿ ಮೊದಲಾದವರು ಉಪಸ್ಥಿತರಿದ್ದರು.
ಸೀಲ್‌ಡೌನ್ ತೀರ್ಮಾನ ಹಿಂದಕ್ಕೆ ಪಡೆದುಕೊಂಡರೂ ಎಂದಿನಂತೆ ಲಾಕ್ ಡೌನ್ ಇರುತ್ತದೆ . ಮತ್ತು ಕೊರೋನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಬೇಕಾಗುತ್ತದೆ ಎಂದು ಪಂಚಾಯತ್ ಆಡಳಿತ ಮಂಡಳಿ ತಿಳಿಸಿದೆ.
ಚಾರ್ಮಾಡಿ ಜನತೆಯಿಂದ ಆಕ್ರೋಶ;
ನೆರಿಯ ಮತ್ತು ಚಾರ್ಮಾಡಿ ಪಂಚಾಯತ್ ಗಳು ಸೀಲ್‌ಡೌನ್ ಗೆ ಆದೇಶಿಸಲ್ಪಟ್ಟಿತ್ತಾದರೂ ಕೇವಲ ನೆರಿಯ ಪಂಚಾಯತ್ ಅನ್ನು ಆದೇಶದಿಂದ ವಿರಹಿತಗೊಳಿಸಿದ ಬಗ್ಗೆ ಚಾರ್ಮಾಡಿ ಪಂಚಾಯತ್ ವ್ಯಾಪ್ತಿಯ ಜನತೆಯಿಂದ ವಿರೋಧ ಕೇಳಿಬಂದಿದೆ. ನೆರಿಯದವರು ವಾದ ಮಂಡಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರೆ ಚಾರ್ಮಾಡಿ ಗ್ರಾ.ಪಂ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲವೇ ಎಂಬ ಪ್ರಶ್ನೆ ಜಾಲತಾಣಗಳ ಮೂಲಕ ಕೇಳಲಾಗಿದೆ.
ಕೊಯ್ಯೂರು ಗೊಂದಲ!?
ಕೊಯ್ಯೂರು ಪಂಚಾಯತ್ ನವರು ಸ್ವಯಂ ಘೋಷಿಸಿಕೊಂಡಿದ್ದ ಸೀಲ್‌ಡೌನ್ ರವಿವಾರ ಪೂರ್ಣಗೊಂಡು ಸಹಜ ಸ್ಥಿತಿಗೆ ಮರಳಿತ್ತು. ಈ ಪ್ರದೇಶದಲ್ಲಿ ಪತ್ರಿಕೆ ಮತ್ತು ಹಾಲು ಕೂಡ ವಿತರಣೆಗೆ ಪಂಚಾಯತ್ ಅಡ್ಡಿಪಡಿಸಿದೆ ಎಂದು ದೂರುಗಳೂ ಕೇಳಿಬಂದಿದ್ದವು. ಈ ಮಧ್ಯೆ ಸೋಮವಾರದಿಂದ ಜಿಲ್ಲಾಧಿಕಾರಿ ಆದೇಶ ಪಾಲನೆ ಮಾಡಬೇಕಾಗಿ ಬಂದಿದ್ದು, ಮತ್ತೆ ವಾರ ಕಾಲ ಕೊಯ್ಯೂರು ಗ್ರಾಮ ಮುಚ್ಚಲಿದೆ. ಇದರಿಂದ ಊರವರಲ್ಲಿ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.